Advertisement

Mangalore: ಊದು ಪೂಜೆ: ಹುಲಿ ವೇಷಕ್ಕೆ ಮುಹೂರ್ತ!

03:53 PM Oct 06, 2024 | Team Udayavani |

ಮಹಾನಗರ: ಯಾವುದೇ ಶುಭ ಕಾರ್ಯಕ್ಕೆ  ಮುನ್ನ  ಗಣಪತಿಯನ್ನು ಪೂಜಿಸುವುದು ತುಳುನಾಡಿನ ಸಂಪ್ರದಾಯ. ಯಕ್ಷಗಾನದಲ್ಲಿ ಚೌಕಿ ಪೂಜೆ ಇದ್ದಂತೆ ಬೇರೆ ಬೇರೆ ಕಲಾ ಪ್ರಕಾರದಲ್ಲಿ ಬೇರೆ ಬೇರೆ ಸಂಪ್ರದಾಯಗಳಿವೆ.  ಈ ಪೈಕಿ ಹುಲಿ ವೇಷ ಹೊರಡುವ ಮುನ್ನ ನಡೆಯುವ ಆರಾಧನೆಯೇ ‘ಊದು’!

Advertisement

ಮೊದಲೆಲ್ಲ ಚೌತಿ ಅಥವಾ ನವರಾತ್ರಿಯ 40 ದಿನಗಳ ಮುನ್ನವೇ ಹುಲಿ ವೇಷ ಹಾಕುವವರು ಮುಹೂರ್ತ ಮಾಡುತ್ತಿದ್ದರು. ಇದಕ್ಕೆ ‘ಊದು’ ಇಡುವುದು ಎನ್ನುತ್ತಾರೆ. ಆದರೆ ಆಧುನಿಕವಾಗಿ ಕಾಲ ಬದಲಾದ ಕಾರಣದಿಂದ 40 ದಿನ ಇದ್ದ ಊದು ಕ್ರಮ ಒಂದೆರಡು ದಿನಕ್ಕೆ ಸೀಮಿತವಾಗಿದೆ.

ಮುಳಿಹಿತ್ಲು ಹುಲಿ ವೇಷ ತಂಡದ ಪ್ರಮುಖರಾದ ದಿನೇಶ್‌ ಕುಂಪಲ ಅವರ ಪ್ರಕಾರ, ‘ಹುಲಿ ತಂಡದ ಹುಲಿ ವೇಷ ಇದೆ ಎಂಬುದನ್ನು ಊರಿಗೆ ಪರಿಚಯಿಸಲು ಊದು ಕ್ರಮ ಹಿಂದೆ ಜಾರಿಗೆ ಬಂದಿತ್ತು. ಯಾಕೆಂದರೆ ಆಗ ಆಮಂತ್ರಣ, ಮೊಬೈಲ್‌ ವ್ಯವಸ್ಥೆ ಇರಲಿಲ್ಲ. ತಾಸೆಯ ಶಬ್ಧದ ಮೂಲಕ ಪ್ರಚಾರ ನಡೆಸುವ ಕ್ರಮ ಇದಾಗಿತ್ತು’ಎನ್ನುತ್ತಾರೆ.

‘ಊದುವಿಗೆ ದೇವರ ಫೋಟೋ ಇಡುವ ಕ್ರಮ ಇಲ್ಲವಾದರೂ, ಅಕ್ಕಿ-ತೆಂಗಿನಕಾಯಿ ಇಟ್ಟು ಗಣಪತಿಯನ್ನು ಪ್ರಾರ್ಥಿಸಿ, ಹುಲಿ ವೇಷದ ಸಂದರ್ಭ ಬಳಕೆಯಾಗುವ ಹುಲಿ ತಲೆ, ಚಡ್ಡಿ, ಜಂಡೆ ಸಹಿತ ಎಲ್ಲಾ ಪರಿಕರಗಳನ್ನು ದೇವರ ಮುಂದಿರಿಸಿ ಲೋಬಾನ ಸೇವೆ ಮಾಡಲಾಗುತ್ತದೆ. ಊದು ಎನ್ನುವುದು ಹುಲಿ ವೇಷಕ್ಕೆ ಮುಹೂರ್ತವೂ ಹೌದು. ಮೊದಲೆಲ್ಲ ಚೌತಿಯ ಸಂದರ್ಭದಲ್ಲಿ ಊದು ನಡೆಯುತ್ತಿತ್ತು. ಅಂದರೆ ನವರಾತ್ರಿಯ ಹುಲಿವೇಷಕ್ಕೆ ಚೌತಿಯ ಸಂದರ್ಭದಲ್ಲೇ ಮುಹೂರ್ತ ಆಗುತ್ತಿತ್ತು. ಆದರೆ, ಈಗ ಒಂದು ದಿನಕ್ಕೆ ಮೊದಲು ಊದು ಇಡಲಾಗುತ್ತದೆ. ಪೈಂಟರ್‌ ಸಹಿತ ಹಲವರಿಗೆ ಮುಂಗಡ ಹಣವನ್ನು ಅಂದೇ ನೀಡುತ್ತಾರೆ’’ ಎಂದು ವಿವರಿಸುತ್ತಾರೆ ದಿನೇಶ್‌ ಕುಂಪಲ.

Advertisement

ಊದು ದಿನ ವೇಷ ಹಾಕದೆ ನರ್ತನ ಸೇವೆ

  • ಈಗ ರಂಗ್‌ಗೆ ಕುಳಿತುಕೊಳ್ಳುವ ಮುನ್ನಾ ದಿನ ಊದು ಕಾರ್ಯಕ್ರಮ ನಡೆಯುತ್ತದೆಯಾದರೂ ವೇಷಧಾರಿ ಅದಕ್ಕಿಂತಲೂ ಒಂದು ವಾರ ಹಿಂದಿನಿಂದಲೇ ವ್ರತಾಚರಣೆಯಲ್ಲಿರುತ್ತಾರೆ.
  • ಪೂಜೆ ಬಳಿಕ ಗುರು ಹಿರಿಯರ ಆಶೀರ್ವಾದ ಪಡೆದು, ವೇಷ ಹಾಕದೆ ನರ್ತನ ಮಾಡುತ್ತಾರೆ. ಆಗ ಕೆಲವರಿಗೆ ಆವೇಶ ಬರುವುದೂ ಇದೆ.

‘ಊದು’ ಆದ ಬಳಿಕ ನಿತ್ಯ ಅಭ್ಯಾಸವಿತ್ತು!
ಎಮ್ಮೆಕೆರೆ ಪ್ರಂಡ್ಸ್‌ ಸರ್ಕಲ್‌ ಸ್ಥಾಪಕಾಧ್ಯಕ್ಷ ಕೃಷ್ಣಾನಂದ ಶೆಟ್ಟಿ ಅವರ ಪ್ರಕಾರ, ಎಮ್ಮೆಕೆರೆ ಪ್ರಂಡ್ಸ್‌ ಸರ್ಕಲ್‌ನಿಂದ ಈಗಲೂ ಚೌತಿಯ ದಿನವೇ ಊದು ನಡೆಯುತ್ತದೆ. ಅಂದಿನಿಂದ ಮಾಂಸಾಹಾರ ತ್ಯಜಿಸಿ ಸಸ್ಯಾಹಾರ ಸೇವಿಸ ಬೇಕು. ಬಳಿಕ ಪ್ರತೀ ದಿನವೂ ಚಪ್ಪಲಿ ಧರಿಸದೆ ಹುಲಿ ವೇಷದ ಕುಣಿತ ಅಭ್ಯಾಸ ಮಾಡಬೇಕು ಎಂಬುದು ನಿಯಮ. ಆದರೆ, ಈಗ ಒತ್ತಡದ ಕಾರಣದಿಂದ ಹುಲಿ ವೇಷ ಹೊರಡುವ ಮುನ್ನಾ ದಿನ ಕೆಲವೆಡೆ ಊದು ಇಡಲಾಗುತ್ತದೆ.

ಊದು ಈಗ ಭಾರೀ ಫೇಮಸ್‌!
ಊದು ಕಾರ್ಯಕ್ರಮವನ್ನು ಈಗ ವೈಭವದಿಂದ ಆಚರಿಸಲಾಗುತ್ತದೆ. ಗಣ್ಯರೂ ಬರುತ್ತಾರೆ. ಚಿತ್ರ ನಟ ರಿಷಭ್‌ ಶೆಟ್ಟಿ ಅವರು ಗುರುವಾರ ರಾತ್ರಿ ಊದು ಕಾರ್ಯಕ್ರಮಕ್ಕೆ ಬಂದಿದ್ದರು. ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ   ಕಾರ್ಯಕ್ರಮವೊಂದರಲ್ಲಿ ಹುಲಿ ಕುಣಿತದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಯಾವ ಟೀಮ್‌ನ ಹುಲಿ ಯಾವಾಗ ಎನ್ನುವ ಬದಲು ಅವರ ಊದು ಯಾವಾಗ ಎಂದು ಕೇಳುವ ದಿನಗಳು ಈಗ!

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next