Advertisement

ವಿವಾದ ಸೃಷ್ಟಿಸಿದ ಮಂಗಳೂರು ವಿ.ವಿ. ಬಿಸಿಎ ಪಠ್ಯ

08:40 AM Aug 11, 2017 | Harsha Rao |

ಮಂಗಳೂರು: ಮಂಗಳೂರು ವಿ.ವಿ.ಯ ಬಿಸಿಎ ಪ್ರಥಮ ಸೆಮಿಸ್ಟರ್‌ ಕನ್ನಡ ಪಠ್ಯದಲ್ಲಿ ಅಳವಡಿಸಿರುವ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಲೇಖನವೊಂದು ಇದೀಗ ವಿವಾದಕ್ಕೆ ಎಡೆಮಾಡಿದೆ. ಬರಗೂರು ಬರೆದ ‘ಯುದ್ಧ: ಒಂದು ಉದ್ಯಮ’ ಪಾಠದಲ್ಲಿ ಸೈನಿಕರನ್ನು ಅವಮಾನಿಸಿ ಉಲ್ಲೇಖೀಸಲಾಗಿದೆ ಎನ್ನುವ ಆರೋಪ ಬಂದಿದೆ.

Advertisement

ಬಿಸಿಎ ಪ್ರಥಮ ಸೆಮಿಸ್ಟರ್‌ಗೆ ಅಳವಡಿಸಿರುವ “ಪದಚಿತ್ತಾರ’ ಪಠ್ಯದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಬರೆದ “ಯುದ್ಧ: ಒಂದು ಉದ್ಯಮ’ ಲೇಖನವನ್ನು ಮಂಗಳೂರು ವಿ.ವಿ. ಪಠ್ಯ ಪುಸ್ತಕ ರಚನಾ ಸಮಿತಿಯು ಪಾಠವಾಗಿ ಆಯ್ಕೆ ಮಾಡಿದೆ. ಈ ಲೇಖನದಲ್ಲಿ ಬರಗೂರು ಅವರು ತಮ್ಮ ಸೈನಿಕ ಗೆಳೆಯ ಯುದ್ಧ ರಂಗದ ಕುರಿತು ಹೇಳಿದ ಅನಿಸಿಕೆಗಳನ್ನು ಉಲ್ಲೇಖೀಸಿದ್ದಾರೆ. “ಗಡಿ ಪ್ರದೇಶದಲ್ಲಿ ಪರಸ್ಪರ ಕ್ರೌರ್ಯದ ಪ್ರದರ್ಶನ ಮಾಡುವ ಪರಾಕ್ರಮಿಗಳು ಇದ್ದೇ ಇರುತ್ತಾರೆ. ಪರಸ್ಪರ ಮುತ್ತಿಗೆ ನಡೆದಾಗ ಗಡಿಯ ಗ್ರಾಮಗಳಲ್ಲಿ ಅತ್ಯಾಚಾರವೂ ನಡೆಯುತ್ತವೆ ಎಂದೂ ಎರಡೂ ರಾಷ್ಟ್ರಗಳ ಕೆಲವು ಸೈನಿಕರು ಇದರಲ್ಲಿ ಭಾಗಿಗಳೆಂದೂ ಗೆಳೆಯ ಹೇಳಿರುವುದಾಗಿ’ ಬರಗೂರು ತಮ್ಮ ಲೇಖನದಲ್ಲಿ ಬರೆದಿದ್ದು, ಅದು ವಿದ್ಯಾರ್ಥಿಗಳ ಪಠ್ಯ ಪುಸ್ತಕದಲ್ಲಿಯೂ ಯಥಾವತ್ತಾಗಿ ಅಳವಡಿಸಲಾಗಿದೆ. ಬರಗೂರು ಅವರ ಈ ರೀತಿಯ ವಿಶ್ಲೇಷಿತ ಲೇಖನವನ್ನು ಪಠ್ಯ ಪುಸ್ತಕದಲ್ಲಿ ಕಲಿಕಾ ವಿಷಯವಾಗಿ ಸೇರಿಸಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ಮುಖಂಡ ಕರ್ನಲ್‌ ನಿಟ್ಟೆಗುತ್ತು ಶರತ್‌ ಭಂಡಾರಿ, “ಪಠ್ಯ ಪುಸ್ತಕ ದಲ್ಲಿ ಸೈನಿಕರನ್ನು ಅವಹೇಳನ ಮಾಡುವ ರೀತಿ ಬಿಂಬಿಸಿರುವುದು ತಪ್ಪು. ಇತ್ತೀಚೆಗೆ ಇಂತಹ ತಪ್ಪು ಗಳು ಪದೇಪದೇ ನಡೆಯುತ್ತಿದ್ದು, ಕೆಲವರು ಬೇಕು ಬೇಕೆಂದೇ ಇಂಥಹ ವಿವಾದ ಸೃಷ್ಟಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಆದರೆ ಪಠ್ಯ ಪುಸ್ತಕ ರಚನಾ ಸಮಿತಿ ಆರೋಪ ಗಳನ್ನು ಅಲ್ಲಗಳೆದಿದೆ. ಸಮಿತಿ ಹೇಳುವಂತೆ, “ಪಠ್ಯದಲ್ಲಿ ಅಳವಡಿಸಿರುವ ಬರಗೂರು ಲೇಖನದಲ್ಲಿ ಎಲ್ಲಿಯೂ ಸೈನಿಕರನ್ನು ಅವಮಾನ ಮಾಡುವಂಥ ಉಲ್ಲೇಖ ಗಳಿಲ್ಲ . ಇಡೀ ಪುಸ್ತಕದ ಒಟ್ಟು ಆಶಯ ಸೈನಿಕರ ಪರವಾಗಿದೆ. ಅಲ್ಲದೆ ಪುಸ್ತಕದಲ್ಲಿ ಹೇಳ ಲಾಗಿರುವ ಬರಗೂರು ಅವರ ಗೆಳೆಯನ ಅನಿಸಿಕೆ ಗಳು ಕೇವಲ ಒಂದು ದೇಶದ ಸೈನಿಕರಿಗೆ ಸೀಮಿತ ವಾದದ್ದಲ್ಲ. ಅದು ಒಟ್ಟು ಜಗತ್ತಿನ ಯುದ್ಧ ರಂಗ ದಲ್ಲಿನ ಆಗು-ಹೋಗುಗಳಿಗೆ ಸಂಬಂಧಿಸಿದಂತೆ ಉಲ್ಲೇ ಖೀಸ ಲಾಗಿದೆ’ ಎಂದು ಸಮಿತಿ ಸ್ಪಷ್ಟಪಡಿಸಿದೆ.

ಆಯ್ಕೆ  ಸಮಿತಿಯಲ್ಲಿ …
ಬಿಸಿಎ ಪ್ರಥಮ ಸೆಮಿಸ್ಟರ್‌ನ ಈ ಕನ್ನಡ ಭಾಷಾ ಪಠ್ಯ ಪುಸ್ತಕ ಈ ವರ್ಷ ಹೊಸದಾಗಿ ಮುದ್ರಿತವಾಗಿದೆ. ಐವರು ಸಂಪಾದಕರನ್ನು ಒಳಗೊಂಡ ಪಠ್ಯ ಪುಸ್ತಕ ರಚನಾ ಸಮಿತಿಯು ಈ ಪುಸ್ತಕದ ಕಲಿಕಾ ವಿಷಯವನ್ನು ಅಂತಿಮಗೊಳಿಸಿದೆ. ಡಾ| ಶಿವರಾಮ ಶೆಟ್ಟಿ ಪ್ರಧಾನ ಸಂಪಾದಕರಾಗಿದ್ದರೆ, ಡಾ| ನಾಗಪ್ಪ ಗೌಡ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ. ಡಾ| ಶ್ರೀಕಾಂತ್‌ ರಾವ್‌, ಡಾ| ಪುತ್ತಿ ವಸಂತಕುಮಾರ್‌, ರಾಘವೇಂದ್ರ ತುಂಗ ಅವರು ಆಯ್ಕೆ ಸಮಿತಿಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

Advertisement

ಅದು ನನ್ನ ಅಭಿಪ್ರಾಯವಲ್ಲ
ಐದಾರು ವರ್ಷಗಳ ಹಿಂದೆ ಪತ್ರಿಕೆಯೊಂದಕ್ಕೆ ಬರೆದ ಲೇಖನ ಅದಾಗಿದೆ. ಈ ಲೇಖನ ದಲ್ಲಿ ಮೂರು ಅಂಶಗಳಿದ್ದು ಶಾಂತಿ ಪರ, ಯುದ್ಧ ವಿರೋಧಿ. ಯುದ್ಧದಿಂದಾಗು ಅನಾಹುತ ಮತ್ತು ಯೋಧರ ಪರವಾಗಿಯೇ ಬರೆದಿ ದ್ದೇನೆ. ಸೈನ್ಯದಲ್ಲಿ ಇದ್ದ ಸ್ನೇಹಿತನೊಬ್ಬ ಯುದ್ಧದ ಸಂದರ್ಭದಲ್ಲಿ ಕೆಲವು ಸೈನಿಕರು ಅತ್ಯಾಚಾರ ಮಾಡುತ್ತಾರೆ ಎಂದು ಹೇಳಿದ್ದನ್ನು ಉಲ್ಲೇಖೀಸಿದ್ದೇನೆ ಹೊರತು ನನ್ನ ಅಭಿಪ್ರಾಯವಲ್ಲ. ಯೋಧರನ್ನು ಎಂದೂ ಹೀಗಳೆದಿಲ್ಲ.
-ಬರಗೂರು ರಾಮಚಂದ್ರಪ್ಪ

ಸೈನಿಕ ಪರ ಬರೆಯಲಾಗಿದೆ!
“ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ಚರ್ಚೆ ಮಾಡಿಯೇ “ಯುದ್ಧ: ಒಂದು ಉದ್ಯಮ’ ಲೇಖನವನ್ನು ಬಿಸಿಎ ಪ್ರಥಮ ಸೆಮಿಸ್ಟರ್‌ಗೆ ಒಂದು ಪಾಠವಾಗಿ ಅಳವಡಿಸಲಾಗಿದೆ. ಈ ಲೇಖನದಲ್ಲಿ ಎಲ್ಲೂ ಸೈನಿಕರಿಗೆ ಅವಮಾನ ಮಾಡಿಲ್ಲ. ಸೈನಿಕ ಪರವಾಗಿ  ಇದೆ. ಯಾವುದೋ ತುಣುಕು ಗಳನ್ನು ತೆಗೆದುಕೊಂಡು ನೋಡದೇ ಟೀಕೆ ಮಾಡುವುದು ಸರಿಯಲ್ಲ. ಇಡೀ ಲೇಖನ ವನ್ನು ಓದಿದರೆ ಅದರ ಒಟ್ಟು ಆಶಯ ಅರ್ಥ ಆಗುತ್ತದೆ.’
-ಡಾ| ನಾಗಪ್ಪ  ಗೌಡ, ಕಾರ್ಯನಿರ್ವಾಹಕ ಸಂಪಾದಕ, ಪಠ್ಯ ಪುಸ್ತಕ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next