Advertisement

ಮಂಗಳೂರು:ಅರೆಬರೆ ಕಾಮಗಾರಿ- ಸುಗಮ ಸಂಚಾರಕ್ಕೆ ಸಂಕಷ್ಟ

03:19 PM Feb 13, 2023 | Team Udayavani |

ಸ್ಮಾರ್ಟ್‌ಸಿಟಿ, ಪಾಲಿಕೆ, ಗೈಲ್‌, ಜಲಸಿರಿ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಗರದ ಹಲವು ಕಡೆಗಳಲ್ಲಿ ನಡೆಯುತ್ತಿವೆ. ಹಲವೆಡೆ ಈಗಾಗಲೇ ಆರಂಭಗೊಳಿಸಿದ ಕಾಮಗಾರಿಯನ್ನು ಪೂರ್ಣಗೊಳಿಸದೆ ಅರ್ಧಂಬರ್ಧ ಕಾಮಗಾರಿ ಆಗುತ್ತಿದ್ದು, ವಾಹನ ಸವಾರರಿಗೆ, ಪಾದಚಾರಿ ಗಳಿಗೆ ತೊಂದರೆ ಉಂಟಾಗುತ್ತಿದೆ. ಸಂಬಂಧಪಟ್ಟ ಇಲಾಖೆ ತತ್‌ಕ್ಷಣ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆ.

Advertisement

ಅಗೆತ; ರಸ್ತೆಯಿಡೀ ಮಣ್ಣು, ಮರಳು
ಉರ್ವ, ಕಾಪಿಕಾಡ್‌, ಬಂಟ್ಸ್‌ ಹಾಸ್ಟೆಲ್‌ ಸಹಿತ ವಿವಿಧ ಕಡೆಗಳಲ್ಲಿ ಪೈಪ್‌ ಲೈನ್‌, ಒಳಚರಂಡಿ, ನೀರಿನ ಸೋರಿಕೆ ಉದ್ದೇಶಕ್ಕೆ ರಸ್ತೆ ಅಗೆಯಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಯನ್ನು ಸರಿಯಾಗಿ ಮುಚ್ಚುವುದಿಲ್ಲ. ಅಗೆದ ರಸ್ತೆಗೆ ಮತ್ತೆ ಕಾಂಕ್ರೀಟ್‌ ಅಳವಡಿಸಲಿಲ್ಲ. ಬದಲಾಗಿ ಅಲ್ಲಿಗೆ ಮಣ್ಣು ಹಾಕಲಾಗಿದ್ದು, ಅದು ರಸ್ತೆಯಿಡೀ ಹರಡಿಕೊಂಡಿದೆ. ಕಾಮಗಾರಿ ಉದ್ದೇಶಕ್ಕೆ ಬಳಸಿದ ಮರಳು ಕೂಡ ರಸ್ತೆಯಲ್ಲಿ ಬಿದ್ದಿದ್ದು, ವಾಹನ ಸವಾರರು ಸ್ಕಿಡ್‌ ಆಗಿ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಎದುರಾಗಿದೆ.

ಹದಗೊಳಿಸದ ಮಣ್ಣು; ಮನೆ ಮಂದಿಗೆ ಸಂಕಷ್ಟ
ಜಲಸಿರಿ, ಗೈಲ್‌ ಗ್ಯಾಸ್‌ ಪೈಪ್‌ ಲೈನ್‌ ಉದ್ದೇಶಕ್ಕೆ ನಗರದ ಕೆಲವೊಂದು ಕಡೆಗಳಲ್ಲಿ ಅಂಗಡಿ, ಮನೆ ಮುಂದೆ ಅಗೆಯಲಾಗಿದೆ. ಅಗೆದ ಜಾಗವನ್ನು ಮುಚ್ಚಲು ಕಾರ್ಮಿಕರು ಒಂದು ದಿನ ಮಾಡುತ್ತಾರೆ. ಅಗೆಯುವ ಮುನ್ನ ಮನೆಯವರಿಗೂ ಮಾಹಿತಿ ನೀಡುವುದಿಲ್ಲ ಎಂಬ ದೂರು ಇದೆ. ಅಗೆದ ಬಳಿಕ ಸರಿಯಾಗಿ ಮಣ್ಣು ಹದ ಮಾಡದೆ ಹೋಗುವ ಕಾರಣ, ವಾಹನ ಕೊಂಡೊಯ್ಯಲು ಕಷ್ಟವಾಗುತ್ತದೆ. ಮನೆ ಮಂದಿಗೂ ಇದರಿಂದ ತೊಂದರೆ ಉಂಟಾಗುತ್ತಿದೆ.

ಸಮನ್ವಯತೆ ಕೊರತೆ
ನಗರದಲ್ಲಿ ಎಲ್ಲಿ-ಯಾವ ಕಾಮಗಾರಿ ನಡೆಯುತ್ತಿದೆ ಎಂಬ ಬಗ್ಗೆ ಪಾಲಿಕೆಗೆ ಸಮರ್ಪಕ ಮಾಹಿತಿ ಇರುವುದಿಲ್ಲ. ಅದರಲ್ಲೂ ಗ್ಯಾಸ್‌ಲೈನ್‌ ಉದ್ದೇಶಕ್ಕೆ ಮಾಹಿತಿ ನೀಡದೆ ರಸ್ತೆ ಅಗೆಯುವ ಕಾರಣ ಅಲ್ಲಲ್ಲಿ ನೀರಿನ ಪೈಪ್‌ಲೈನ್‌ಗಳಿಗೂ ಹಾನಿ ಉಂಟಾಗುತ್ತಿದೆ. ಒಂದು ಕಡೆ ಕಾಮಗಾರಿ ಪೂರ್ಣಗೊಂಡ ಬಳಿಕವಷ್ಟೇ ಮತ್ತೂಂದೆಡೆ ಕೆಲಸ ಆರಂಭಿಸಬೇಕು ಎಂದು ಈಗಾಗಲೇ ಪಾಲಿಕೆಯಿಂದ ಸೂಚನೆ ನೀಡಲಾಗಿದೆಯಾದರೂ, ಅದೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ
ದೂರುಗಳು ಬರುತ್ತಿದೆ.

Advertisement

ರಸ್ತೆ ಬದಿ ಮಣ್ಣು, ಕಲ್ಲು ರಾಶಿ
ನಗರದ ಬಹುತೇಕ ಕಡೆಗಳಲ್ಲಿ ರಸ್ತೆ, ಒಳಚರಂಡಿ ಸಹಿ ತ ವಿವಿಧ ಕಾಮಗಾರಿಗಳಿಗೆ ರಸ್ತೆ ಅಗೆದರೆ, ಗುಂಡಿ ತುಂಬಿಸಿ ಉಳಿದ ಮಣ್ಣನ್ನು ರಸ್ತೆ ಬದಿಯಲ್ಲಿಯೇ ಇಡಲಾಗುತ್ತಿದೆ. ಅದೇ ರೀತಿ, ಇಂಟರ್‌ಲಾಕ್‌. ಇಟ್ಟಿಗೆಗಳು, ಮರಳು-ಜಲ್ಲಿ ಕೂಡ ನಗರದ ವಿವಿಧ ರಸ್ತೆ ಬದಿಗಳಲ್ಲಿ ರಾಶಿ ಹಾಕಿದ ಸ್ಥಿತಿಯಲ್ಲಿದೆ.

ಫೋಟೋ ನ್ಯೂಸ್‌ ಸ್ಟೋರಿ
*ನವೀನ್‌ ಭಟ್‌ ಇಳಂತಿಲ
ಚಿತ್ರ: ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next