ಧಾರವಾಡ: ಇಲ್ಲಿಯ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ 5ನೇ ಅಥ್ಲೆಟಿಕ್ ಕ್ರೀಡಾಕೂಟ-2017ಕ್ಕೆ ಶುಕ್ರವಾರ ಸಂಜೆ ತೆರೆ ಬಿದ್ದಿತು. ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಂಗಳೂರಿನ ಎಸ್‌ಡಿಎಂ ಲಾ ಕಾಲೇಜ್ ತಂಡವು ಒಟ್ಟು 86 ಅಂಕ ಗಳಿಸಿ ಸಮಗ್ರ ಚಾಂಪಿಯನ್ ಶಿಪ್ ಪಡೆದುಕೊಂಡಿತು.
70 ಅಂಕ ಪಡೆದು ಹುಬ್ಬಳ್ಳಿಯ ಕೆಎಲ್‌ಇ ಜಿ.ಕೆ. ಕೋತಂಬ್ರಿ ಲಾ ಕಾಲೇಜ್ ತಂಡ ರನ್ಸರ್ ಅಪ್ ಪಡೆದರೆ 63 ಅಂಕ ಪಡೆದು ಉಡುಪಿಯ ವೈಕುಂಠ ಬಾಳಿಗಾ ಲಾ ಕಾಲೇಜ್ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿತು. ಪುರುಷ ವಿಭಾಗದ 400, 200, 100 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದ ಹುಬ್ಬಳ್ಳಿಯ ಕೆಎಲ್‌ಇ ಜಿ.ಕೆ. ಕೋತಂಬ್ರಿ ಲಾ ಕಾಲೇಜ್‌ನ ಗಣೇಶ ನಾಯ್ಕ ಉತ್ತಮ ಪುರುಷ ಅಥ್ಲೀಟ್ ಪ್ರಶಸ್ತಿ ಪಡೆದುಕೊಂಡರು.
ಅದೇ ರೀತಿ ಮಹಿಳಾ ವಿಭಾಗದ 400, 200, 100 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದ ಬೆಳಗಾವಿಯ ಆರ್.ಎಲ್. ಲಾ ಕಾಲೇಜಿನ ಅಪೂರ್ವಾ ಮರಾಠೆ ಉತ್ತಮ ಮಹಿಳಾ ಅಥ್ಲೀಟ್ ಪ್ರಶಸ್ತಿಗೆ ಭಾಜನರಾದರು. ಉಳಿದಂತೆ ಪುರುಷರ ವಿಭಾಗದಲ್ಲಿ ಹುಬ್ಬಳ್ಳಿಯ ಕೆಎಲ್‌ಇ ಜಿ.ಕೆ. ಕೋತಂಬ್ರಿ ಲಾ ಕಾಲೇಜ್ ತಂಡ ಚಾಂಪಿಯನ್ ಪಟ್ಟ ಪಡೆಯಿತು.
ಮೈಸೂರಿನ ವಿದ್ಯಾವರ್ಧಕ ಲಾ ಕಾಲೇಜ್ ರನ್ನರ್ ಅಪ್ ಹಾಗೂ ಮಂಗಳೂರಿನ ಎಸ್‌ಡಿಎಂ ಲಾ ಕಾಲೇಜ್ ತಂಡ ತೃತೀಯ ಸ್ಥಾನ ಗಳಿಸಿತು. ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಎಸ್‌ಡಿಎಂ ಲಾ ಕಾಲೇಜ್ ತಂಡ ಚಾಂಪಿಯನ್ ಪಟ್ಟ ಪಡೆದುಕೊಂಡರೆ ಮಂಗಳೂರಿನ ವಿವೇಕಾನಂದ ಲಾ ಕಾಲೇಜ್ ರನ್ನರ್ ಅಪ್ ಹಾಗೂ ಉಡುಪಿ ವೈಕುಂಠ ಬಾಳಿಗಾ ಲಾ ಕಾಲೇಜ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.
ಈ ವಿಜೇತ ತಂಡಗಳಿಗೆ ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಅವರು ಬಹುಮಾನ ವಿತರಿಸಿದರು. ಕುಲಪತಿ ಡಾ| ಸಿ.ಎಸ್.ಪಾಟೀಲ, ಮೌಲ್ಯಮಾಪನ ಕುಲಸಚಿವರಾದ ಡಾ| ಜಿ.ಬಿ. ಪಾಟೀಲ, ಹಣಕಾಸು ಅಧಿಕಾರಿ ಲಲಿತಾ ಲಮಾಣಿ, ಕುಲಸಚಿವರಾದ ಡಾ| ರತ್ನಾ ಆರ್. ಭರಮಗೌಡರ, ದೈಹಿಕ ಶಿಕ್ಷಣ ನಿರ್ದೇಶಕ ಖಾಲಿದ ಖಾನ್ ಇದ್ದರು. ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಹಾಗೂ ಕಲಬುರ್ಗಿ ವಲಯಗಳಿಂದ 58 ಕಾನೂನು ಮಹಾವಿದ್ಯಾಲಯಗಳಿಂದ 500 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.