Advertisement

ಮಂಗಳೂರು ವಿ.ವಿ.ಯಿಂದ 24 ಕಾಲೇಜುಗಳು ಪ್ರತ್ಯೇಕ! ನೂತನ ಕೊಡಗು ವಿಶ್ವವಿದ್ಯಾನಿಲಯ ಶೀಘ್ರ

01:32 AM Sep 26, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನು ಒಳಗೊಂಡಿದ್ದ ಮಂಗಳೂರು ವಿಶ್ವವಿದ್ಯಾನಿಲಯವು ಇನ್ನು ಮುಂದೆ ಕೊಡಗು ಜಿಲ್ಲೆಯ ಶೈಕ್ಷಣಿಕ ಚಟುವಟಿಕೆಯ ಅಧಿಕಾರವನ್ನು ಕಳೆದುಕೊಳ್ಳಲಿದೆ. ಕೊಡಗು ಜಿಲ್ಲೆಗೆ ಸಂಬಂಧಿಸಿದ 24 ಕಾಲೇಜುಗಳು ಹೊಸದಾಗಿ ನಿರ್ಮಾಣವಾಗಲಿರುವ ಕೊಡಗು ವಿ.ವಿ.ಗೆ ಸೇರ್ಪಡೆಯಾಗಲಿದೆ.

Advertisement

ಮಂಗಳೂರು ವಿ.ವಿ.ಯಲ್ಲಿ 215 ಕಾಲೇಜುಗಳು ಸಂಯೋಜಿತಗೊಂಡಿದ್ದು, ಅವುಗಳಲ್ಲಿ 24 ಕಾಲೇಜುಗಳು ಕೊಡಗು ವಿ.ವಿ.ಯ ಪಾಲಾಗಲಿವೆ. ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಕಾಲೇಜು, ಚಿಕ್ಕಳುವಾರದಲ್ಲಿರುವ ಮಂಗಳೂರು ವಿ.ವಿ. ಸ್ನಾತಕೊಕೋತ್ತರ ಹಾಗೂ ಸಂಶೋಧನ ಕೇಂದ್ರ ಸೇರಿದಂತೆ ಅಲ್ಲಿನ ಸರಕಾರಿ ಕಾಲೇಜು, ಸಂಯೋಜಿತ ಕಾಲೇಜು, ಸ್ನಾತಕೋತ್ತರ, ಸಂಶೋಧನ ಕೇಂದ್ರವು ಮಂಗಳೂರು ವಿ.ವಿ.ಯಿಂದ ಹೊರಗುಳಿಯಲಿವೆ.

ದೂರ ಸಂಚಾರ ಇನ್ನಿಲ್ಲ
ಕೊಡಗು ಜಿಲ್ಲೆಯಲ್ಲಿರುವ ಕಾಲೇಜುಗಳವರು ವಿಶ್ವವಿದ್ಯಾನಿಲಯಕ್ಕೆ ಹೋಗ ಬೇಕೆಂದರೆ 100 ಕಿ.ಮೀ.ಗೂ ಅಧಿಕ ದೂರದಲ್ಲಿರುವ ಮಂಗಳೂರಿಗೆ ಆಗಮಿಸಬೇಕು. ಪರೀಕ್ಷೆ-ಮೌಲ್ಯಮಾಪನಕ್ಕೂ ಉಪನ್ಯಾಸಕರು ಅತ್ತಿಂದಿತ್ತ ತೆರಳಬೇಕು. ಆ ಹಿನ್ನೆಲೆಯಲ್ಲಿ ಮಡಿಕೇರಿ ಭಾಗಕ್ಕೆ ಪ್ರತ್ಯೇಕವಿ.ವಿ. ಬೇಕೆಂದು ಶಾಸಕ ಅಪ್ಪಚ್ಚು ರಂಜನ್‌ ಆಗ್ರಹಿಸಿದ್ದರಿಂದ 2 ವರ್ಷದ ಹಿಂದೆ ಕೊಡಗು ವಿ.ವಿ. ಎಂಬ ಹೊಸ ವಿ.ವಿ. ಸ್ಥಾಪನೆಗೆ ಚಿಂತಿಸಲಾಗಿತ್ತು.

ವಿಶೇಷ ಅಧಿಕಾರಿ ನೇಮಕ
ವಿಶಾಲ ವ್ಯಾಪ್ತಿ ಹಾಗೂ ಯೋಗ್ಯ ನಿವೇಶನವಿರುವುದರಿಂದ ಚಿಕ್ಕಳುವಾರದ ಲ್ಲಿರುವ ಮಂಗಳೂರು ವಿ.ವಿ. ಸ್ನಾತಕೋತ್ತರ ಹಾಗೂ ಸಂಶೋಧನ ಕೇಂದ್ರವು ಇನ್ನು ಮುಂದೆ ಕೊಡಗು ವಿ.ವಿ. ಕ್ಯಾಂಪಸ್‌ ಆಗುವ ಎಲ್ಲ ಸಾಧ್ಯತೆಗಳಿವೆ. ವಿಧಾನಸಭಾ ಅಧಿವೇಶನ ಮುಗಿದ ಅನಂತರ ಉನ್ನತ ಶಿಕ್ಷಣ ಇಲಾಖೆಯು ವಿಶೇಷ ಅಧಿಕಾರಿಯನ್ನು ಇಲ್ಲಿಗೆ ನಿಯೋಜಿಸುವ ಮೂಲಕ ಹೊಸ ವಿ.ವಿ. ಸ್ಥಾಪನೆಗೆ ಎಲ್ಲ ಸಿದ್ಧತೆ ಆರಂಭಿಸುವ ಬಗ್ಗೆ ಮಾಹಿತಿ ಯಿದೆ. ಈ ಮಧ್ಯೆ ಮಂಗಳೂರು ವಿ.ವಿ. ಅಧೀನದಲ್ಲಿರುವ ವಿವಿಧ ಅಧ್ಯಯನ ಪೀಠ ಹಾಗೂ ಕೊಡಗಿನಲ್ಲಿ ಕರ್ತವ್ಯ ನಿರ್ವಹಿಸುವ ಸಿಬಂದಿಯ ಕಾರ್ಯನಿರ್ವಹಣೆ ಬಗ್ಗೆ ಇನ್ನಷ್ಟೇ ಪ್ರಕ್ರಿಯೆ ನಡೆಯಬೇಕಿದೆ.

8 ವಿ.ವಿ.ಗಳ ಸ್ಥಾಪನೆ
8 ನೂತನ ವಿ.ವಿ.ಗಳ ಸ್ಥಾಪನೆಗೆ “ಕರ್ನಾಟಕ ವಿ.ವಿ.ಗಳ ಕಾಯ್ದೆ-2000’ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಆಗಸ್ಟ್‌ನಲ್ಲಿ ಸಮ್ಮತಿಸಿದ್ದು, ಅದರಂತೆ ಕೊಡಗು, ಚಾಮರಾಜನಗರ, ಹಾವೇರಿ, ಹಾಸನ, ಕೊಪ್ಪಳ, ಬಾಗಲ ಕೋಟೆ, ಬೀದರ್‌ ಮತ್ತು ಮಂಡ್ಯ ವಿ.ವಿ. ಗಳು ಸ್ಥಾಪನೆಯಾಗಲಿವೆ. ಯುಜಿಸಿ ನಿರ್ದೇಶನದ ಮೇರೆಗೆ ಹೊಸ ವಿ.ವಿ.ಗಳನ್ನು ಸ್ಥಾಪಿಸಲಾಗುತ್ತಿದ್ದು, ಆರಂಭದಲ್ಲಿ ಕೇಂದ್ರ ಸರಕಾರ ಅನುದಾನ ನೀಡಲಿದೆ. ಕೊಡಗು ವಿ.ವಿ.ಗೆ 2 ಕೋ.ರೂ.ಗಳನ್ನು ಒದಗಿಸಲಾಗಿದೆ.

Advertisement

ಕೊಡಗಿನಲ್ಲಿ ಹೊಸ ವಿ.ವಿ. ಸ್ಥಾಪನೆ ಸಂಬಂಧ ಅಧಿಕೃತವಾಗಿ ಮಂಗಳೂರು ವಿ.ವಿ.ಯೊಂದಿಗೆ ಪತ್ರ ವ್ಯವಹಾರ ನಡೆದಿಲ್ಲ. ಲಭ್ಯ ಮಾಹಿತಿ ಪ್ರಕಾರ ಮಂಗಳೂರು ವಿ.ವಿ.ಯಿಂದ 24 ಕಾಲೇಜುಗಳು ಪ್ರತ್ಯೇಕವಾಗಲಿವೆ. ಎನ್‌ಇಪಿ ನಿಯಮಾವಳಿ ಪ್ರಕಾರ ಸ್ಥಳೀಯವಾಗಿ ವಿ.ವಿ. ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಈ ಮೂಲಕ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಲು ಸಾಧ್ಯ.
– ಪ್ರೊ| ಪಿ.ಎಸ್‌. ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿ.ವಿ.

 

Advertisement

Udayavani is now on Telegram. Click here to join our channel and stay updated with the latest news.

Next