Advertisement
ಪ್ರಾಪರ್ಟಿ ಕಾರ್ಡ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಅದಕ್ಕೆ ಪೂರಕವಾಗಿ ನಾಗರಿಕರ ಕೆಲವು ಆಸ್ತಿ ಸಂಬಂಧಿಸಿದ ಸಂಶಯ- ಗೊಂದಲಗಳಿಗೆ ತತ್‌ಕ್ಷಣಕ್ಕೆ ಉತ್ತರಿಸುವುದಕ್ಕೆ ಜಿಲ್ಲಾಡಳಿತಕ್ಕೂ ಅಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದರೂ ತಾಂತ್ರಿಕ ಕಾರಣಗಳಿಂದಾಗಿ ಕೆಲವು ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸುವುದಕ್ಕೆ ತೊಡಕಾಗಿವೆ. ಹೀಗಾಗಿ, ಪ್ರಾಪರ್ಟಿ ಕಾರ್ಡ್ ನೋಂದಣಿ ಹಾಗೂ ವಿತರಣೆ ವಿಚಾರವಾಗಿ ಸಣ್ಣ ಪುಟ್ಟ ಗೊಂದಲವಾಗಿದ್ದು, ಒಂದು ತಿಂಗಳೊಳಗೆ ಈ ಎಲ್ಲ ಅನಾನುಕೂಲ ಸರಿಪಡಿಸಲಾಗುವುದು ಎಂದು ಖುದ್ದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಭರವಸೆ ನೀಡಿದ್ದಾರೆ. ತುರ್ತು ಆವಶ್ಯಕತೆ ಇದ್ದವರು ಮೊದಲು ಪ್ರಾಪರ್ಟಿ ಕಾರ್ಡ್‌ಗೆ ಅರ್ಜಿ ಸಲ್ಲಿಸಿ. ಭೂ ದಾಖಲೆ ಸಂಬಂಧಿಸಿದಂತೆ ಯಾವುದೇ ವ್ಯವಹಾರಗಳು ಇಲ್ಲದವರು ನಿಧಾನವಾಗಿ ಪ್ರಾಪರ್ಟಿ ಕಾರ್ಡ್ ಪಡೆದು ಕೊಳ್ಳಬಹುದು ಎಂಬುದಾಗಿ ತಿಳಿಸಿದ್ದಾರೆ.
Related Articles
ಪ್ರಸ್ತುತ ಯೋಜನಾ ಕಚೇರಿಯಲ್ಲಿ ಪ್ರಾಪರ್ಟಿ ಕಾರ್ಡ್ ಅರ್ಜಿ ಸ್ವೀಕಾರ ಸಹಿತ ಕಾರ್ಡ್ ನೀಡುವ ಪ್ರಕ್ರಿಯೆಗಳು ನಡೆಯುತ್ತಿದೆ. ಆದರೆ ಸಿಬಂದಿ ಕೊರತೆಯಿಂದಾಗಿ ಕೆಲಸ ನಿಧಾನವಾಗುತ್ತಿದೆ. ಈ ನಡುವೆ ಬೇರೆಡೆ ಹೆಚ್ಚುವರಿ ಸೆಂಟರ್ ತೆರೆಯಲು ಹಾಗೂ ಸಿಬಂದಿ ಒದಗಿಸುವ ಬಗ್ಗೆ ಸರಕಾರಕ್ಕೆ ಮನವಿ ನೀಡಲಾಗಿದೆ. ಜತೆಗೆ ಕಂದಾಯ ಇಲಾಖೆಯ “ಭೂಮಿ’, “ಕಾವೇರಿ’ ಸಾಫ್ಟ್‌ವೇರ್‌ನೊಂದಿಗೆ, ಪ್ರಾಪರ್ಟಿ ಕಾರ್ಡ್‌ನ ಸಾಫ್ಟ್‌ವೇರ್ ಕೂಡ ಲಿಂಕ್ ಮಾಡಿ ಮಾಹಿತಿ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಆ ಮೂಲಕ ಕೆಲವೊಂದು ಮಾಹಿತಿಗಳನ್ನು ಈ ಸಾಫ್ಟ್‌ವೇರ್‌ಗಳಲ್ಲಿ ಅಪ್‌ಡೇಟ್ ಮಾಡಬೇಕಿರುವು ದರಿಂದ ಸರ್ವರ್ ಸಮಸ್ಯೆಯೂ ಎದುರಾಗಿದೆ.
Advertisement
ತಿಂಗಳೊಳಗಾಗಿ ಸಮಸ್ಯೆ ಪರಿಹಾರಪ್ರಸ್ತುತ ಕಂದಾಯ ಇಲಾಖೆ ಸಿಬಂದಿ ಮನೆ- ಮನೆಗೆ ತೆರಳಿ ದಾಖಲೆ ಸಂಗ್ರಹ ಮಾಡುತ್ತಿದ್ದಾರೆ. ಹಂತ ಹಂತವಾಗಿ ಕೆಲಸ ನಡೆಯುತ್ತಿದೆ. ಆದರೆ, ಹಳೆಯ ಡಾಟಾ ಎಂಟ್ರಿ ಬಾಕಿ ಇರುವುದರಿಂದ ಕೆಲಸ ನಿಧಾನವಾಗುತ್ತಿದೆ. ಈ ಹಿಂದೆ ಅರ್ಜಿ ಹಾಕಿದವರದ್ದು, ದಾಖಲೆಗಳನ್ನು ಹೊಂದಾಣಿಕೆ ಮಾಡುವುದರಲ್ಲಿ ಸ್ವಲ್ಪ ತಡವಾಗುತ್ತಿದೆ. ಅದು ಸರಿಯಾದರೆ ಈಗ ಅರ್ಜಿ ಸಲ್ಲಿಸುವವರಿಗೆ ನಾಲ್ಕು ದಿನಗಳಲ್ಲಿ ಡ್ರಾಫ್ಟ್ ಕಾರ್ಡ್ ನೀಡಲಾಗುತ್ತದೆ. ಬಳಿಕ ತಿಂಗಳೊಳಗೆ ಕಾರ್ಡ್ ನಿಮ್ಮ ಕೈ ಸೇರಲಿದೆ. ಅರ್ಜಿ ಸಲ್ಲಿಸಿ ಸೂಕ್ತ ದಾಖಲೆ ಇದ್ದಲ್ಲಿ ಶೀಘ್ರ ಕಾರ್ಡ್ ನೀಡಲಾಗುತ್ತದೆ. ಸದ್ಯ ಎದುರಾಗಿರುವ ಎಲ್ಲ ಗೊಂದಲಗಳು ತಿಂಗಳೊಳಗೆ ಬಗೆಹರಿಯಲಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವೆಬ್‌ಸೈಟ್ ಕೆಲಸ ಪೂರ್ಣ
ಪ್ರಾಪರ್ಟಿ ಕಾರ್ಡ್ ಸಂಬಂಧಿಸಿ ಪೂರ್ಣ ಮಾಹಿತಿ ಹೊಂದಿರುವ ವೆಬ್‌ಸೈಟ್ ಸಿದ್ಧಗೊಂಡಿದೆ. ಈ ವೆಬ್ ಸೈಟ್‌ನಲ್ಲಿ ಪಿಆರ್ ಕಾರ್ಡ್ ಪಡೆಯುವ ವಿಧಾನ, ಜಾಗದ ನಕ್ಷೆಯ ಮಾಹಿತಿ, ಕಾಲ್ ಸೆಂಟರ್ ನಂಬರ್, ದಾಖಲೆಗಳ ಕುರಿತಾದ ಸಂಪೂರ್ಣ ಮಾಹಿತಿ ಲಭಿಸಲಿದೆ. ಕಂದಾಯ ಇಲಾಖೆಯ ದತ್ತಾಂಶಗಳ ಸಂಯೋಜನೆ ಬಾಕಿ ಇದೆ. ಆ ಕೆಲಸ ಪೂರ್ಣಗೊಂಡ ಬಳಿಕ ವೆಬ್‌ಸೈಟ್ ಅನಾವರಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಸೆಂಥಿಲ್ ತಿಳಿಸಿದ್ದಾರೆ. ಭೂಮಿ ಒತ್ತುವರಿ ಮಾಡಿದವರಿಗೆ ಕಂಟಕ
ನಗರ ವ್ಯಾಪ್ತಿಯಲ್ಲಿ ರಾಜ್ಯ ಸರಕಾರವು ಪ್ರಾಪರ್ಟಿ ಕಾರ್ಡ್ ಅನ್ನು ಆಸ್ತಿ ಮಾಲಕರಿಗೆ ಕಡ್ಡಾಯಗೊಳಿಸುತ್ತಿರುವುದರ ಮುಖ್ಯ ಉದ್ದೇಶ ಸರಕಾರಿ ಭೂ ಒತ್ತುವರಿ ಸಹಿತ ದಾಖಲೆಗಳು ಇಲ್ಲದೆ ಆಸ್ತಿಗಳನ್ನು ಕಬಳಿಸಿದವರನ್ನು ಪತ್ತೆ ಮಾಡುವುದು. ಅಂದರೆ, ಪ್ರಾಪರ್ಟಿ ಕಾರ್ಡ್ ಮೂಲಕ ಆಸ್ತಿ ಮಾಲಕರನ್ನು ನೋಂದಣಿ ಮಾಡಿಸಿಕೊಳ್ಳುವುದರಿಂದ ಎಲ್ಲಿ ಸರಕಾರಿ ಭೂಮಿ ಕಬಳಿಕೆಯಾಗಿದೆ ಮತ್ತು ಅದು ಯಾರ ವಶದಲ್ಲಿದೆ ಎನ್ನುವುದು ಬೆಳಕಿಗೆ ಬರುತ್ತಿದೆ. ಈ ಕಾರಣದಿಂದಲೇ ನಗರದಲ್ಲಿ ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ ಕೆಲವು ಭೂಮಾಫಿಯಾಗಳು ಪ್ರಾಪರ್ಟಿ ಕಾರ್ಡ್ ಕಡ್ಡಾಯದ ವಿರುದ್ಧ ತೆರೆಮರೆಯಲ್ಲಿ ಅಪಸ್ವರ ಎತ್ತುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೂ ಬಂದಿದೆ. ಇನ್ನೊಂದೆಡೆ, ಆಸ್ತಿ ಮಾಲಕರು ಒಮ್ಮೆ ಪ್ರಾಪರ್ಟಿ ಕಾರ್ಡ್ ಮಾಡಿಸಿಕೊಂಡರೆ, ಭವಿಷ್ಯದಲ್ಲಿ ಯಾವುದೇ ಆಸ್ತಿ ಸಮಸ್ಯೆಗಳಿಗೆ ಆ ಕಾರ್ಡ್ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು. ಆ ಮೂಲಕ, ಆಸ್ತಿ ಪರಭಾರೆ ವಿಚಾರದಲ್ಲಿ ಮಧ್ಯವರ್ತಿಗಳ ಹಾವಳಿಯೇ ಎದುರಾಗುವುದಿಲ್ಲ. ಹೀಗಿರುವಾಗ, ಭೂಮಾಫಿಯಾ ಹಾಗೂ ಮಧ್ಯವರ್ತಿಗಳ ಹಾವಳಿ ಲಾಭಿಯು ಪ್ರಾಪರ್ಟಿ ಕಾರ್ಡ್ ಕಡ್ಡಾಯಗೊಳಿಸಿರುವುದನ್ನು ರದ್ದುಗೊಳಿಸುವುದಕ್ಕೆ ಒತ್ತಡ ಕೂಡ ಹೇರುತ್ತಿದೆ ಎನ್ನಲಾಗಿದೆ. ಬ್ರೋಕರ್ ಹಾವಳಿ
ಈ ನಡುವೆ ಪ್ರಾಪರ್ಟಿ ಕಾರ್ಡ್ ಮಾಡಿಕೊಡುವಲ್ಲಿ ಬ್ರೋಕರ್‌ಗಳ ಹಾವಳಿಯೂ ಮುಂದುವರಿದಿದೆ. ಸಂಬಂಧಪಟ್ಟ ಆಸ್ತಿ ಮಾಲಕರೇ ಅರ್ಜಿ ಸಲ್ಲಿಕೆ, ಪೂರಕ ದಾಖಲೆಗಳನ್ನು ಒದಗಿಸಿ, ಪ್ರಾಪರ್ಟಿ ಕಾರ್ಡ್ ಪಡೆಯಬೇಕೆಂಬುದನ್ನು ಅಧಿಕಾರಿಗಳು ತಿಳಿಸಿದ್ದರೂ ಕೆಲವು ಜನ ಬ್ರೋಕರ್‌ಗಳ ನೆರವು ಪಡೆಯುತ್ತಿದ್ದಾರೆ. ಆದರೆ ಇದಕ್ಕಾಗಿ ಬ್ರೋಕರ್ ಗಳನ್ನು ಸಂಪರ್ಕಿಸುವ ಅವಶ್ಯಕತೆ ಇಲ್ಲ ಎನ್ನುತ್ತಾರೆ ಪ್ರಾಪರ್ಟಿ ಕಾರ್ಡ್ ಅಧಿಕಾರಿಗಳು ತಿಳಿಸುತ್ತಾರೆ. ಫಾಸ್ಟ್ ಟ್ರ್ಯಾಕ್‌ವ್ಯವಸ್ಥೆ
ಆಸ್ತಿ ಮಾರಾಟ ಮಾಡುವ ಪ್ರಕ್ರಿಯೆಗೆ ಪ್ರಾಪರ್ಟಿ ಕಾರ್ಡ್ ಅತಿ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಥಮವಾಗಿ ಈ ಕಾರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರಾಟ ಉದ್ದೇಶದ ಮನೆ, ಜಮೀನಿಗೆ ತ್ವರಿತವಾಗಿ ಪ್ರಾಪರ್ಟಿ ಕಾರ್ಡ್ ನೀಡಲು ಫಾಸ್ಟ್ ಟ್ರ್ಯಾಕ್ ವ್ಯವಸ್ಥೆ ಇದೆ. ಮಾರಾಟಗಾರರು ಮಾರಾಟ ಕರಾರು ಪತ್ರವನ್ನು ತೋರಿಸಿ ಫಾಸ್ಟ್ ಟ್ರ್ಯಾಕ್ ಮೂಲಕ ಕಾರ್ಡ್ ಪಡೆಯಬಹುದಾಗಿದೆ. ಎರಡನೇದಾಗಿ ವಿದೇಶದಲ್ಲಿರುವ ಆಸ್ತಿ ಮಾಲಕರು ಊರಿಗೆ ಬಂದು ಸದ್ಯದಲ್ಲೇ ಹಿಂದಿರುಗುವ ಸಂದರ್ಭದಲ್ಲಿ ಅವರೂ ಕೂಡ ಫಾಸ್ಟ್ ಟ್ರ್ಯಾ ಕ್‌ನಲ್ಲಿ ಕಾರ್ಡ್ ಪಡೆಯಬಹುದಾಗಿದೆ. ತುರ್ತಾಗಿ ಕಾರ್ಡ್ ಬೇಕಿರುವವರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ದಾಖಲೆಗಳು ಸಮರ್ಪಕವಾಗಿದ್ದಲ್ಲಿ ಕೆಲ ದಿನಗಳಲ್ಲಿಯೇ ಪ್ರಾಪರ್ಟಿ ಕಾರ್ಡ್ ಒದಗಿಸುವ ವ್ಯವಸ್ಥೆಯೂ ಇದೆ. ವಿಶೇಷ ವರದಿ