Advertisement

ನಗರದಲ್ಲಿ ಪ್ರತಿ ವರ್ಷ ನದಿ ಉತ್ಸವ: ಸಚಿವ ಯು.ಟಿ. ಖಾದರ್‌

04:51 AM Jan 27, 2019 | Team Udayavani |

ಮಹಾನಗರ: ಫಲ್ಗುಣಿ ನದಿ ತೀರದಲ್ಲಿ ಕುಳೂರು, ಬಂಗ್ರಕುಳೂರು ಮತ್ತು ಸುಲ್ತಾನ್‌ಬತ್ತೇರಿಗಳಲ್ಲಿ 2018-19ನೇ ಸಾಲಿನಲ್ಲಿ ಕರಾವಳಿ ಉತ್ಸವದ ಅಂಗವಾಗಿ ನದಿ ಉತ್ಸವ ಅತ್ಯಂತ ಯಶಸ್ವಿ ಯಾಗಿ ಜರಗಿದ್ದು, ಮುಂದಿನ ದಿನಗಳಲ್ಲಿ ಪ್ರತಿ ವರ್ಷವೂ ಇದನ್ನು ಹಮ್ಮಿಕೊಳ್ಳಲಾಗುವುದು ಮತ್ತು ಪ್ರೋತ್ಸಾಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ದ.ಕ. ಜಿಲ್ಲಾಡಳಿತ ವತಿಯಿಂದ ಮಂಗಳೂರು ನೆಹರೂ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ದ.ಕ. ಜಿಲ್ಲಾ ಮಟ್ಟದ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣಗೈದು, ಗೌರವರಕ್ಷೆ ಸ್ವೀಕರಿಸಿ ಸಂದೇಶ ನೀಡಿದ ಅವರು, ನಗರದ ಪಿಲಿಕುಳ ನಿಸರ್ಗಧಾಮದ ಆರ್ಥಿಕ ಸಬಲತೆ, ಸ್ವಾವಲಂಬನೆ ಮತ್ತು ಸರ್ವತೋಮುಖ ಬೆಳವಣಿಗೆಗಾಗಿ ರಾಜ್ಯ ಸರಕಾರವು ಇದನ್ನು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ವಾಗಿ ಘೋಷಿಸಿದೆ. ಈ ಸಾಲಿನಲ್ಲಿ ರಾಜ್ಯ ಸರಕಾರವು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ದಿಂದ ಪ್ರವಾಸಿಗರ ಅನುಕೂಲಕ್ಕಾಗಿ ಪಿಲಿಕುಳ ದಲ್ಲಿ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ವಾಹನ ಗಳನ್ನು ಖರೀದಿಸಲು ಒಂದು ಕೋ.ರೂ.ಅನುದಾನ ಮಂಜೂರು ಮಾಡಿದ್ದು, ಇದರಿಂದ 16 ಬ್ಯಾಟರಿಚಾಲಿತ ವಾಹನಗಳನ್ನು ಖರೀದಿಸಿದ್ದು, ಪ್ರವಾಸಿಗರ ಉಪಯೋಗಕ್ಕಾಗಿ ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದರು.

ಅಪಘಾತರಹಿತ ಚಾಲಕರಿಗೆ ಪುರಸ್ಕಾರ
5 ವರ್ಷಗಳ ಕಾಲ ಅಪಘಾತರಹಿತ ಉತ್ತಮ ಸೇವೆ ನೀಡಿದ ಕೆಎಸ್‌ಆರ್‌ಟಿಸಿ ಚಾಲಕರಾದ ಸತೀಶ್‌, ಚಂದ್ರಶೇಖರ್‌, ಗಣೇಶ್‌ ಶೆಟ್ಟಿ, ಚಂದ್ರಶೇಖರ ಕೊಟ್ಟಾರಿ, ಈಶ್ವರ, ದಿ| ಉಗ್ಗಪ್ಪ ನಾಯಕ್‌ರಿಗೆ ಬೆಳ್ಳಿ ಪದಕ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕೇಂದ್ರ ಗ್ರಾಮೀಣ ಕುಡಿಯ ನೀರು ಪೂರೈಕೆ ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ ಜಿಗಜಿಣಗಿ, ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವಾನ್‌ ಡಿ’ಸೋಜಾ, ಶಾಸಕ ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್‌ ಭಾಸ್ಕರ್‌ ಕೆ., ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ, ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಜಿ.ಪಂ. ಸಿಇಒ ಡಾ| ಸೆಲ್ವಮಣಿ ಆರ್‌. ಅಪರ ಜಿಲ್ಲಾಧಿಕಾರಿ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್‌, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಮತ್ತಿತರರಿದ್ದರು.

ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ
ಅತ್ಯುತ್ತಮ ಸೇವೆ ಸಲ್ಲಿಸಿದ ಸರಕಾರಿ ನೌಕರರಿಗೆ ನೀಡುವ ದ.ಕ. ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಪ್ರದಾನ ಮಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ್‌ ಪೂಜಾರಿ, ಮೀನುಗಾರಿಕಾ ಹಿರಿಯ ಸಹಾಯಕ ನಿರ್ದೇಶಕ (ಸಿಆರ್‌ಝಡ್‌) ಮಹೇಶ್‌ ಕುಮಾರ್‌ ಯು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಡಾ| ಪಿ.ಎಚ್. ಪ್ರಕಾಶ್‌ ಶೆಟ್ಟಿ, ದ.ಕನ್ನಡ ಜಿಲ್ಲಾಧಿಕಾರಿಯವರ ಆಪ್ತ ಸಹಾಯಕ ಕೆ.ಎನ್‌. ಸುಧಾಕರ, ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯ ಹಿರಿಯ ಶುಶ್ರೂಶಕಿ ಹರಿಣಿ ಪಿ., ಜಿಲ್ಲಾಧಿಕಾರಿಯವರ ಕಚೇರಿ ವಾಹನ ಚಾಲಕ ಕೆ. ಬಾಬು ನಾಯ್ಕ ಅವರು ಪ್ರಶಸ್ತಿ ಸ್ವೀಕರಿಸಿದರು. ರಾಜ್ಯಪಾಲರಿಂದ ಅತ್ಯುತ್ತಮ ಹೆಚ್ಚುವರಿ ಚುನಾಣಾಧಿಕಾರಿ ಪ್ರಶಸ್ತಿ ಪಡೆದ ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು.

Advertisement

ವಿಶೇಷ ಸೇವೆಗೈದವರಿಗೆ ಸಮ್ಮಾನ
ಜೋಡುಪಾಲದಲ್ಲಿ ಸಂಭವಿಸಿದ ದುರಂತದ ಸಂದರ್ಭ ನೀಡಿರುವ ವಿಶೇಷ ಸೇವೆಯನ್ನು ಗುರುತಿಸಿ ಸುಳ್ಯ ಅಗ್ನಿಶಾಮಕ ದಳದ ಅಬ್ದುಲ್‌ ಗಫೂರ್‌, ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಮಂಜುನಾಥ್‌, ಮಂಗಳೂರು ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಟಿ.ಎನ್‌. ಶಿವಶಂಕರ್‌, ಇಂಡಿಯನ್‌ ಕೋಸ್ಟ್‌ಗಾರ್ಡ್‌ನ ಮುಖ್ಯ ಅಧಿಕಾರಿ ಎಂ.ಟಿ. ಪ್ರದೀಪ್‌, ಮೀಸಲು ಪೊಲೀಸ್‌ ಪಡೆಯ ಗಣೇಶ್‌ ಅವರನ್ನು ಸಮ್ಮಾನಿಸಲಾಯಿತು.

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ
ನಗರದ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಮಲ್ಲಕಂಭದಲ್ಲಿ ಆಕರ್ಷಕ ಯೋಗಾಸನ ಪ್ರದರ್ಶನ ಜರಗಿತು. ಶಾರದಾ ವಿದ್ಯಾಲಯ, ಕೆನರಾ ಸಿಬಿಎಸ್‌ ಶಾಲೆಯ ಡೊಂಗರಕೇರಿ, ಬೋಳೂರು ಅಮೃತಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಆಕರ್ಷಕ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕೆನರಾ ಪ್ರೌಢಶಾಲೆ ಉರ್ವ ವಿದ್ಯಾರ್ಥಿನಿಯರು ದೇಶಭಕ್ತಿಗೀತೆ ಹಾಡಿದರು.

ಮನಃಸ್ಥಿತಿ ಬದಲಾಗಬೇಕು
ಇತಿಹಾಸ ಪುಟ ತಿರುಗಿಸಿದರೆ ನಮ್ಮ ಜಿಲ್ಲೆಯಲ್ಲಿ ಅನೇಕ ದೇಶಪ್ರೇಮಿಗಳು ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ, ಶಾಲಾ ಕಾಲೇಜುಗಳಿಗಾಗಿ, ಆಸ್ಪತ್ರೆಗಳಿಗಾಗಿ, ದೀನದಲಿತರ ವಸತಿಗಾಗಿ ಎಕ್ರೆಗಟ್ಟಲೇ ಭೂಮಿಯನ್ನು ಯಾವುದೇ ಪ್ರತಿಫಲ ಬಯಸದೆ, ಜಾತಿ, ಧರ್ಮ ನೋಡದೆ ದಾನ ಮಾಡಿದ್ದಾರೆ. ಇಂದು ನಾವು ರಸ್ತೆ ವಿಸ್ತರಣೆ ಮಾಡುವಾಗ ಅರ್ಧ ಅಡಿ ಜಾಗಬಿಟ್ಟು ಕೊಡಲು ಸಿದ್ಧರಿಲ್ಲ. ಈ ಮನಃಸ್ಥಿತಿ ಬದಲಾಗಬೇಕು. ಹಕ್ಕುಗಳ ಬಗ್ಗೆ ಮಾತ್ರ ನಾವು ಮಾತನಾಡಿದರೆ ಸಾಲದು. ಜತೆಗೆ ನಮ್ಮ ಕರ್ತವ್ಯಗಳ ಬಗ್ಗೆಯೂ ಕಾಳಜಿ ಬೇಕು ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.

ಆಕರ್ಷಕ ಪಥಸಂಚಲನ
ವಿವಿಧ ತಂಡಗಳಿಂದ ಆಕರ್ಷಕ ಪಥಸಂಚಲನ ಜರಗಿತು. ಕೆಎಸ್‌ಆರ್‌ಪಿ, ಸಿಎಆರ್‌, ಸಿವಿಲ್‌ ಪೊಲೀಸ್‌, ಮಹಿಳಾ ಪೊಲೀಸ್‌, ಗೃಹರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆ, ಎನ್‌ಸಿಸಿ ಹಿರಿಯ ಮತ್ತು ಕಿರಿಯರ ತಂಡ, ಸ್ಕೌಟ್ಸ್‌ ಮತ್ತು ಗೈಡ್ಸ್‌ ತಂಡ ಭಾರತ ಸೇವಾದಲ, ರಸ್ತೆ ಸುರಕ್ಷತಾ ದಳ ಹುಡುಗರ ಮತ್ತು ಹುಡುಗಿಯರ ತಂಡ ಬಲ್ಮಠ ಸರಕಾರಿ ಪ್ರಥಮ ದರ್ಜೆ ಕಾಲೇಜು ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಂಡವು. ಸಿಎಆರ್‌ ವಿಟ್ಠಲ ಶಿಂಧೆ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ಪಥಸಂಚಲನದಲ್ಲಿ ವಿದ್ಯಾರ್ಥಿಗಳ ತಂಡಕ್ಕೆ ನೀಡುವ ಪ್ರಶಸ್ತಿಯಲ್ಲಿ ಭಾರತ ಸೇವಾದಳ ತಂಡ ಪ್ರಥಮ, ರಸ್ತೆ ಸುರಕ್ಷತಾ ದಳ ಹುಡುಗಿಯರ ತಂಡ ದ್ವಿತೀಯ ಪುರಸ್ಕಾರ ಪಡೆದುಕೊಂಡಿತು.

ವಿಂಟೇಜ್‌ ಕಾರು ರ್ಯಾಲಿ
ಗಣರಾಜ್ಯೋತ್ಸವ ಪ್ರಯುಕ್ತ ಮಂಗಳೂರು ಮೋಟಾರ್‌ಸ್ಫೋರ್ಟ್ಸ್ ಕ್ಲಬ್‌ ವತಿಯಿಂದ ವಿಂಟೇಜ್‌ ಕಾರು ರ್ಯಾಲಿ ಆಯೋಜಿಸಲಾಯಿತು. ಹಳೆಯ ಮಾದರಿಯ ಬಜಾಜ್‌ ಆಟೋ ರಿಕ್ಷಾ, ಲ್ಯಾಂಬ್ರೆಟ್ಟಾ ಆಟೋರಿಕ್ಷಾ 1952ರ ಮೋರಿಸ್‌ ಕಾರು, 1929ರ ಫೋರ್ಡ್‌,1936ರ ಜೀಪ್‌, 1982ರ ಪಿಯಟ್ ಕಾರು ಸಹಿತ ವಿವಿಧ ಮಾದರಿಯ ಕಾರುಗಳು, ಸ್ಕೂಟರ್‌, ಮೋಟಾರ್‌ ಬೈಕ್‌ಗಳ ರ್ಯಾಲಿ ನಡೆಯಿತು. ರ್ಯಾಲಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಉದ್ಘಾಟಿಸಿದರು. ಮಂಗಳೂರು ಮೋಟಾರ್‌ಸ್ಫೋರ್ಟ್‌ ಕ್ಲಬ್‌ ಅಧ್ಯಕ್ಷ ಸುಧೀರ್‌ ಮತ್ತಿತರರು ಉಪಸ್ಥಿತರಿದ್ದರು. ತಂದೆ, ತಾಯಿಯನ್ನು ಅವರ ವೃದ್ಧಾಪ್ಯದಲ್ಲಿ ಮರೆಯದೆ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂಬ ಧ್ಯೇಯವಾಕ್ಯದೊಂದಿಗೆ ವಿಂಟೇಜ್‌ ಕಾರು ರ್ಯಾಲಿಯನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next