Advertisement

Mangaluru ವಿ.ವಿ.ಗಳ ಕಾರ್ಯಭಾರಕ್ಕೆ ಕಾಡುತ್ತಿದೆ “ಹುದ್ದೆ’ ಕೊರತೆ!

12:01 AM Feb 11, 2024 | Team Udayavani |

ಮಂಗಳೂರು: ವಿಶ್ವವಿದ್ಯಾನಿಲಯಗಳಲ್ಲಿ ತರಹೇ ವಾರಿ ಕೋರ್ಸ್‌ಗಳ ಕಾರ್ಯಭಾರ ಒಂದೆಡೆ ಜಾಸ್ತಿಯಾಗುತ್ತಿದ್ದರೆ ಮತ್ತೊಂದೆಡೆ ಹೊಸ ಹೊಸ ಶಿಕ್ಷಣ ಕ್ರಮ ಜಾರಿಗೆ ಬರುತ್ತಿದೆ. ಆದರೆ ಅದಕ್ಕನುಗುಣವಾಗಿ ಬೋಧಕರ ನೇಮಕ ಆಗುತ್ತಿಲ್ಲ.

Advertisement

ಇತ್ತ ಬೋಧಕರಿಲ್ಲ, ಅತ್ತ ಬೋಧಕೇತರರೂ ಇಲ್ಲ, ಪರೀಕ್ಷೆ-ಫಲಿತಾಂಶದಲ್ಲಿಯೂ ವ್ಯತ್ಯಾಸ ಸಹಿತ ಹಲವು ಜಂಜಾಟ ಎದುರಾಗುತ್ತಲೇ ಇದ್ದು ವಿದ್ಯಾರ್ಥಿಗಳ ಕಲಿಕೆಗೆ ದೊಡ್ಡ ಹೊಡೆತ ಬೀಳುವಂತಾಗಿದೆ. ವಿ.ವಿ.ಗಳ ಶೈಕ್ಷಣಿಕ ಗುಣಮಟ್ಟ ಕಾಪಾಡುವುದೇ ಭಾರೀ ಹೊರೆಯಾಗಿ ಪರಿಣಮಿಸಿದೆ.

ರಾಜ್ಯದ 32 ವಿ.ವಿ.ಗಳಲ್ಲಿ ಬರೋಬ್ಬರಿ 1,111 ಸಹಾಯಕ ಪ್ರಾಧ್ಯಾಪಕ, 584 ಸಹ ಪ್ರಾಧ್ಯಾಪಕ ಹಾಗೂ 352 ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇವೆ. ಈ ಪೈಕಿ ಗರಿಷ್ಠ ಕೊರತೆ ಕರ್ನಾಟಕ ವಿ.ವಿ. ಹಾಗೂ ಮೈಸೂರು ವಿ.ವಿ.ಯಲ್ಲಿದೆ. ಕರ್ನಾಟಕ ವಿ.ವಿ.ಯಲ್ಲಿ 226, ಮೈಸೂರಿನಲ್ಲಿ 208 ಸಹಾಯಕ ಪ್ರಾಧ್ಯಾಪಕರು, ಅನುಕ್ರಮವಾಗಿ 115 ಹಾಗೂ 84 ಸಹಪ್ರಾಧ್ಯಾಪಕರು ಹಾಗೂ 44 ಮತ್ತು 64 ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇವೆ. ಬೆಂಗಳೂರು ವಿ.ವಿ.ಯಲ್ಲಿಯೂ ಅನುಕ್ರಮವಾಗಿ 110, 80, 44 ಹುದ್ದೆಗಳು ಖಾಲಿ ಇವೆ.

ಬೋಧಕೇತರರ ಕೊರತೆ
32 ವಿ.ವಿ.ಗಳಲ್ಲಿ ಬರೋಬ್ಬರಿ 5,298 ಬೋಧಕೇತರ ಹುದ್ದೆಗಳೂ ಖಾಲಿ ಇವೆ. ಇದರಲ್ಲಿಯೂ ಗರಿಷ್ಠ ಕೊರತೆ ಕರ್ನಾಟಕ ವಿ.ವಿ.ಯಲ್ಲಿ 989, ಮೈಸೂರು ವಿ.ವಿ. 870, ಬೆಂಗಳೂರು ವಿ.ವಿ.ಯಲ್ಲಿ 724 ಹುದ್ದೆ ಖಾಲಿ.
ನೂತನವಾಗಿ ಪ್ರಾರಂಭಿಸ ಲಾಗಿರುವ ಹಾಸನ, ಹಾವೇರಿ, ಕೊಪ್ಪಳ, ಬೀದರ್‌, ಚಾಮರಾಜನಗರ, ಕೊಡಗು ಹಾಗೂ ಬಾಗಲಕೋಟೆ ವಿ.ವಿ.ಗಳಿಗೆ ಅವುಗಳ ಮಾತೃ ವಿ.ವಿ.ಯಿಂದ 218 ಬೋಧಕರು ಹಾಗೂ 744 ಬೋಧಕೇತರರನ್ನು ವರ್ಗಾಯಿಸಲಾಗಿದೆ. ಆದರೆ ಅಲ್ಲಿಯೂ ಈಗ ಕೊರತೆ ಕಾಣಿಸಿಕೊಂಡಿದೆ.

ಉಪನ್ಯಾಸಕರೊಬ್ಬರು “ಉದಯ ವಾಣಿ’ ಜತೆಗೆ ಮಾತನಾಡಿ, “ಸರಕಾರ ದಿನಕ್ಕೊಂದು ಶಿಕ್ಷಣ ನೀತಿಯ ಬಗ್ಗೆ ಉಲ್ಲೇಖೀಸುತ್ತದೆ, ಹೊಸ ಹೊಸ ನಿಯಮ ಪ್ರಕಟಿಸುತ್ತದೆ. ಸರಕಾರ ಬದಲಾದಂತೆ ಮತ್ತೆ ಯಥಾಸ್ಥಿತಿ ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿ ವಿ.ವಿ. ಅಥವಾ ಕಾಲೇಜಿನ ಮೂಲ ಅಗತ್ಯವಾಗಿರುವ ಸಿಬಂದಿಯ ನೇಮಕಕ್ಕೆ ಮನಸ್ಸು ಮಾಡಲು ಸರಕಾರದ ನಿರಾಸಕ್ತಿ ಯಾಕೆ? ಬಹಳಷ್ಟು ಹುದ್ದೆ ಖಾಲಿ ಇರುವಾಗ ಇರುವ ಸಿಬಂದಿ ಎಲ್ಲ ಕೆಲಸವನ್ನೂ ನಿಭಾಯಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧಿಸುವುದು ಯಾವಾಗ? ಎಂಬ ಜಿಜ್ಞಾಸೆ ಇದೆ’ ಎನ್ನುತ್ತಾರೆ.

Advertisement

ಅಂದಹಾಗೆ ಅರೆಕಾಲಿಕ ಹಾಗೂ ಗುತ್ತಿಗೆ ಆಧಾರದಲ್ಲಿ ಮೈಸೂರಿನಲ್ಲಿ ಗರಿಷ್ಠ 1,456, ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ 1,259 ಮಂದಿ ನೌಕರರು ಹಾಗೂ ಉಪನ್ಯಾಸಕರು ಕರ್ತವ್ಯದಲ್ಲಿದ್ದಾರೆ. ಮಂಗಳೂರಿನಲ್ಲಿ 369 ಮಂದಿ ಇದ್ದಾರೆ.

ಮಂಗಳೂರು ವಿ.ವಿ.ಯಲ್ಲಿ ಶೇ. 50ಕ್ಕೂ ಅಧಿಕ ಹುದ್ದೆ ಖಾಲಿ!
ಮಂಗಳೂರು ವಿ.ವಿ.ಗೆ 1980ರಲ್ಲಿ ಮಂಜೂರಾದ 273 ಖಾಯಂ ಹುದ್ದೆಗಳ ಪೈಕಿ 144 ಹುದ್ದೆ ಭರ್ತಿಯಾಗಿವೆ. 129 ಹುದ್ದೆ ಖಾಲಿ ಇವೆ. ಬೋಧಕೇತರರಲ್ಲಿ ಮಂಜೂರಾದ 547 ಹುದ್ದೆಗಳ ಪೈಕಿ 189 ಹುದ್ದೆ ಮಾತ್ರ ಭರ್ತಿಯಾಗಿದ್ದು, 358 ಹುದ್ದೆ ಖಾಲಿ ಇವೆ. ಈ ಮೂಲಕ ಮಂಜೂರಾದ ಸಂಖ್ಯೆಯ ಶೇ. 50ರಷ್ಟು ಮಂದಿ ಸದ್ಯ ಹುದ್ದೆಯಲ್ಲಿಲ್ಲ. ಇದು ಮಂಗಳೂರು ವಿವಿಯ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ದೊಡ್ಡ ಹೊಡೆತ ಎನ್ನುವ ದೂರು ಕೇಳಿಬಂದಿದೆ.

ವಿಶ್ವವಿದ್ಯಾನಿಲಯಗಳ ವಿವಿಧ ಹುದ್ದೆಗಳಿಗೆ ನೇಮಕಾತಿಗೆ ನಿಯಮಾವಳಿ ರೂಪಿಸಲಾಗುತ್ತಿದ್ದು ಅಂತಿಮ ಹಂತದಲ್ಲಿದೆ. ಇದಾದ ಕೂಡಲೇ ಆಯಾಯ ವಿ.ವಿ.ಗಳ ಅಗತ್ಯಗಳನ್ನು ಪರಿಶೀಲಿಸಿಕೊಂಡು ನೇಮಕಾತಿ ನಡೆಸಲು ಸೂಕ್ತ ನಿರ್ದೇಶನ ನೀಡಲಾಗುವುದು. ಶೀಘ್ರವೇ ಹಂತ ಹಂತವಾಗಿ ಈ ಪ್ರಕ್ರಿಯೆ ನಡೆಸಲಾಗುವುದು.
– ಡಾ| ಎಂ.ಸಿ. ಸುಧಾಕರ್‌, ಉನ್ನತ ಶಿಕ್ಷಣ ಸಚಿವರು

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next