Advertisement

Mangaluru”ಸಮುದ್ರ ಸಿಗಡಿ’ ರಫ್ತು ಪುನರಾರಂಭ ನಿರೀಕ್ಷೆ

12:25 AM Mar 03, 2024 | Team Udayavani |

ಮಂಗಳೂರು: ಸಮುದ್ರದಲ್ಲಿ ಹೇರಳವಾಗಿ ಸಿಗುವ ಪೌಷ್ಟಿಕ ಆಹಾರ ಮೀನು ವೈವಿಧ್ಯದಲ್ಲಿ ವೈಲ್ಡ್‌ ಕ್ಯಾಚ್‌ ಶ್ರಿಂಪ್‌ (ಸಮುದ್ರ ಸಿಗಡಿ)ಗೆ ಭಾರೀ ಬೇಡಿಕೆ; ಆದರೆ ಅಮೆರಿಕದಲ್ಲಿ ಮಾತ್ರ ಭಾರತದ ಸಮುದ್ರ ಸಿಗಡಿಗೆ 2019ರಿಂದ ನಿಷೇಧವಿದೆ. ಸದ್ಯ ನಿಷೇಧ ತೆರವಿಗೆ ಇದೀಗ ಎಲ್ಲ ಸಿದ್ಧತೆ ನಡೆಸಲಾಗುತ್ತಿದ್ದು, ಮೀನುಗಾರರಲ್ಲಿ ಆಶಾವಾದ ಮೂಡಿಸಿದೆ.

Advertisement

ವೈವಿಧ್ಯಮಯ ಹಾಗೂ ರುಚಿಕರ ಸಮುದ್ರ ಸಿಗಡಿಗೆ ಅಮೆರಿಕದಲ್ಲಿ ಭಾರೀ ಬೇಡಿಕೆ ಇದೆ. 2018ರ ವರೆಗೂ ಭಾರತದ ಸಮುದ್ರದಿಂದ ಸಂಗ್ರಹಿಸಲಾದ ಈ ಸಿಗಡಿ ಅಮೆರಿಕಕ್ಕೆ ರಫ್ತಾಗುತ್ತಿತ್ತು. ಆದರೆ ಭಾರತದ ಯಾಂತ್ರೀಕೃತ ಟ್ರೋಲರ್‌ ಬೋಟ್‌ಗಳಲ್ಲಿ ಬಳಸಲಾಗುವ ಬಲೆಗಳು ಅಳಿವಿನಂಚಿನಲ್ಲಿರುವ “ಆಮೆ’ಗಳ ಸಂರಕ್ಷಣೆಗೆ ಪೂರಕವಾಗಿಲ್ಲ ಎಂಬ ಕಾರಣಕ್ಕೆ ಅಮೆರಿಕವು 2019ರಿಂದ ಭಾರತದ ಸಿಗಡಿ ರಫ್ತಿನ ಮೇಲೆ ನಿಷೇಧ ಹೇರಿದೆ. ಈ ನಿಷೇಧದ ತೆರವಿಗಾಗಿ ಪ್ರಯತ್ನಿಸುತ್ತಿರುವ ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಂಪೆಡಾ)ವು ಭಾರತದ ತಂತ್ರಜ್ಞರಿಂದ ಅಭಿವೃದ್ಧಿಪಡಿಸಲಾದ ಮೀನುಗಾರಿಕೆ ದೋಣಿಗಳಲ್ಲಿ ಬಳಸಲಾಗುವ “ಟರ್ಟಲ್‌ ಎಕ್ಸ್‌ಕ್ಲೂಸರ್‌ ಡಿವೈಸ್‌’ (ಟಿಇಡಿ) ಬಗ್ಗೆ ಅಮೆರಿಕದ ತಜ್ಞ ತಂಡಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಈ ತಂತ್ರಜ್ಞಾನ ಬಳಕೆಗೆ ಹಸಿರು ನಿಶಾನೆ ದೊರಕಿದೆ.

ಭಾರತದಲ್ಲಿ ಆಳ ಸಮುದ್ರ ಮೀನುಗಾರಿಕೆಯ ಟ್ರಾಲರ್‌ಗಳು ಅಮೆರಿಕದ ನ್ಯಾಶನಲ್‌ ಓಶಿಯಾನಿಕ್‌ ಅಟೊಸ್ಪೆರಿಕ್‌ ಅಡ್ಮಿನಿಸ್ಟ್ರೇಶನ್‌ (ಎನ್‌ಒಎಎ)ಯ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದಾಗಿ ಅಮೆರಿಕದ ತಜ್ಞರ ತಗಾದೆ. ಇದರ ಪರಿಣಾಮ 2019ರಿಂದ ಭಾರತದ ಸಮುದ್ರ ಸಿಗಡಿಗೆ ನಿಷೇಧ ಹೇರಲಾಗಿತ್ತು. ಭಾರತದ ಕರಾವಳಿಯ ಟ್ರಾಲರ್‌ಗಳು ಬಳಸುವ ಮೀನು ಹಿಡಿಯುವ ಬಲೆಗಳಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳುವಲ್ಲಿ ಬಹುಮುಖ್ಯ ಎನಿಸಿರುವ ಆಮೆಗಳು ಸಿಲುಕಿ ಪ್ರಾಣಕಳೆದುಕೊಳ್ಳುತ್ತವೆ ಎಂಬ ಆಕ್ಷೇಪ ಅಮೆರಿಕದ ಎನ್‌ಒಎಎಯ ತಜ್ಞರದ್ದಾಗಿತ್ತು. ಇದಕ್ಕಾಗಿ “ಟರ್ಟಲ್‌ ಎಕ್ಸ್‌ಕ್ಲೂಸರ್‌ ಡಿವೈಸ್‌’ (ಟಿಇಡಿ) ತಂತ್ರಜ್ಞಾನ ಬಳಕೆಗೆ ಉದ್ದೇಶಿಸಲಾಗಿದೆ. ಈ ಕುರಿತ ತರಬೇತಿ ವಿವಿಧ ಕಡೆಗಳಲ್ಲಿ ಸದ್ಯ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next