ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ 2021-22ರ ಹೊಸ ಶೈಕ್ಷಣಿಕ ವರ್ಷ ನ. 8ರಿಂದ ಆರಂಭವಾಗಲಿದೆ.
ವಿ.ವಿ. ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ಬಿಕಾಂ ಹಾಗೂ ಬಿಬಿಎ ಹೊರತುಪಡಿಸಿ ಉಳಿದ ಎಲ್ಲ ಪದವಿ ತರಗತಿಗಳು ಸೋಮವಾರದಿಂದ ಆರಂಭವಾಗಲಿವೆ. ಕಳೆದ ಸಾಲಿನ ಬಿಕಾಂ ಹಾಗೂ ಬಿಬಿಎ ಪರೀಕ್ಷೆಯ ಮೌಲ್ಯಮಾಪನ ಸದ್ಯ ನಡೆಯುತ್ತಿರುವ ಕಾರಣ ಆ ಎರಡು ಕೋರ್ಸ್‌ಗಳ ಹೊಸ ಶೈಕ್ಷಣಿಕ ಅವಧಿ ಬಹುತೇಕ ನ.12ರಿಂದ ಆರಂಭವಾಗುವ ಸಾಧ್ಯತೆಯಿದೆ.
“ಉದಯವಾಣಿ’ ಜತೆ ಮಾತನಾಡಿದ ವಿ.ವಿ. ಕುಲಪತಿ ಪ್ರೊ|ಪಿ.ಎಸ್. ಯಡಪಡಿತ್ತಾಯ ಅವರು, ಹೊಸ ಶಿಕ್ಷಣ ನೀತಿಯಡಿ ಸೋಮವಾರದಿಂದ ಕಾಲೇಜು ತರಗತಿ ಆರಂಭವಾಗಲಿದೆ. ಹೊಸ ಪಠ್ಯಕ್ರಮವನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿ ಗೊಳಿಸಲಾಗುತ್ತಿದೆ. ಇದಕ್ಕಾಗಿ 48 ಅಧ್ಯಯನ ಮಂಡಳಿ ರಚಿಸ ಲಾಗಿತ್ತು. ಒಟ್ಟು 61 ಕೋರ್ಸ್‌ಗಳ ಪೈಕಿ 6 ಕೋರ್ಸ್‌ಗಳನ್ನು ಹೊರತುಪಡಿಸಿ ಉಳಿದ ಪಠ್ಯ ಈ ಹಿಂದೆಯೇ ಅಂತಿಮವಾಗಿತ್ತು. ಬಾಕಿ ಉಳಿದಿದ್ದ ಫ್ರೆಂಚ್, ಡಾಟಾ ಪ್ರೊಸೆಸಿಂಗ್, ತುಳು, ಕಂಪ್ಯೂಟರ್ ಅಪ್ಲಿಕೇಶನ್, ಅರೇಬಿಕ್ ಹಾಗೂ ಸಾಮಾನ್ಯ ಕಲಾ ಕೋರ್ಸ್‌ಗಳ ಪಠ್ಯ ಕೂಡ ಇದೀಗ ಪೂರ್ಣವಾಗಿದ್ದು ಕಾಲೇಜು ಆರಂಭಕ್ಕೆ ಬೇಕಾದ ಎಲ್ಲ ಸಿದ್ಧತೆ ಪೂರ್ಣವಾಗಿದೆ’ ಎಂದರು.
ಇದನ್ನೂ ಓದಿ:ಕೇಂದ್ರದ ತನಿಖಾ ಸಂಸ್ಥೆಗಳಿಂದ ಶ್ರೀಕಷ್ಣ ಅಲಿಯಾಸ್ ಶ್ರೀಕಿ ವಿಚಾರಣೆ ಸಾಧ್ಯತೆ
ಕುಲಸಚಿವ (ಪರೀಕ್ಷಾಂಗ) ಡಾ| ಪಿ. ಎಲ್. ಧರ್ಮ ಅವರು ಮಾತನಾಡಿ ದೀಪಾವಳಿ ರಜೆ ಹಿನ್ನೆಲೆಯಲ್ಲಿ ಮೌಲ್ಯ ಮಾಪನ ಒಂದೆರಡು ದಿನ ತಡವಾಗಿದೆ. ಹೀಗಾಗಿ ನ.11ರ ವರೆಗೆ ಮೌಲ್ಯಮಾಪನ ನಡೆಯಲಿದೆ. ಶೀಘ್ರ ಫಲಿತಾಂಶ ಪ್ರಕಟಿಸ ಲಾಗುವುದು ಎಂದು ಹೇಳಿದರು.