ಮಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ನ. 30ರಂದು ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಅಕ್ರಮ್ ವೈಖರ್ ಎನ್ನುವ ಇ-ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿದ್ದು, ಟರ್ಮಿನಲ್‌ನಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬೆದರಿಕೆ ಒಡ್ಡಲಾಗಿದೆ.
ನಿಲ್ದಾಣದ ಸಿಐಎಸ್‌ಎಫ್ ಸಿಬಂದಿ ಟರ್ಮಿನಲ್‌ನಲ್ಲಿ ಸೇರಿದಂತೆ ನಿಲ್ದಾಣದ ವಿವಿಧೆಡೆ ಶೋಧ ನಡೆಸಿದ್ದು, ಯಾವುದೇ ಬಾಂಬ್ ಸ್ಫೋಟಕಗಳು ಪತ್ತೆಯಾಗಿಲ್ಲ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇ-ಮೇಲ್ ಸಂದೇಶದಲ್ಲಿ ತಮಿಳು ನಾಡಿನಲ್ಲಿ ಬಂಧನಕ್ಕೀಡಾಗಿರುವ ಡ್ರಗ್ ಕಿಂಗ್‌ಪಿನ್ ಎನ್ನಲಾದ ಜಾಫರ್ ಸಾದಿಕ್ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಪತ್ನಿ, ಚಿತ್ರ ನಿರ್ಮಾಪಕಿ ಕೃತಿಗಾ ಉದಯನಿಧಿ ಅವರ ಮೇಲಿರುವ ಪ್ರಕರಣವನ್ನು ವಾಪಸ್ ಪಡೆಯಬೇಕು. ತಿರುಚ್ಚಿ ಸೆಂಟ್ರಲ್ ಜೈಲಿನಲ್ಲಿರುವ ಟಿಎನ್‌ಎಲ್‌ಎ ಉಗ್ರ ಸಂಘಟನೆಯ ಮುಖ್ಯಸ್ಥ ಎಸ್. ಮಾರನ್‌ನನ್ನು ಬಿಡುಗಡೆ ಮಾಡಬೇಕು ಎನ್ನುವ ಬೇಡಿಕೆ ಇಡಲಾಗಿದೆ ಎಂದು ತಿಳಿದು ಬಂದಿದೆ.
ಇದೇ ರೀತಿಯ ಬೆದರಿಕೆ ಸಂದೇಶ ಕಳೆದ ಅ. 25ರಂದು ತಿರುಪತಿಯ ಮೂರು ಹೊಟೇಲ್‌ಗಳಿಗೆ ಬಂದಿತ್ತು. ಅದರಲ್ಲಿಯೂ ಜಾಫರ್ ಸಾದಿಕ್ ಮತ್ತು ಕೃತಿಕಾ ಉದಯನಿಧಿ ಹೆಸರು ಉಲ್ಲೇಖ ಆಗಿತ್ತು. ಈ ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ವಿಚಾರ ಇರುವುದರಿಂದ ಈ ಕೃತ್ಯದಲ್ಲಿ ಅಲ್ಲಿನವರೇ ಇರುವ ಸಾಧ್ಯತೆಯಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಈ ಹಿಂದೆ ಹಲವು ಬಾರಿ ಬಾಂಬ್ ಬೆದರಿಕೆಯ ಇ-ಮೇಲ್‌ಗಳು ಬಂದಿವೆ.