Advertisement

ಮಂಗಳೂರು ನಗರದಲ್ಲಿ ಹೊಂಡ-ಗುಂಡಿ ರಸ್ತೆ

08:07 PM Nov 06, 2020 | mahesh |

ಮಹಾನಗರ: ಸ್ಮಾರ್ಟ್‌ ಸಿಟಿಯಾಗಿ ರೂಪುಗೊಳ್ಳುತ್ತಿರುವ ಮಂಗಳೂರು ನಗರದ ಬಹುತೇಕ ರಸ್ತೆಗಳು ಹೊಂಡ-ಗುಂಡಿಯಿಂದ ಕೂಡಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಆದರೆ ರಸ್ತೆಗಳಿಗೆ ಮರು ಡಾಮರು ಹಾಕಲು ಅಥವಾ ತೇಪೆ ಹಚ್ಚಲು ಆಡಳಿತ ವ್ಯವಸ್ಥೆ ಇನ್ನೂ ಮುಂದಾಗದಿರುವುದು ವಿಪರ್ಯಾಸ. ನಗರದ ಹೃದಯಭಾಗವಾದ ಹಂಪನಕಟ್ಟೆ ವ್ಯಾಪ್ತಿಯ ರಸ್ತೆಯು ಹೊಂಡಗಳಿಂದಲೇ ಆವರಿಸಿಕೊಂಡಿದ್ದು, ಅಲ್ಲಿ ಧೂಳಿನ ವಾತಾವರಣ ಸೃಷ್ಟಿಯಾಗಿದೆ. ಡಾಮರು ಕಿತ್ತುಹೋಗಿ ಜಲ್ಲಿಕಲ್ಲು ಕಾಣಿಸಿಕೊಂಡಿವೆ. ಹೀಗಾಗಿ, ದ್ವಿಚಕ್ರ ವಾಹನದವರು ಅಪಾಯಕಾರಿಯಾಗಿ ತೆರಳಬೇಕಾಗಿದೆ.

Advertisement

ನಗರವನ್ನು ಸ್ವಾಗತಿಸುವ ಪಂಪ್‌ವೆಲ್‌ ಮೇಲ್ಸೇತುವೆ ಕೆಳಭಾಗದಲ್ಲಿಯೂ ಇದೇ ಪರಿಸ್ಥಿತಿ. ಈ ರಸ್ತೆ ಅನೇಕ ದಿನಗಳ ಹಿಂದೆಯೇ ಗುಂಡಿ ಬಿದ್ದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸಾರ್ವಜನಿಕರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜೋರಾಗಿ ಮಳೆ ಬಂದರೆ ಸಾಕು ರಸ್ತೆ ಗುಂಡಿ ತುಂಬಾ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ನಗರದ ಸ್ಟೇಟ್‌ಬ್ಯಾಂಕ್‌ ಬಳಿ ಖಾಸಗಿ ಬಸ್‌ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆ ಪೂರ್ತಿ ಗುಂಡಿ ಬಿದ್ದಿದೆ. ಈ ಬಗ್ಗೆ ಉದ ಯವಾಣಿ ಕೆಲವು ತಿಂಗಳ ಹಿಂದೆ ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ತೇಪೆ ಕಾರ್ಯಕ್ಕೆ ಸಂಬಧಂಪಟ್ಟ ಇಲಾಖೆ ಮುಂದಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ ಸದ್ಯ ಆ ಪ್ರದೇಶ ಪೂರ್ತಿ ಗುಂಡಿಯಿಂದ ಕೂಡಿದೆ. ವಾಹನ ಸವಾರ ಗಿರೀಶ್‌ ಕುಮಾರ್‌ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ನಗರದ ಹಲವು ಕಡೆಗಳಲ್ಲಿ ರಸ್ತೆ ಗುಂಡಿ ಬಿದ್ದಿದ್ದು, ಸ್ಥಳೀಯಾಡಳಿತ, ಹೆದ್ದಾರಿ ಇಲಾಖೆ ಗಮನಹರಿಸುತ್ತಿಲ್ಲ. ತೇಪೆ ಕಾರ್ಯವನ್ನು ಈವರೆಗೆ ಮಳೆ ಕಾರಣದಿಂದಾಗಿ ದಿನದೂಡಲಾಗಿತ್ತು. ಈಗ ಮಳೆ ಕಡಿಮೆಯಾದರೂ ಕಾಮಗಾರಿ ಆರಂಭವಾಗಿಲ್ಲ ಎಂದರು.

ಸರ್ವೀಸ್‌, ಒಳ ರಸ್ತೆಗಳ ಸ್ಥಿತಿ ಕೇಳುವವರಿಲ್ಲ
ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪ ರ್ಕಕ್ಕೆ ಕೆಲವೊಂದು ಸರ್ವೀಸ್‌ ರಸ್ತೆ ನಿರ್ಮಿ ಸಲಾಗಿದೆ. ಹೆಚ್ಚಿನ ಸರ್ವೀಸ್‌ ರಸ್ತೆಗಳು ಗುಂಡಿಯಿಂದ ಕೂಡಿದೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರವನ್ನು ಸಂಪರ್ಕಿಸುವ ಎರಡೂ ಕಡೆಗಳಲ್ಲಿರುವ ಸರ್ವೀಸ್‌ ರಸ್ತೆಗಳಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಮಳೆ ಬಂದರೆ ಅವುಗಳಲ್ಲಿ ನೀರು ತುಂಬಿ ವಾಹನ ಸವಾರರು ಸಂಕಷ್ಟ ಎದುರಿಸುತ್ತಾರೆ. ಅದೇ ರೀತಿ ಕಾಪಿಕಾಡ್‌, ಕೊಟ್ಟಾರ ಚೌಕಿಯಿಂದಲೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ ಗುಂಡಿ ಬಿದ್ದಿದೆ.

ಒಂದೆಡೆ ಸರ್ವೀಸ್‌ ರಸ್ತೆಗಳ ಅಧೋಗತಿಯಾದರೆ, ಮತ್ತೂಂದೆಡೆ ಒಳ ರಸ್ತೆಗಳ ಸ್ಥಿತಿಯೂ ಕೇಳುವಂತಿಲ್ಲ. ಕಲಾºವಿ ರಸ್ತೆ, ದಡ್ಡಲಕಾಡು ರಸ್ತೆ, ಜೈಲು ರಸ್ತೆ, ಶಿವಬಾಗ್‌ ರಸ್ತೆ, ಮಲ್ಲಿಕಟ್ಟೆ, ಕದ್ರಿ ಸಹಿತ ಅನೇಕ ಕಡೆಗಳಲ್ಲಿ ರಸ್ತೆ ಗುಂಡಿ ಬಿದ್ದಿದೆ. ಬಂಟ್ಸ್‌ಹಾಸ್ಟೆಲ್‌ ಬಳಿಯ ಕರಂಗ ಲ್ಪಾಡಿ ಮಾರುಕಟ್ಟೆಯಿಂದ ಜೈಲು ರಸ್ತೆ ಸಂಪರ್ಕಿ ಸುವ ಸಿ.ಜಿ. ಕಾಮತ್‌ ರಸ್ತೆ, ಪಡೀಲ್‌ ಸಹಿತ ಅನೇಕ ಕಡೆಗಳಲ್ಲಿ ಗುಂಡಿ ಬಿದ್ದಿದೆ. ಇದೇ ರಸ್ತೆಯಲ್ಲಿ ಅವೈಜ್ಞಾನಿಕ ರಸ್ತೆ ಹಂಪ್ಸ್ ಗಳಿದ್ದು, ಕೂಡಲೇ ಸರಿಪಡಿಸಬೇಕಿದೆ.

Advertisement

ಒಳಚರಂಡಿ, ನೀರಿನ ಪೈಪ್‌ಲೈನ್‌ ಸಹಿತ ವಿವಿಧ ಕಾಮಗಾರಿ ನಿಟ್ಟಿನಲ್ಲಿ ನಗರದ ಅನೇಕ ಭಾಗಗಳ ರಸ್ತೆಯ ಮಧ್ಯಭಾಗದಲ್ಲಿ ಅಗೆಯಲಾಗುತ್ತಿದೆ. ಇನ್ನೂ ಅನೇಕ ಕಡೆಗಳಲ್ಲಿ ಅರೆಬರೆ ಕಾಮಗಾರಿ ನಡೆದಿವೆ. ಇದರಿಂದಾಗಿ ಸುಗಮ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ.

ತರಾತುರಿಯಲ್ಲಿ ತೇಪೆ ಕಾರ್ಯ
ನಗರದಿಂದ ಬಜಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆ ಹೊಂಡ ಗುಂಡಿಯಿಂದ ಕೂಡಿತ್ತು. ನ. 5ರಂದು ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಿಂದ ನಗರಕ್ಕೆ ಆಗಮಿಸುವ ರಸ್ತೆಗೆ ತರಾತುರಿಯಲ್ಲಿ ತೇಪೆ ಹಾಕಲಾಗಿದೆ.

ಸದ್ಯದಲ್ಲೇ ಟೆಂಡರ್‌
ನಗರದಲ್ಲಿ ಯಾವೆಲ್ಲಾ ಪ್ರದೇಶಗಳಲ್ಲಿ ಹೊಂಡ-ಗುಂಡಿಯಿಂದ ಕೂಡಿದೆಯೇ ಅದರ ತೇಪೆ ಕಾರ್ಯ ಸದ್ಯದಲ್ಲೇ ಆರಂಭಿಸಲಾಗುವುದು. ಎಲ್ಲೆಲ್ಲ ಗುಂಡಿ ಬಿದ್ದಿದೆ ಎಂಬ ಬಗ್ಗೆ ಸರ್ವೇ ನಡೆಸಲಾಗುವುದು. ಕೆಲವು ದಿನಗಳಲ್ಲಿ ಟೆಂಡರ್‌ ಕರೆದು, ಕಾಮಾಗರಿ ಆರಂಭಿಸುತ್ತೇವೆ.
-ಡಾ| ಜಿ. ಸಂತೋಷ್‌ ಕುಮಾರ್‌, ಮನಪಾ ಉಪ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next