ಮಹಾನಗರ: ಸ್ಮಾರ್ಟ್ ಸಿಟಿಯಾಗಿ ಮುಂದುವರಿಯುತ್ತಿರುವ ಮಂಗಳೂರು ನಗರದ ಸೌಂದರ್ಯಕ್ಕೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಧಕ್ಕೆ ಉಂಟಾಗುತ್ತಿದೆ. ನಗರದ ಅಲ್ಲಲ್ಲಿ ಹೊಸ ಕಾಂಕ್ರೀಟ್ ರಸ್ತೆಗಳನ್ನು ವಿವಿಧ ಕಾಮಗಾರಿ ಉದ್ದೇಶಕ್ಕಾಗಿ ಅಗೆಯಲಾಗುತ್ತಿದ್ದು, ಅಸಮ ರ್ಪಕ ಕಾಮಗಾರಿ ನಡೆಸಿ, ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುತ್ತಿರುವ ಎಂಜಿನಿಯರ್ ವಿರುದ್ಧ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ನಗರದ ಕೆಲವೊಂದು ಕಡೆಗಳಲ್ಲಿ ಇತ್ತೀಚೆಗೆ ಯಷ್ಟೇ ಉದ್ಘಾಟನೆಗೊಂಡ ಕಾಂಕ್ರೀಟ್ ರಸ್ತೆಗಳನ್ನು ಮತ್ತೆ ಅಗೆಯುತ್ತಿದ್ದಾರೆ. ನಗರದ ಪಿವಿಎಸ್‌ನಿಂದ ಬಂಟ್ಸ್‌ಹಾಸ್ಟೆಲ್‌ವರೆಗೆ ರಸ್ತೆ ವಿಸ್ತರಣೆ ಕೆಲವು ಸಮಯಗಳ ಹಿಂದೆ ನಡೆದಿತ್ತು. ಈ ವೇಳೆ ವ್ಯವಸ್ಥಿತ ಚರಂಡಿ ವ್ಯವಸ್ಥೆ ಕೂಡ ನಿರ್ಮಾಣವಾಗಿತ್ತು. ಇದೀಗ ಮತ್ತೆ ಕಾಂಕ್ರೀಟ್ ರಸ್ತೆಗೆ ಕತ್ತರಿ ಬಿದ್ದಿದೆ. ಪಿವಿಎಸ್ ಬಳಿಯ ಕುದು¾ಲ್ ರಂಗರಾವ್ ಹೆಣ್ಣುಮಕ್ಕಳ ವಸತಿ ನಿಲಯ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ಅಗೆದು ಹಾಕಲಾಗಿದೆ. ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದಾಗಿ ಈ ಭಾಗದಲ್ಲಿ ತೊಂದರೆ ಉಂಟಾಗಿತ್ತು. ಇದೇ ಕಾರಣಕ್ಕೆ ಮತ್ತೆ ರಸ್ತೆಗೆ ಕತ್ತರಿ ಹಾಕಿದ್ದು, ವಾಹನ ಸಂಚಾರಕ್ಕೂ ತೊಂದರೆ ಉಂಟಾಗುತ್ತಿದೆ.
ಕೆಲವು ದಿನಗಳ ಹಿಂದೆ ನಗರದ ರಥಬೀದಿಯಿಂದ ಶರವು ಕ್ಷೇತ್ರ ಸಂಪರ್ಕ ರಸ್ತೆಯನ್ನೂ ಇದೇ ರೀತಿ ಅಗೆಯಲಾಗಿತ್ತು. ಈ ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿ ಒಂದು ತಿಂಗಳಾಗಿದ್ದು, ಎಂಜಿನಿ ಯರ್ ನಿರ್ಲಕ್ಷ್ಯದಿಂದಾಗಿ ಕಾಂಕ್ರೀಟ್ ತುಂಡುಗಳನ್ನು ಇದೇ ರಸ್ತೆಯಲ್ಲಿರುವ ಮ್ಯಾನ್‌ಹೋಲ್‌ಗೆ ಬೀಳಿಸಲಾಗಿತ್ತು. ಕಾಮಗಾರಿಯ ವೇಳೆ ಈ ವಿಚಾರ ಗಮನಕ್ಕೆ ಬರಲಿಲ್ಲ. ರಸ್ತೆ ಉದ್ಘಾಟನೆಗೊಂಡು ತಿಂಗಳಾದ ಬಳಿಕ ಈ ರಸ್ತೆಯಲ್ಲಿರುವ ಮ್ಯಾನ್‌ಹೋಲ್‌ನಲ್ಲಿ ಗಲೀಜು ನೀರು ಸರಾಗವಾಗಿ ಹರಿಯದೆ, ಮೇಲೆ ಚಿಮ್ಮುತ್ತಿತ್ತು. ಇದರಿಂದಾಗಿ ಈ ರಸ್ತೆಯ ಇಕ್ಕೆಲದಲ್ಲಿರುವ ಮಂದಿಗೆ ಸಮಸ್ಯೆ ಉಂಟಾಗುತ್ತಿತ್ತು. ಕಾಮಗಾರಿ ಉದ್ದೇಶದಿಂದ ಹೊಸ ಕಾಂಕ್ರೀಟ್ ರಸ್ತೆ ಅಗೆಯಲಾಗಿತ್ತು.
ಸಾಮಾಜಿಕ ಹೋರಾಟಗಾರ ಜಿ.ಕೆ. ಭಟ್ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಮಹಾನಗರ ಪಾಲಿಕೆ ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದಾಗಿ ನಗರದ ಅನೇಕ ಕಡೆಗಳಲ್ಲಿ ಹೊಸ ಕಾಂಕ್ರೀಟ್ ರಸ್ತೆ ಅಗೆಯುವ ಕೆಲಸ ಆಗುತ್ತಿದೆ. ಪಿವಿಎಸ್- ಬಂಟ್ಸ್‌ಹಾಸ್ಟೆಲ್ ರಸ್ತೆಯಲ್ಲಿ ಕೆಲವು ಸಮಯದ ಹಿಂದೆ ರಸ್ತೆ ವಿಸ್ತರಣೆಗೊಳಿಸಿದ್ದು, ಇದೀಗ ಒಳಚರಂಡಿ ಸಮಸ್ಯೆಯಿಂದ ರಸ್ತೆ ಅಗೆಯಲಾಗುತ್ತಿದೆ. ಒಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಹಣವನ್ನು ಪೋಲು ಮಾಡಲಾಗುತ್ತಿದೆ’ ಎನ್ನುತ್ತಾರೆ.
ಒಂದೆಡೆ ಪಾಲಿಕೆ, ಸ್ಮಾರ್ಟ್‌ಸಿಟಿ ಕಾಮಗಾರಿ ಸಾಗುತ್ತಿದ್ದರೆ ಮತ್ತೂಂದೆಡೆ ಗೈಲ್ ಸಂಸ್ಥೆಯಿಂದ ಮನೆ ಮನೆಗೆ ಗ್ಯಾಸ್ ಸಂಪರ್ಕ ಕಾಮಗಾರಿ ಆರಂಭವಾಗಿದೆ. ಇದೇ ಉದ್ದೇಶಕ್ಕೆ ನಗರದ ಹಲವು ಕಡೆಗಳಲ್ಲಿ ರಸ್ತೆ ಅಗೆಯಲಾಗುತ್ತಿದೆ. ದೊಡ್ಡ ದೊಡ್ಡ ಯಂತ್ರದ ಮುಖೇನ ಕಾಮಗಾರಿ ಸಾಗುತ್ತಿದ್ದು, ಕೆಲವೆಡೆ ಕಾಂಕ್ರೀಟ್ ರಸ್ತೆ ಅಗೆದು ಕಾಮಗಾರಿಯನ್ನು ಅರ್ಧದಲ್ಲಿಯೇ ನಿಲ್ಲಿಸಲಾಗಿದೆ.
ನಾಲ್ಕು ಬಾರಿ ಕಾಂಕ್ರೀಟ್ ಅಗೆತ :
ನಗರದಲ್ಲಿ ಜೈಲು ರಸ್ತೆಯಿಂದ ಬಿಜೈಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದ ಕೊಡಿಯಾಲ್‌ಗುತ್ತು ಕ್ರಾಸ್ ಬಳಿ ಕೆಲವು ತಿಂಗಳುಗಳಿಂದ ನಾಲ್ಕು ಬಾರಿ ಕಾಂಕ್ರೀಟ್ ರಸ್ತೆ ಅಗೆಯಲಾಗಿದೆ. ಒಳಚರಂಡಿಯಲ್ಲಿ ನೀರು ಸರಾಗವಾಗಿ ಹೋಗದ ಪರಿಣಾಮ ಮ್ಯಾನ್‌ಹೋಲ್‌ನಿಂದ ಮೇಲಕ್ಕೆ ನೀರು ಬಂದು ಸುತ್ತಮುತ್ತಲಿನ ಮನೆ ಮಂದಿಗೆ ತೊಂದರೆ ಉಂಟಾಗುತ್ತಿತ್ತು. ಆದರೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪಾಲಿಕೆ ವಿಫಲ ವಾಗಿದ್ದು, ಸದ್ಯ ರಸ್ತೆ ಅಗೆದು ಮ್ಯಾನ್‌ಹೋಲ್ ಸರಿಪಡಿಸುವ ಕೆಲಸ ಆರಂಭವಾಗಿದೆ.
ನಗರದ ಅಲ್ಲಲ್ಲಿ ಕಾಂಕ್ರೀಟ್ ಅಗೆಯುವ ಕಾಮಗಾರಿ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಈ ವಿಷಯಕ್ಕೆ ಸಂಬಂಧಿಸಿ ಈಗಾಗಲೇ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸೂಕ್ತ ಕಾರಣ ಕೇಳಲಾಗುವುದು. ಮತ್ತು ಎಚ್ಚರಿಕೆ ನೀಡಲಾಗುವುದು.
-ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್