Advertisement

‘ಸಹೋದರತೆಯೇ ಜೀವನದ ಮೂಲಮಂತ್ರ’

05:40 AM Jan 14, 2019 | |

ಮಹಾನಗರ : ಭಾರತ ಸಂಸ್ಕಾರ ಸಂಸ್ಕೃತಿಯ ತವರು ನೆಲವಾಗಿದ್ದು, ಇಲ್ಲಿ ಜಾತಿಧರ್ಮ ಮೀರಿ ಸಹೋದರತೆಯಿಂದ ಬದುಕುವ ನೆಲೆಯಲ್ಲಿ ಸರ್ವರೂ ಶ್ರಮಿಸಬೇಕು. ಸಹೋದರತೆಯೇ ಜೀವನದ ಮೂಲಮಂತ್ರವಾಗಲಿ ಎಂದು ಬಹುಭಾಷಾ ಗಾಯಕ ಡಾ| ಕೆ.ಜೆ. ಯೇಸುದಾಸ್‌ ಕರೆ ನೀಡಿದ್ದಾರೆ.

Advertisement

ಮಂಗಳೂರಿನ ಕೇರಳ ಸಮಾಜಂ ವತಿಯಿಂದ ಶುಕ್ರವಾರ ನಗರದ ಪುರಭವನದಲ್ಲಿ ಆಯೋಜಿಸಲಾದ ಕ್ರಿಸ್ಮಸ್‌ ಮತ್ತು ಹೊಸ ವರ್ಷಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಹಿರಿಯರು ಪಾಲನೆ ಮಾಡುತ್ತ ಬಂದಿರುವ ಸಂಸ್ಕೃತಿ ಸಂಸ್ಕಾರಗಳನ್ನು ಎಳೆಯ ಮನಸುಗಳು ಪಾಲನೆ ಮಾಡುತ್ತ ಬರಬೇಕು. ಬಾಹ್ಯವಾಗಿರುವ ಸಂಸ್ಕೃತಿಗೆ ಮೊರೆಹೋಗಿ ಭಾರತೀಯತೆಯನ್ನು ಮರೆಯುವ ಪರಿಸ್ಥಿತಿ ಎದುರಾಗಬಾರದು. ಲೋಕಾ ಸಮಸ್ತಾ ಸುಖೀನೋ ಭವಂತು ಎಂಬ ತತ್ತ್ವದಡಿಯಲ್ಲಿ ಸಹೋದರ ತೆಯಿಂದ ಬಾಳಿ ಬದುಕುವ ಮನೋಕಲ್ಪನೆ ನಮ್ಮದಾಗಬೇಕು ಎಂದರು. ‘ಜಾತಿ ಬೇಧಂ ಮತ ದ್ವೇಷಂ’ ಎಂಬ ಸಾಹಿತ್ಯದ ಹಾಡನ್ನು ಭಾಷಣದ ಮಧ್ಯೆ ಯೇಸುದಾಸ್‌ ಹಾಡಿದರು.

ಸಮ್ಮಾನ
ಇದೇ ವೇಳೆ ಕೇರಳ ಸಮಾಜಂ ಮಾಜಿ ಅಧ್ಯಕ್ಷ ಕೆ.ಎಂ. ಸಚ್ಚೀಂದ್ರನಾಥ್‌ ಅವರನ್ನು ಸಮ್ಮಾನಿಸಲಾಯಿತು. ಕೇರಳ ಸಮಾಜಂನ ಅಧ್ಯಕ್ಷ ಟಿ.ಕೆ. ರಾಜನ್‌ ಅಧ್ಯಕ್ಷತೆ ವಹಿಸಿದ್ದರು. ಗೋಕುಲಂ ಗ್ರೂಪ್‌ನ ಅಧ್ಯಕ್ಷ ಗೋಕುಲಂ ಗೋಪಾಲನ್‌, ಕೋಸ್ಟ್‌ಗಾರ್ಡ್‌ ಕಮಾಂಡರ್‌ ಡಿಐಜಿ ಎಸ್‌.ಎಸ್‌. ದಸಿಲ, ಸಂಗೀತ ನಿರ್ದೇಶಕ ಗುರುಕಿರಣ್‌, ಉದ್ಯಮಿ ಜೆಮಿನಿ ಶಂಕರ್‌, ಉದ್ಯಮಿ ವಿ. ಕರುಣಾಕರನ್‌, ಚಂದ್ರನ್‌ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಸ್ಫರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣೆ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ಕೇರಳದ ಪ್ರಸಿದ್ಧ ಕಲಾವಿದರಿಂದ ‘ಕಲಾಸಂಧ್ಯ’ ಸಂಗೀತ ರಸಮಂಜರಿ ನಡೆಯಿತು. ಕೇರಳ ಸಮಾಜಂನ ಮ್ಯಾಕ್ಸಿಂ ಸೆಬಾಸ್ಟಿಯನ್‌ ಸ್ವಾಗತಿಸಿದರು. ಗೋಪಾಲನ್‌ ನಾಯರ್‌ ವಂದಿಸಿದರು

ಪಿತೃ ವಾಕ್ಯ ಪರಿಪಾಲಕ!
ಯೇಸುದಾಸ್‌ ಮಾತನಾಡಿ, ತಂದೆ-ತಾಯಿ ಕಣ್ಣಿಗೆ ಕಾಣುವ ದೇವರು. ಅವರು ಮಾನವೀಯತೆ, ಸಹೋದರತೆಯ ಬಗ್ಗೆ ತಿಳಿಸಿಕೊಡುತ್ತಾರೆ. ಹೀಗಾಗಿ ತಂದೆ, ತಾಯಿ ಹೇಳಿದ ಮಾತಿಗೆ ಒಂದಿನಿತೂ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ನನಗೆ ನನ್ನ ತಂದೆ ಎರಡು ಮಾತು ಹೇಳಿ, ಪಾಲಿಸುವಂತೆ ಸೂಚಿಸಿದ್ದರು. ಯಾವುದೇ ಪಕ್ಷದ ಜತೆಗೆ ಸೇರಬಾರದು ಮತ್ತು ಯಾವುದೇ ಸಂಘಟನೆಗಳಲ್ಲಿ ತೊಡಗಿಗೊಳ್ಳಬಾರದು ಎಂದಿದ್ದರು. ಹೀಗಾಗಿ ಬೇರೆ ಬೇರೆ ಪಕ್ಷದವರು ವಿನಂತಿಸಿದರೂ ಯಾವುದೇ ಪಕ್ಷದ ಜತೆಗೆ ಗುರುತಿಸಿಕೊಂಡಿಲ್ಲ. ಸಂಘಟನೆಗಳ ಜತೆಗೆ ತೊಡಗಿಸಿಕೊಂಡಿಲ್ಲ. ಸಹೋದರತೆ, ಮಾನವೀಯತೆಯ ಕಾರ್ಯದಲ್ಲಿ ಮಾತ್ರ ಜತೆಯಾಗಿದ್ದೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next