ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಪರೀಕ್ಷೆಗಳು ಸೆ. 5ರಂದು ಆರಂಭ ವಾಗಿದ್ದು, ಮೊದಲ ದಿನವೇ ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಕನ್ನಡ ಪರೀಕ್ಷೆಗೆ ಹಳೆಯ ಪ್ರಶ್ನೆ ಪತ್ರಿಕೆ ನೀಡಿದ ಪರಿಣಾಮ ಪರೀಕ್ಷೆಯನ್ನು ಮುಂದೂಡಿ ಮುಜುಗರಕ್ಕೀಡಾಗಿದೆ.
ಪರಿಷ್ಕೃತ ದಿನಾಂಕವನ್ನು ಶೀಘ್ರ ತಿಳಿಸುವುದಾಗಿ ವಿ.ವಿ. ಆಡಳಿತ ಕಾಲೇಜುಗಳಿಗೆ ತಿಳಿಸಿದೆ.
ವಿ.ವಿ. ವ್ಯಾಪ್ತಿಯ 34 ಕಾಲೇಜುಗಳಲ್ಲಿ ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಪರೀಕ್ಷೆ ಸೋಮವಾರ ಆರಂಭವಾಯಿತು. ಮೊದಲ ದಿನ ಕನ್ನಡ ಪರೀಕ್ಷೆ ನಿಗದಿ ಯಾಗಿತ್ತು. ವಿದ್ಯಾರ್ಥಿಗಳಿಗೆ ನೀಡಿದ ಪ್ರಶ್ನೆಪತ್ರಿಕೆಯ ಮೇಲ್ಭಾಗದಲ್ಲಿ “ದ್ವಿತೀಯ ಸೆಮಿಸ್ಟರ್’ ಎಂದು ನಮೂದಿಸಲಾಗಿತ್ತು. ಆದರೆ ಪ್ರಶ್ನೆಗಳನ್ನು ಓದುತ್ತಾ ಹೋದಂತೆ ಅಲ್ಲಿರುವುದು ಹಿಂದಿನ ಸೆಮಿಸ್ಟರ್‌ನ ಪ್ರಶ್ನೆಗಳು ಎಂಬುದು ತಿಳಿಯಿತು.ಪರೀಕ್ಷಾ ಕೇಂದ್ರಗಳು ತತ್‌ಕ್ಷಣವೇ ವಿ.ವಿ.ಯ ಗಮನಕ್ಕೆ ವಿಷಯವನ್ನು ತಂದವು.
ಕೂಡಲೇ ವಿ.ವಿ. ಕುಲಸಚಿವ (ಪರೀಕ್ಷಾಂಗ) ಪ್ರೊ| ಪಿ.ಎಲ್. ಧರ್ಮ ಅವರು ಪರೀಕ್ಷೆಯನ್ನು ರದ್ದು ಗೊಳಿಸಿದರು. ಹೊಸ ಪ್ರಶ್ನೆ ಪತ್ರಿಕೆಯೊಂದಿಗೆ ಪರೀಕ್ಷೆ ನಡೆಸುವುದಾಗಿ ಘೋಷಿಸಿದರು. ಪರೀಕ್ಷೆ ಆರಂಭವಾಗಿ ಅರ್ಧ ಗಂಟೆಯೊಳಗೆ ಪರೀಕ್ಷೆ ರದ್ದಾಯಿತು.
ನೋಟಿಸ್ ಜಾರಿ
ಘಟನೆ ಸಂಬಂಧ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಕಾಲೇಜುಗಳಿಗೆ ಪೂರೈಸುವ ಹೊಣೆ ಹೊತ್ತ ಸಂಬಂಧಪಟ್ಟ ಪರೀಕ್ಷಾ ವಿಭಾಗ ಮುಖ್ಯಸ್ಥರಿಗೆ ಮಂಗಳೂರು ವಿ.ವಿ. ನೋಟಿಸ್ ಜಾರಿ ಮಾಡಿದೆ.
ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಕನ್ನಡ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಗೊಂದಲ ಆಗಿದ್ದ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಪೂರ್ಣ ವರದಿಯನ್ನು ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಮಂಡಿಸಲಾಗುವುದು. ಸಂಬಂಧಪಟ್ಟ ಪರೀಕ್ಷಾ ಮುಖ್ಯಸ್ಥರೇ ಹೊಸ ಪ್ರಶ್ನೆಪತ್ರಿಕೆಯ ಮುದ್ರಣದ ವೆಚ್ಚವನ್ನು ನಿಭಾಯಿಸುವಂತೆ ಸೂಚಿಸಲಾಗಿದೆ.
– ಪ್ರೊ| ಪಿ.ಎಲ್. ಧರ್ಮ
ಪರೀಕ್ಷಾಂಗ ಕುಲಸಚಿವರು, ಮಂಗಳೂರು ವಿ.ವಿ.