Advertisement

Mangalore: ಹಡಗು ಸಂಚಾರ ನಿರ್ವಹಣೆಗೆ “ಟಗ್‌” ಕೊರತೆ!

10:23 PM Dec 29, 2023 | Team Udayavani |

ಮಂಗಳೂರು: ಭಾರತದಲ್ಲಿ ಅತಿ ಹೆಚ್ಚು ಎಲ್‌ಪಿಜಿ ನಿರ್ವಹಣೆಯ ಹಾಗೂ ಹೆಚ್ಚು ಕಾಫಿ ರಫ್ತು ಮಾಡುವ ನವಮಂಗಳೂರು ಬಂದರಿನಲ್ಲಿ (ಎನ್‌ಎಂಪಿಎ)ಹಡಗುಗಳ ಸುಗಮ ಸಂಚಾರ-ನಿರ್ವಹಣೆಗೆ ಅಗತ್ಯವಿರುವ “ಟಗ್‌’ ಮಾತ್ರ ಅಗತ್ಯದಷ್ಟಿಲ್ಲ!

Advertisement

ತಿಂಗಳಿಗೆ 150ರಷ್ಟು ಹಡಗುಗಳು ಆಗಮಿಸುವ ಇಲ್ಲಿ ಕನಿಷ್ಠ 5-6 ಟಗ್‌ ಇರಬೇಕಾಗಿತ್ತು. ಆದರೆ ಇರುವುದು 3 ಮಾತ್ರ. ಕೆಲವು ಹಡಗನ್ನು ಎನ್‌ಎಂಪಿಎ “ಬರ್ತ್‌’ ನ ಒಳಗೆ ತಂದು ನಿಲ್ಲಿಸಲು 3-4 ಟಗ್‌ ಬೇಕಾಗುತ್ತದೆ. ಇದಕ್ಕೆ ಬಹಳಷ್ಟು ಸಮಯ ತಗಲುತ್ತದೆ. ಒಂದು ಹಡಗಿನ ನಿರ್ವಹಣೆಗೆ ಸಮಯ ಮೀಸಲಿರಿಸಿದರೆ ಉಳಿದ ಹಡಗು ನಿರ್ವಹಣೆ ಬಾಕಿ ಆಗುವ ಪ್ರಮೇಯವೇ ಅಧಿಕ. ಜತೆಗೆ “ಆ್ಯಂಕರೇಜ್‌’ (ಬಂದರಿನ ಹೊರವಲಯದಲ್ಲಿ ಹಡಗು ಪ್ರವೇಶಕ್ಕೆ ಕಾಯುವ ಸ್ಥಳ) ಆಗುವ ಹಡಗುಗಳಿಗೆ ಶಿಪ್ಪಿಂಗ್‌ ಏಜೆನ್ಸಿಯವರಿಂದ ಯಾವುದಾದರು ವಸ್ತುಗಳನ್ನು ಕೊಂಡೊಯ್ಯಲು ಟಗ್‌ ಸಿಗುತ್ತಿಲ್ಲ. ಇದೆಲ್ಲದರ ಪರಿಣಾಮ ಹಡಗು ಆಗಮನ-ನಿರ್ಗಮನದ ಸಮಯದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಸ್ಟೀಮರ್‌ ಏಜೆಂಟ್‌ ಓರ್ವರು “ಉದಯವಾಣಿ’ಗೆ ತಿಳಿಸಿದ್ದಾರೆ.

ಪ್ಯಾಸೆಂಜರ್‌ ಹಡಗು ಸಹಿತ ಕೆಲವು ಸೀಮಿತ ಹಡಗುಗಳಿಗೆ ಟಗ್‌ ಅಗತ್ಯ ಇಲ್ಲ. ಆದರೆ ಉಳಿದ ಹಡಗುಗಳ ಆಗಮನ-ನಿರ್ಗಮನ ವೇಳೆಯ ವ್ಯಾಪ್ತಿಯಲ್ಲಿ ಟಗ್‌ ಅಗತ್ಯವಿದೆ. ತೈಲ, ಕಬ್ಬಿಣದ ಅದಿರು ಉಂಡೆಗಳು, ಕಂಟೈನರ್‌ನಲ್ಲಿರುವ ಉತ್ಪನ್ನಗಳು ಬಂದರಿನಿಂದ ರಫ್ತು ಆಗುವ ಪ್ರಮುಖ ವಸ್ತುಗಳು. ಕಚ್ಚಾತೈಲಗಳು, ಸಿಮೆಂಟ್‌, ಕಲ್ಲಿದ್ದಲು, ರಸಗೊಬ್ಬರ, ಖಾದ್ಯತೈಲಗಳು, ಲಿಕ್ವಿಡ್‌ ರಾಸಾಯನಿಕಗಳು, ಕಂಟೈನರ್‌ನಲ್ಲಿರುವ ಉತ್ಪನ್ನಗಳು ಪ್ರಮುಖ ಆಮದುಗಳು. ಎಂಆರ್‌ಪಿಎಲ್‌, ಒಎನ್‌ಜಿಸಿ, ಒಎಂಪಿಎಲ್‌, ಕೆಐಒಸಿಎಲ್‌, ಟೋಟಲ್‌ ಗ್ಯಾಸ್‌, ಎಂಸಿಎಫ್‌, ಎಚ್‌ಪಿಸಿಎಲ್‌, ಐಒಸಿ, ಯುಪಿಸಿಎಲ್‌ ಸೇರಿದಂತೆ ಪ್ರಮುಖ ಉದ್ದಿಮೆಗಳಿಗೆ ಕಾರ್ಗೊಗಳನ್ನು ಹಡಗುಗಳ ಮೂಲಕ ಇಲ್ಲಿ ನಿರ್ವಹಿಸಲಾಗುತ್ತಿದೆ.

ಬಳಕೆಗೆ ಸಿಗುವುದು 2 ಮಾತ್ರ!

ಕಡಲಾಳದಲ್ಲಿ ಎಂಆರ್‌ಪಿಎಲ್‌ನ ಜೆಟ್ಟಿ ಸ್ವರೂಪದ “ಎಸ್‌ಪಿಎಂ’ನ ಕಚ್ಚಾತೈಲ ಹೊತ್ತು ತರುವ ಹಡಗು ನಿರ್ವಹಣೆಗೆ ಕನಿಷ್ಠ ಒಂದು ಟಗ್‌ ಅಗತ್ಯವಿದೆ. ಇದನ್ನು ಹೊರತುಪಡಿಸಿ ಉಳಿಯುವುದು 2 ಟಗ್‌. ಇವು ಎನ್‌ಎಂಪಿಎ ಪರಿಧಿಗೆ ಲಭ್ಯವಾಗುತ್ತಿದೆ. ಇದೆರಡನ್ನು ಮಾತ್ರ 16 ಬರ್ತ್‌ಗೆ ಮೀಸಲಿರಿಸಿರುವ ಕಾರಣದಿಂದ ಹಡಗುಗಳಿಗೆ ಸಮಯಕ್ಕೆ ಸರಿಯಾಗಿ ಟಗ್‌ ಸಿಗದೆ ಹಡಗು ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ ಎಂಬ ಅಳಲು ವ್ಯಕ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next