Advertisement

ಸೋಮೇಶ್ವರ ಗ್ರಾ.ಪಂ.: ನೂತನ ಸಭಾಭವನ ಉದ್ಘಾಟನೆ

02:15 AM Jul 11, 2017 | Karthik A |

ಉಳ್ಳಾಲ: ಸೋಮೇಶ್ವರ ಗ್ರಾಮ ಪಂಚಾಯತ್‌ ಅತಿ ದೊಡ್ಡ ಗ್ರಾ.ಪಂ. ಆಗಿರುವುದರಿಂದ ನಗರ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಲು ಶಿಫಾರಸು ಮಾಡಿದ್ದು, ಇದರಿಂದ ಗ್ರಾ.ಪಂ.ಗೆ ಅನುದಾನ ಸಿಗಲಿದೆ ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು. ಅವರು ಸೋಮೇಶ್ವರ ಗ್ರಾ.ಪಂ.ನಲ್ಲಿ ನೂತನವಾಗಿ ನಿರ್ಮಿಸಿದ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಸೋಮೇಶ್ವರ ಗ್ರಾಮ ಪಂಚಾಯತ್‌ನ ರಸ್ತೆ ಅಭಿವೃದ್ಧಿಗೆ ಮೂರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಕಡಲ್ಕೊರೆತಕ್ಕೆ ಸಂಬಂಧಿಸಿದಂತೆ ಶಾಶ್ವತ ಕಾಮಗಾರಿಗೆ 20 ಕೋಟಿ ರೂ. ಬಿಡುಗಡೆಯಾಗಿದ್ದು, ಟೆಂಡರ್‌ ಹಂತಕ್ಕೆ ಬಂದಿದೆ ಆವರೆಗೆ ಉಚ್ಚಿಲ ಪರಿಸರದ ಜನರ ಆಸ್ತಿ ಪಾಸ್ತಿ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು.

Advertisement

ಸಮಸ್ಯೆಗಳಿಗೆ ಸ್ಪಂದಿಸಿ
ಗ್ರಾಮದ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ನಿಟ್ಟಿನಲ್ಲಿ ಪಂಚಾಯತ್‌ ರಾಜ್‌ಗೆ ವಿಶೇಷವಾದ ಅಧಿಕಾರ ನೀಡುವ ಕಾರ್ಯ ಮಾಡಿದ್ದು, ರಮೇಶ್‌ ಕುಮಾರ್‌ ಸಮಿತಿಯಂತೆ ಇನ್ನಷ್ಟು ಅಧಿಕಾರ ನೀಡಲಾಗುತ್ತಿದೆ. ಸದಸ್ಯರು ತಮ್ಮ ವ್ಯಾಪ್ತಿಯ ಮನೆಯ ನಿರಂತರ ಸಂಪರ್ಕದಲ್ಲಿರಿಸಿಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸಿದರೆ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು. ಗ್ರಾಮ ಪಂಚಾಯತ್‌ ಸದಸ್ಯರಾದವರಿಗೆ 300 ಮನೆಗಳು ಸಿಗುತ್ತವೆ. ಇದರಲ್ಲಿ ಮೂರು ಮಂದಿ ಸದಸ್ಯರು ಈ ಮನೆಗಳ ಸಮಸ್ಯೆಯೊಂದಿಗೆ ಅವರಲ್ಲಿ ಉತ್ತಮ ಬಾಂಧವ್ಯ ಇಟ್ಟುಕೊಂಡರೆ ಮುಂದಿನ ಚುನಾವಣೆಯಲ್ಲಿ ಅವರ ವಿರುದ್ಧ ಸ್ಪರ್ಧಿಸುವವರು ಸಿಗಲಿಕ್ಕಿಲ್ಲ.  ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದೆ ಶಾಸಕರ ಕಾರ್ಯವನ್ನು ಮಾಡಲು ಹೋದರೆ ಸಮಸ್ಯೆ ಖಚಿತ ಎಂದು ಅವರು ಹೇಳಿದರು.

ಪಡಿತರ ಚೀಟಿಗೆ ಶಾಶ್ವತ ಪರಿಹಾರ 
ಪಡಿತರ ಚೀಟಿ ಪಡೆಯಲು ಕೇವಲ ಆಧಾರ್‌ ಕಾರ್ಡ್‌ ಇದ್ದರೆ ಸಾಕು ಪಂಚಾಯತ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದರೆ ಮುಂದಿನ 15 ದಿನಗಳಲ್ಲಿ ಪಡಿತರ ಚೀಟಿ ನಿಮ್ಮ ಕೈಯಲ್ಲಿರುತ್ತದೆ. ಇದಕ್ಕೆ ಸಂಬಂಧಪಟ್ಟ ಆದಾಯ ಸರ್ಟಿಫಿಕೇಟ್‌ ನೀಡುವ ಕಾರ್ಯ ಪಂಚಾಯತ್‌ನದ್ದಾಗಿದ್ದು, ಅರ್ಜಿಗಳನ್ನು ಜನಸ್ನೇಹಿ ಕೇಂದ್ರಕ್ಕೆ ಕಳುಹಿಸಿ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯ ನಿರ್ವಹಿಸಿದರೆ ಸಾಕು ಎಂದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗ್ರಾ.ಪಂ. ಗ್ರಾಮದ ಸರಕಾರ ಆಗಿದ್ದು, ಸರಕಾರದ ಲೆಕ್ಕಾಚಾರದಂತೆ ಕೋಟ್ಯಂತರ ರೂಪಾಯಿ ಆದಾಯ ಹೊಂದಿರುವ ಮೊಬೈಲ್‌ ಕಂಪೆನಿಗಳು ಟವರ್‌ವೊಂದಕ್ಕೆ ಕನಿಷ್ಠ 12 ಸಾವಿರವನ್ನಾದರೂ ಗ್ರಾ.ಪಂ.ಗೆ ಮಾಸಿಕ ತೆರಿಗೆ ಪಾವತಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next