Advertisement

ಕೊಳೆರೋಗ: ಪರಿಹಾರಕ್ಕೆ ಪ್ರಸ್ತಾವನೆ

11:20 AM Oct 28, 2018 | |

ಮಂಗಳೂರು: ಮಂಗಳೂರು ತಾಲೂಕಿನಲ್ಲಿ ಕೊಳೆರೋಗದಿಂದ ಅಡಿಕೆ ಬೆಳೆಗೆ ಹಾನಿ ಸಂಭವಿಸಿದ್ದು 2,512 ಮಂದಿ ರೈತರು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅಡಿಕೆ ಬೆಳೆಗಾರರಿಗೆ ಪರಿಹಾರಕ್ಕೆ ಸುಮಾರು 4.31 ಕೋ.ರೂ. ಮೊತ್ತದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಯವರ ಮೂಲಕ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ತಾಲೂಕು ಪಂಚಾಯತ್‌ ಸಾಮರ್ಥ್ಯ ಸೌಧದಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜರಗಿದ ತಾ.ಪಂ. ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ತೋಟಗಾರಿಕಾ ಇಲಾಖಾ ಅಧಿಕಾರಿ ಪ್ರದೀಪ್‌ ಡಿ’ಸೋಜಾ, ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಪರಿಹಾರ ನಿಯಮಾವಳಿಯಂತೆ ಪ್ರತಿ ಹೆಕ್ಟೇರ್‌ ಗೆ 7,200 ರೂ. ಪರಿಹಾರ ನೀಡಲು ಅವಕಾಶವಿದೆ ಎಂದರು.

Advertisement

211 ಹೆ.ಕೃಷಿ ಬೆಳೆ ಹಾನಿ
ಮಂಗಳೂರು ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಿಂದ 211 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಕೃಷಿಗೆ ಹಾನಿಯಾಗಿದೆ. ಕೇಂದ್ರ ಸರಕಾರದ ನಿಯಾಮವಳಿಯಂತೆ ಶೇ.33ಕ್ಕಿಂತ ಜಾಸ್ತಿ ಫಸಲು ನಷ್ಟವಾದರೆ 6,800 ರೂ. ನಂತೆ ಪ್ರತಿ ಹೆಕ್ಟೇರ್‌ಗೆ ಪರಿಹಾರ ನೀಡಲು ಅವಕಾಶವಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಸಹಾಯಕಿ ಡಾ| ವೀಣಾ ತಿಳಿಸಿದರು. ನಷ್ಟಕ್ಕೊಳಗಾದ ಅಡಿಕೆ ಬೆಳೆಗಾರರಿಗೆ ಹಾಗೂ ಭತ್ತ ಕೃಷಿಕರಿಗೆ ತತ್‌ಕ್ಷಣ ಪರಿಹಾರ ದೊರೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಜರಗಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಕಿನ್ನಿಗೋಳಿ ಬಹುಗ್ರಾಮ ಯೋಜನೆ: ಸೂಚನೆ
ಕಿನ್ನಿಗೋಳಿಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ 10 ಗ್ರಾಮ ಪಂಚಾಯತ್‌ಗಳ 17 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಆಗಲಿದೆ. ಆದರೆ ಬಹುತೇಕ ಟ್ಯಾಂಕ್‌ಗಳಿಗೆ ನೀರು ಸರಬರಾಜಾಗುತ್ತಿಲ್ಲ. ಸದ್ಯದಲ್ಲೇ ಬೇಸಗೆ ಎದುರಾಗಲಿದ್ದು ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ.ಸದಸ್ಯ ವಿನೋದ್‌ ಕುಮಾರ್‌ ಗಮನ ಸೆಳೆದರು. ಬಹುಗ್ರಾಮ ಯೋಜನೆ ವ್ಯಾಪ್ತಿಯಲ್ಲಿರುವ ಎಲ್ಲ ಕುಡಿಯುವ ನೀರು ಸರಬರಾಜು ಟ್ಯಾಂಕ್‌ಗಳ ಸ್ಥಿತಿ ಹಾಗೂ ಅಲ್ಲಿಗೆ ನೀರು ಸರಬರಾಜು ಆಗುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು.

ಈಗಾಗಲೇ ಬಿಡುಗಡೆಯಾಗಿರುವ 2.5. ಕೋ.ರೂ. ಅನುದಾನದಲ್ಲಿ ಇವುಗಳಿಗೆ ಕ್ರಿಯಾಯೋಜನೆ ರೂಪಿಸಿ ಸಮರ್ಪಕ ನೀರು ಪೂರೈಕೆಗೆ ಕ್ರಮವಹಿಸಬೇಕು ಎಂದು ಶಾಸಕರು ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸೂಚನೆ ನೀಡಿದರು. ಮಂಗಳೂರು ತಾಲೂಕಿನಲ್ಲಿ ಕೆಟ್ಟು ಹೋಗಿರುವ ಎಲ್ಲ ಬೋರ್‌ವೆಲ್‌ಗ‌ಳನ್ನು ಪರಿಶೀಲಿಸಿ ದುರಸ್ತಿಗೆ ಕ್ರಮವಹಿಸುವಂತೆ ಸೂಚಿಸಿದರು.

ಅಕ್ರಮ-ಸಕ್ರಮ
ತಾಲೂಕಿನಲ್ಲಿ 94 ಸಿ ಅಡಿಯಲ್ಲಿ 9265 ಅರ್ಜಿ ಸ್ವೀಕರಿಸಲಾಗಿದ್ದು 9256 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 8 ಅರ್ಜಿಗಳು ಬಾಕಿ ಇವೆ. 94 ಸಿಸಿ ಅಡಿಯಲ್ಲಿ 24,698 ಅರ್ಜಿಗಳು ಸ್ವೀಕೃತಗೊಂಡಿದ್ದು 20,242 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 4,456 ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ. ಮೂಡಬಿದಿರೆಯಲ್ಲಿ 94 ಸಿ ಅಡಿಯಲ್ಲಿ 4,018 ಅರ್ಜಿಗಳನ್ನು ಸ್ವೀಕರಿಸಿದ್ದು, 3,823 ಅರ್ಜಿಗಳನ್ನು ವಿಲೇವಾರಿ ಮಾಡಿದ್ದು 195 ಅರ್ಜಿ ಬಾಕಿ ಇದೆ. 94 ಸಿಸಿ ಅಡಿಯಲ್ಲಿ 2845 ಅರ್ಜಿಗಳು ಸ್ವೀಕಾರ ಆಗಿದೆ. 25,44ಅರ್ಜಿಗಳು ವಿಲೇವಾರಿ ಆಗಿದೆ. 281 ಅರ್ಜಿಗಳು ಬಾಕಿ ಇದೆ ಎಂದು ತಹಶೀಲ್ದಾರ್‌ ಅವರು ಮಾಹಿತಿ ನೀಡಿದರು. ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ದನ ಗೌಡ, ತಾ.ಪಂ. ಪ್ರಭಾರ ಇಒ ಸುಧಾಕರ್‌ ಉಪಸ್ಥಿತರಿದ್ದರು.

Advertisement

ಮಾತೃ ಪೂರ್ಣ ಯೋಜನೆ: ಬದಲಾವಣೆ ಅಗತ್ಯ
ಗರ್ಭಿಣಿ, ಬಾಣಂತಿಯರಿಗೆ ಅಂಗನ ವಾಡಿಗಳಲ್ಲಿ ಪೌಷ್ಟಿಕ ಆಹಾರ ನೀಡುವ ಮಾತೃಪೂರ್ಣ ಯೋಜನೆ ಜಿಲ್ಲೆಯಲ್ಲಿ ಯಶಸ್ಸು ಕಂಡಿಲ್ಲ. ಈ ಯೋಜನೆಯಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಶೇ.33 ಹಾಗೂ ನಗರದಲ್ಲಿ ಶೇ.35 ಪ್ರಗತಿ ಮಾತ್ರ ಸಾಧ್ಯ ವಾಗಿದೆ. ಪೌಷ್ಟಿಕ ಆಹಾರವನ್ನು ಫಲಾನುಭವಿಗಳ ಮನೆಗೆ ಪೂರೈ ಸುವ ಹಳೆಯ ಕಿಟ್‌ ಮಾದರಿ ಅನುಷ್ಠಾನದಲ್ಲಿದ್ದಾಗ ಶೇ. ನೂರು ಸಾಧನೆ ಆಗುತ್ತಿತ್ತು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವಿವರಿಸಿದರು. ಹಳೆಯ ಮಾದರಿಯಲ್ಲೇ ಪೌಷ್ಟಿಕ ಆಹಾರವನ್ನು ಫಲಾನುಭವಿಗಳಿಗೆ ಪೂರೈಸುವ ಕ್ರಮ ಆಗಬೇಕು ಎಂದು ಶಾಸಕರು, ತಾ.ಪಂ. ಅಧ್ಯಕ್ಷರು, ಜಿ.ಪಂ.ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಅಭಿಪ್ರಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next