ಮಂಗಳೂರು: ಎ.ಎಸ್. ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಆಶಿಕಾ ಸುವರ್ಣ ನಿರ್ಮಾಣ, ಎಂ.ಪಿ. ಪ್ರಧಾನ್ ನಿರ್ದೇಶನದ “ವಿಐಪೀಸ್ ಲಾಸ್ಟ್ ಬೆಂಚ್’ ತುಳು ಸಿನೆಮಾ ಶುಕ್ರವಾರ ಕರಾವಳಿಯಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ಯಶಸ್ವಿ ಪ್ರದರ್ಶನದ ಮೂಲಕ ಮೆಚ್ಚುಗೆಗೆ ಕಾರಣವಾಯಿತು.
ಮಂಗಳೂರಿನಲ್ಲಿ ರೂಪವಾಣಿ, ಬಿಗ್ ಸಿನೆಮಾಸ್, ಪಿವಿಆರ್, ಸುರತ್ಕಲ್ ನಲ್ಲಿ ನಟರಾಜ್, ಸಿನೆಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನೆಮಾಸ್, ಉಡುಪಿಯಲ್ಲಿ ಕಲ್ಪನಾ, ಮಣಿಪಾಲದಲ್ಲಿ ಭಾರತ್ ಸಿನೆಮಾಸ್, ಐನಾಕ್ಸ್, ಸುಳ್ಯದಲ್ಲಿ ಸಂತೋಷ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಅರುಣಾ ಚಿತ್ರ ಮಂದಿರದಲ್ಲಿ ಸಿನೆಮಾ ಬಿಡುಗಡೆಯಾಯಿತು.
ಬಿಗ್ ಸಿನೆಮಾಸ್‌ನಲ್ಲಿ ಸಿನೆಮಾ ಬಿಡುಗಡೆ ಮಾಡಿದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಸಿನೆಮಾ ಯಶಸ್ವಿಯಾಗಿ ತುಳುನಾಡಿನ ಜತೆಗೆ ಹೊರರಾಜ್ಯ, ದೇಶದ ಗಡಿಯನ್ನು ದಾಟಿ ಮುನ್ನುಗ್ಗಲಿ ಎಂದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತಾಡಿ, ಲಾಸ್ಟ್ ಬೆಂಚ್ ಸಿನೆಮಾ ಯಶಸ್ವಿಯಾಗಿ ಮುನ್ನಡೆಯಲಿ ಎಂದರು.
ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಲಾಸ್ಟ್‌ಬೆಂಚ್ ಸಿನೆಮಾದಿಂದ ತುಳು ಭಾಷೆಗೆ ಹೆಚ್ಚಿನ ಬಲ ಬರಲಿ ಎಂದರು. ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಕುಳಾಯಿ ಮಾಧವ ಭಂಡಾರಿ, ಕೆ.ಕೆ. ಪೇಜಾವರ, ಜಗನ್ನಾಥ ಶೆಟ್ಟಿ ಬಾಳ, ಕ್ಯಾಟ್ಕ ಅಧ್ಯಕ್ಷ ಮೋಹನ್ ಕೊಪ್ಪಲ, ಲಾಸ್ಟ್‌ಬೆಂಚ್ ಚಿತ್ರ ನಿರ್ಮಾಪಕಿ ಆಶಿಕಾ ಸುವರ್ಣ, ಸಹ ನಿರ್ಮಾಪಕ ಕಿರಣ್ ಶೆಟ್ಟಿ, ನಟಿ ಆರಾಧ್ಯ ಶೆಟ್ಟಿ, ನಟ ಭೋಜರಾಜ ವಾಮಂಜೂರು, ನವೀನ್ ಚಂದ್ರ ಪೂಜಾರಿ, ನಟರಾದ ವಿನೀತ್ ಕುಮಾರ್, ಪೃಥ್ವಿ ಅಂಬರ್, ಐಸಿರಿ, ಚಿತ್ರ ಹಂಚಿಕೆದಾರ ಸಚಿನ್ ಎ.ಎಸ್. ಉಪ್ಪಿನಂಗಡಿ, ಕಾರ್ಯಕಾರಿ ನಿರ್ಮಾಪಕ ಕಿಶೋರ್, ಕೀರ್ತನ್ ಭಂಡಾರಿ, ಸೃಜನ್ ಪೇಜಾವರ ಉಪಸ್ಥಿತರಿದ್ದರು. ಮನೋಜ್ ಕಾರ್ಯಕ್ರಮ ನಿರೂಪಿಸಿದರು.