Advertisement

Mangaluru: 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ ಆರಂಭ

10:22 PM Sep 10, 2024 | Team Udayavani |

ಮಂಗಳೂರು: ಭಾರತೀಯ ಈಜು ಒಕ್ಕೂಟ (ಎಸ್‌ಎಫ್‌ಐ) ಹಾಗೂ ಕರ್ನಾಟಕ ಈಜು ಸಂಸ್ಥೆಯ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಆಯೋಜಿಸಲಾದ 77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್‌ಗೆ ಮಂಗಳವಾರ ಚಾಲನೆ ದೊರೆಯಿತು.

Advertisement

ಉದ್ಘಾಟಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮಾತನಾಡಿ, “ಮಂಗಳೂರಿನಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಈ ಚಾಂಪಿ ಯನ್‌ಶಿಪ್‌ ನಡೆಯುತ್ತಿದ್ದು, ಹೆಮ್ಮೆಯ ಕ್ಷಣವಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ ಒಲಿಂಪಿಕ್‌ ಮಾದರಿಯ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣಗೊಂಡಿದೆ. ಶೈಕ್ಷಣಿಕ ಹಬ್‌ ಆಗಿರುವ ಮಂಗಳೂರಿನಲ್ಲಿ ಈ ರೀತಿಯ ಮತ್ತಷ್ಟು ಈಜು ಸ್ಪರ್ಧೆ ನಡೆಯಬೇಕು. ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು’ ಎಂದರು.

ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್‌ ಚಂದ್ರ ಆಳ್ವ, ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಎಸ್‌ಎಫ್‌ಐ ಹಿರಿಯ ಉಪಾಧ್ಯಕ್ಷ ವೀರೇಂದ್ರ ನಾನಾವಳಿ, ಕರ್ನಾಟಕ ಸ್ವಿಮ್ಮಿಂಗ್‌ ಅಸೋಸಿಯೇಶನ್‌ ಅಧ್ಯಕ್ಷ ಗೋಪಾಲ್‌ ಹೊಸೂರು, ಮಂಗಳೂರು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜು ಕೆ., ಸ್ಮಾರ್ಟ್‌ ಸಿಟಿ ಜನರಲ್‌ ಮ್ಯಾನೇಜರ್‌ ಅರುಣ ಪ್ರಭ, ಯುವಜನ ಸೇವೆ ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್‌ ಡಿಸೋಜ, ಪಾಲಿಕೆ ಸದಸ್ಯರಾದ ದಿವಾಕರ್‌ ಪಾಂಡೇಶ್ವರ, ರೇವತಿ ಶ್ಯಾಮ್‌ಸುಂದರ್‌ ಸಹಿತ ಮತ್ತಿತರರು ಉಪಸ್ಥಿತರಿದ್ದರು.

450ಕ್ಕೂ ಅಧಿಕ ಕ್ರೀಡಾಪಟುಗಳು

ಕ್ರೀಡಾಕೂಟದಲ್ಲಿ 31 ರಾಜ್ಯಗಳ ಸುಮಾರು 450ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿಯಾಗಿದ್ದಾರೆ. ಕರ್ನಾಟಕದ ಒಲಿಂಪಿಯನ್‌ ಹಾಗೂ ಬ್ಯಾಕ್‌ಸ್ಟ್ರೋಕ್‌ ಈಜುಪಟು ಶ್ರೀಹರಿ ನಟರಾಜ್‌, ರಾಷ್ಟ್ರೀಯ ದಾಖಲೆ ಪಟು ಮತ್ತು ಫ್ರೀಸ್ಟೈಲ್‌ ಸ್ಪೆಷಲಿಸ್ಟ್‌ ಅನೀಶ್‌ ಗೌಡ ಅವರು ಭಾಗವಹಿಸಿದ್ದಾರೆ.  ದೇಶದ ಭರವಸೆಯ ಈಜುಪಟುಗಳಾದ ಎಸ್‌. ಸಿವ, ಪೃಥ್ವಿ, ಮಿಹಿರ್‌ ಅಮ್ರೆ, ರಿಷಬ್‌ ದಾಸ್‌, ದೇವಾಂಶ್‌ ಪರ್ಮಾರ್‌, ಧನುಷ್‌ ಎಸ್‌., ಸೋನು ದೇಬ್‌ನಾಥ್‌ ಭಾಗವಹಿಸಲಿದ್ದಾರೆ. ಮಹಿಳಾ ಈಜು ಪಟುಗಳಾದ ಹರ್ಷಿತಾ ಜಯರಾಂ, ಮನವಿ ವರ್ಮಾ, ಪ್ರತಿಷ್ಟ ದಾಂಗಿ, ಆಸ್ತಾ ಚೌಧುರಿ, ವೃಟ್ಟಿ ಅಗ್ರವಾಲ್‌, ಅಂತಿಕಾ ಚವಾನ್‌, ಶಿವಾಂಗಿ ಶರ್ಮ ಮತ್ತು ಭವ್ಯಾ ಸಹದೇವ್‌ ಅವರು ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದಾರೆ.

Advertisement

ಕರ್ನಾಟಕ ಅಗ್ರಸ್ಥಾನ

ಮೊದಲ ದಿನ ಕರ್ನಾಟಕ 9 ಪದಕ ಗೆದ್ದು ಅಗ್ರಸ್ಥಾನದಲ್ಲಿದೆ. ಮಹಿಳೆಯರ ವಿಭಾಗದ 400 ಮೀ. ಪ್ರೀ ಸ್ಟೈಲ್‌ನಲ್ಲಿ ಕರ್ನಾಟಕದ ಹಾಶಿಕಾ ರಾಮಚಂದ್ರ 4.24 ನಿಮಿಷದಲ್ಲಿ ಗುರಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next