ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಮಂಗಳೂರಿನ ನ್ಯಾಯಾಲಯವು 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಾಸರಗೋಡು ಚೆರ್ಕಳದ ರಾಜೀವ್ ಪಿ.ಎಂ. (37) ಶಿಕ್ಷೆಗೊಳಗಾದ ಆರೋಪಿ. 2019ರ ಜೂ. 28ರಂದು ಬಾಲಕಿ ಟ್ಯೂಷನ್ ಮುಗಿಸಿ ಮನೆ ಕಡೆಗೆ ಹೋಗುತ್ತಿದ್ದಾಗ ಲೇಡಿಹಿಲ್‌ನಿಂದ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿ ರಸ್ತೆಯ ಬಳಿ ಅಡ್ಡಗಟ್ಟಿ ಕೈಯನ್ನು ಹಿಡಿದು ಎಳೆದಿದ್ದ. ಬಾಲಕಿ ಬಿಡಿಸಲು ಯತ್ನಿಸಿದಾಗ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ನಿರೀಕ್ಷಕ ಉಮೇಶ್ ಉಪ್ಪಳಿಕೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಎಫ್ಟಿಎಸ್‌ಸಿ-1 ಪೋಕೊÕ) ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಆರೋಪಿಗೆ ಐಪಿಸಿ ಕಲಂ 341ರಂತೆ ಒಂದು ತಿಂಗಳ ಸಾದಾ ಸಜೆ, ಕಲಂ 354ರಡಿ ಒಂದು ವರ್ಷದ ಸಾದಾ ಸಜೆ ಮತ್ತು 1,000 ರೂ. ದಂಡ ಹಾಗೂ ಪೋಕೊÕ ಕಾಯ್ದೆ ಕಲಂ 8ರ ಅಡಿ ಮೂರು ವರ್ಷ ಸಾದಾ ಸಜೆ ಮತ್ತು 5,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ ಪರಿಹಾರಕ್ಕೆ ಆದೇಶ ನೀಡಿದ್ದಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ವಾದ ಮಂಡಿಸಿದ್ದರು.