Advertisement

Mangaluru: ಸೊಳ್ಳೆ ಸೆರೆ ಹಿಡಿಯಲು ಬಂದಿದೆ ಯಂತ್ರ ! 20 ವರ್ಷಗಳ ಸಂಶೋಧನೆ ಫಲ…

05:31 PM Jul 25, 2024 | Team Udayavani |

ಮಹಾನಗರ: “ಡೆಂಗ್ಯೂ ನಿಯಂತ್ರಣಕ್ಕೆ ಈಡಿಸ್‌ ಸೊಳ್ಳೆ ನಾಶವೊಂದೇ ಮದ್ದು’ ಎಂದು ಆರೋಗ್ಯ ಇಲಾಖೆ ಹೇಳುತ್ತಿದ್ದು, ಅದಕ್ಕೆ ತಕ್ಕಂತೆ ಮಂಗಳೂರಿನ ವ್ಯಕ್ತಿಯೊಬ್ಬರು ಸೊಳ್ಳೆ ಹಿಡಿಯುವ ಯಂತ್ರವೊಂದನ್ನು ಅನ್ವೇಷಿಸಿದ್ದಾರೆ. ನಗರ ಭಾಗದಲ್ಲಿ ಅದರಲ್ಲೂ ಹೆಚ್ಚಿನ ಸೊಳ್ಳೆ ಇರುವ ಕಡೆ ಮಳೆಗಾಲ ಪೂರ್ಣಗೊಳ್ಳುವವರೆಗೆ ಈ ಯಂತ್ರವನ್ನು ಉಪಯೋಗಿಸಲು ಸಾರ್ವಜನಿಕರಿಗೆ ಉಚಿತವಾಗಿ ನೀಡಲು ಅವರು ತಯಾರಿದ್ದಾರೆ.

Advertisement

ಕೊಟ್ಟಾರದ ಓರ್ವಿನ್‌ ನೊರೊನ್ಹಾ ಅವರು 20 ವರ್ಷಗಳ ಸಂಶೋಧನೆ ನಡೆಸಿ ರಾಸಾಯನಿಕ ಮುಕ್ತ “ಮೊಝಿಕ್ವಿಟ್‌’ ಎಂಬ ಹೆಸರಿನ ಯಂತ್ರವೊಂದನ್ನು ತಯಾರು ಮಾಡಿದ್ದಾರೆ. ವಿದ್ಯುತ್‌ಚಾಲಿತ ಯಂತ್ರ ಇದಾಗಿದ್ದು, ಕಿರಿದಾದ ಗಾತ್ರ ಹೊಂದಿದೆ. ಈ ಯಂತ್ರ ಪ್ಲಾಸ್ಟಿಕ್‌ನಿಂದ ಕೂಡಿದ್ದು, ಉತ್ಪಾದನೆಯ ವೇಳೆ ಫುಡ್‌ ಗ್ರೇಡ್‌ ಪುಡಿಯನ್ನು ಯಂತ್ರದ ಹೊರ ಭಾಗದಲ್ಲಿರುವ ಪ್ಲಾಸ್ಟಿಕ್‌ ಉತ್ಪನ್ನದ ಮೇಲೆ ಮಿಶ್ರಣ ಮಾಡಲಾಗಿರುತ್ತದೆ.

ಯಂತ್ರದ ಒಳಗಿರುವ ಮೋಟರ್‌ ವಿದ್ಯುತ್‌ ಸಂಪರ್ಕ ಅಳವಡಿಸಿದಾಗ ತಿರುಗುತ್ತದೆ. ಆಗ ಅದು ಹೊರಸೂಸುವ ಬೆಳಕು ಸೊಳ್ಳೆಗಳನ್ನು ಆಕರ್ಷಿಸುತ್ತದೆ. ಮೋಟರ್‌ ಫ್ಯಾನ್‌ ಸೊಳ್ಳೆಯನ್ನು ತಮ್ಮ ಯಂತ್ರದತ್ತ ಎಳೆಯುತ್ತದೆ. ಆ ಸೊಳ್ಳೆ ಸಂಗ್ರಹದ ಕಂಟೈನರ್‌ನಲ್ಲಿ ಸಿಲುಕುತ್ತದೆ. ಸ್ವಲ್ಪ ಸಮಯದ ಬಳಿಕ ಡಿಹೈಡ್ರೇಶನ್‌, ಆಹಾರ ಸಿಗದ ಕಾರಣ ಸೊಳ್ಳೆ ಸತ್ತು ಹೋಗುತ್ತದೆ. ಈ ಯಂತ್ರದ ಮೂಲಕ ಸೊಳ್ಳೆ ಹಿಡಿಯಲ್ಪಟ್ಟಾಗ ಸೊಳ್ಳೆಯ ದೇಹದ ಯಾವುದೇ ಭಾಗಗಳು ಬೇರ್ಪಡುವುದಿಲ್ಲ.

ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮಲೇರಿಯಾ ರಿಸರ್ಚ್‌ ಮತ್ತು ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರಿಸರ್ಚ್‌ನಿಂದ ಈಗಾಗಲೇ ಈ ಯಂತ್ರವನ್ನು ಪರಿಶೀಲಿಸಲಾಗಿದೆ. ರಾಷ್ಟ್ರೀಯ ಕೀಟ ಬಾಧಿತ ಕಾಯಿಲೆ ನಿಯಂತ್ರಣ ಕಾರ್ಯಕ್ರಮದಡಿ ಈ ಯಂತ್ರವನ್ನು ಅಳವಡಿಸಿಲು ಇಗ್ನೇಶಿಯಸ್‌ ಆರ್ವಿನ್‌ ಅವರು ಮನವಿ ಮಾಡಿದ್ದು, ಸದ್ಯಕ್ಕೆ ಇದು ಅನುಷ್ಠಾನಕ್ಕೆ ತಂದಿಲ್ಲ.

Advertisement

ಯುಎಸ್‌ಎಐಸಿ ಸ್ಕಾರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ಸಾಸ್‌ ಅವರು ಈ ಯಂತ್ರವನ್ನು ಸೊಳ್ಳೆಯ ನಾಶಕ್ಕೆ ಉಪಯೋಗಿಸಬಹುದು ಎಂದು ಚಿನ್ನದ ಪದಕ ನೀಡಿ ಪ್ರಶಂಶಿಸಿದ್ದಾರೆ. ಜಿನೋವಾದಲ್ಲಿಯೂ ಈ ಯಂತ್ರ ಪ್ರದರ್ಶನಗೊಂಡಿದೆ.

ದನದ ಸೊಳ್ಳೆ ಕಡಿತಕ್ಕೂ ಮುಕ್ತಿ; ಲಿಮ್ಕಾ ದಾಖಲೆ ಮೊಝಿಕ್ವಿಟ್‌ ಯಂತ್ರವನ್ನು ಬೀದರ್‌ನ ಕರ್ನಾಟಕ ಪಶುಸಂಗೋಪನೆ ಮತ್ತು ಮೀನುಗಾರಿಕೆ ವಿ.ವಿ. ಈಗಾಗಲೇ ಪರಿಶೀಲನೆ ನಡೆಸಿದೆ. ದನದ ಹಟ್ಟಿಯಲ್ಲಿ ಉಪಯೋಗ ಮಾಡಿದ ಬಳಿಕ ದನಗಳಿಗೆ ಸೊಳ್ಳೆ ಕಡಿತದಿಂದ ಮುಕ್ತಿ ಸಿಕ್ಕಿದ್ದು, ಹಾಲಿನ ಇಳುವರಿಯೂ ಹೆಚ್ಚಾಗಿದೆ ಎಂದು ಲಿಖಿತ ಮೌಲ್ಯ ಮಾಪನ ವರದಿ ನೀಡಿದೆ. ಕೆಲವು ವರ್ಷದ ಹಿಂದೆ ಕೆಂಜಾರುವಿನ ಕ್ಲೆಮೆಂಟ್‌ ಲೋಬೋ ಅವರ 16 ದನ ಇರುವ ಹಟ್ಟಿಯಲ್ಲಿ ಮೂರು ತಿಂಗಳ ಕಾಲ ಈ ಯಂತ್ರವನ್ನು ಇಡಲಾಗಿದ್ದು, ಈ ಯಂತ್ರದ ಮೂಲಕ ಹಿಡಿದ ಸತ್ತ ಸೊಳ್ಳೆ ಜಾರ್‌ನಲ್ಲಿ ತುಂಬಿಸಿಡಲಾಗಿತ್ತು. ಒಟ್ಟು 10 ಜಾರ್‌
ಸೊಳ್ಳೆ ಹಾಕಿ ಅದರಲ್ಲಿ ರಾಶಿ ರಾಶಿ ಕೋಟಿ ಸೊಳ್ಳೆ ಹಿಡಿದಿರುವುದು ಅಂದಾಜಿಸಲಾಗಿದೆ. ಲಿಮ್ಕಾದಿಂದ ಇದನ್ನು ಪರಿಶೀಲಿಸಿ ಲಿಮ್ಕಾ ಪುಸ್ತಕದಲ್ಲಿ ದಾಖಲು ಮಾಡಿದ್ದಾರೆ.

ಎಲ್ಲಿ ಸಂಪರ್ಕ ಮಾಡಬಹುದು?
ಈ ಯಂತ್ರವನ್ನು ಪಡೆಯಲು ಕೊಟ್ಟಾರದ ಜಿಲ್ಲಾ ಪಂಚಾಯತ್‌ ತಿರುವು ಎದುರಿನ ಪೃಥ್ವಿ ರಿಜೆನ್ಸಿಯಲ್ಲಿ ಕಾರ್ಯಾಚರಿಸುತ್ತಿರುವ “ಮೊಝಿಕ್ವಿಟ್‌’ ಕಚೇರಿ ಸಂಪರ್ಕ ಮಾಡಬಹುದು.

ಅಮ್ಮನೇ ಪ್ರೇರಣೆ; ಬಿಡದ ಛಲ ಓರ್ವಿನ್‌ ನೊರೊನ್ಹಾ ಅವರ ತಾಯಿಗೆ ಈ ಹಿಂದೆ ಪೈಲೇರಿಯ ಬಂದು ಕಾಲು ಊದಿಕೊಂಡಿತ್ತು. ಈ ರೋಗಕ್ಕೆ ಸೊಳ್ಳೆ ಕಾರಣ ಎಂದು ಅಮ್ಮ ಹೇಳಿದಾಗಲೇ ಸೊಳ್ಳೆ ನಾಶದ ಸಂಕಲ್ಪ ಅವರದ್ದಾಗಿತ್ತು. ಸೊಳ್ಳೆ ನಾಶಪಡಿಸಲು ಯಂತ್ರ ಬೇಕು ಎಂಬ ಉದ್ದೇಶಕ್ಕೆ ಅಮೆರಿಕಾದ ಮೊಸ್ಕಿಟೋ ಮ್ಯಾಗ್ನೆಟ್‌ ಎಂಬ ಯಂತ್ರವನ್ನು ನೋಡಿದ್ದಾರೆ.
ಅದಕ್ಕೆ ಬರೋಬ್ಬರಿ 1.10 ಲಕ್ಷ ರೂ. ಮತ್ತು ನಿರ್ವಹಣೆಗೆ ತಿಂಗಳಿಗೆ 5 ಸಾವಿರ ರೂ. ಬೇಕು ಎಂದು ತಿಳಿದು, ಕಡಿಮೆ ಖರ್ಚಿನಲ್ಲಿ ನಾನೇ ಹೊಸ ಯಂತ್ರ ಅನ್ವೇಷಿಸುತ್ತೇನೆ ಎಂದು ಅಂದುಕೊಂಡಿದ್ದರು. ಅದರಂತೆ ಅವರು 20 ವರ್ಷಗಳಿಂದ ಈ ಯಂತ್ರದ
ಸಂಶೋಧನೆಯಲ್ಲಿ ತೊಡಿಗಿದ್ದಾರೆ.

ಉಚಿತವಾಗಿ ನೀಡುವೆ
ಕಳೆದ ಕೆಲವು ವಾರಗಳಿಂದ ಡೆಂಗ್ಯೂ ಹೆಚ್ಚುತ್ತಿದ್ದು, ಇದನ್ನು ತಡೆಯಲು ಸೊಳ್ಳೆಯನ್ನು ನಿಯಂತ್ರಿಸಬೇಕು. ಈ ನಿಟ್ಟಿನಲ್ಲಿ
ನಾನು ಈಗಾಗಲೇ “ಮೊಝಿಕ್ವಿಟ್‌’ ಎಂಬ ಹೆಸರಿನ ಯಂತ್ರವನ್ನು ರೂಪಿಸಿದ್ದೇನೆ. ಈಗಾಗಲೇ ಹಲವು ಕಡೆ ಈ ಯಂತ್ರ ಪ್ರದರ್ಶನಕ್ಕೆ ಇಡಲಾಗಿದ್ದು, ಸೊಳ್ಳೆ ನಿಯಂತ್ರಣದ ಹಿನ್ನೆಲೆಯಲ್ಲಿ ಕೆಲ ತಿಂಗಳ ಕಾಲ ಸಾರ್ವಜನಿಕರಿಗೆ ಈ ಯಂತ್ರ
ಉಚಿತವಾಗಿ ನೀಡುತ್ತೇನೆ. ಡೆಂಗ್ಯೂ ತೀವ್ರತೆ ಕಡಿಮೆಯಾದ ಬಳಿಕ ಹಿಂತಿರುಗಿಸಬೇಕು. ರಾಜ್ಯ ಮಟ್ಟದಲ್ಲಿ ಈ ಯಂತ್ರ ಅನುಷ್ಠಾನಕ್ಕೆ ತರಲು ಸರಕಾರದ ಸಹಕಾರ ಬೇಕು.
*ಓರ್ವಿನ್‌ ನೊರೊನ್ಹಾ

*ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next