Advertisement

ಕದ್ರಿ ಉದ್ಯಾನವನವೆಲ್ಲ ಹೂ ರಾಶಿಯ ಘಮ ಘಮ…

04:30 AM Jan 26, 2019 | |

ಮಹಾನಗರ: ಕದ್ರಿ ಉದ್ಯಾನ ವನದಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಹೂವಿನ ಘಮ ಘಮ… ಪಾರ್ಕ್‌ನ ಒಂದು ಭಾಗವಿಡೀ ಹೂಗಳ ರಾಶಿಯಿಂದ ಕಂಗೊಳಿ ಸುತ್ತಿದ್ದರೆ, ಮತ್ತೊಂದೆಡೆ  ವಿಧವಿಧ ತರಕಾರಿ ಗಳ ತರಾವರಿ… ಜತೆಗೆ ಆ ಅಂದವನ್ನು ಜನರ ಕಣ್ತುಂಬಿಸಿ ಕೊಡುವುದಕ್ಕೆ ಸಿದ್ಧತೆಯಲ್ಲಿ ತೊಡಗಿರುವ ಕೆಲಸಗಾರರ ತಂಡ…

Advertisement

ಕದ್ರಿ ಉದ್ಯಾನವನದಲ್ಲಿ ಶನಿವಾರದಿಂದ ಪ್ರಾರಂಭಗೊಳ್ಳುತ್ತಿರುವ ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಕದ್ರಿ ಪಾರ್ಕ್‌ ಆವರಣ ಸಿಂಗಾರಗೊಂಡಿದೆ. ಪಾರ್ಕ್‌ನ ಎಡಭಾಗದ ಒಂದು ಬದಿಯಲ್ಲಿ ಹೂವುಗಳ ಜೋಡಣೆ ಬಿರುಸಾಗಿದೆ. ಜತೆಗೆ ಪ್ರದರ್ಶನದ ಇಡೀ ಪರಿಸರವನ್ನು ಸ್ವಚ್ಛಗೊಳಿಸುವ ಕೆಲಸವೂ ಆಗಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಪ್ರದರ್ಶನಕ್ಕೆ ಬೇಕಾದ ಸುಮಾರು ಶೇ.60ರಷ್ಟು ಕೆಲಸ ಪೂರ್ಣಗೊಂಡಿದೆ. ಫಲಪುಷ್ಪ ಪ್ರದರ್ಶನಕ್ಕೆಂದೇ ಜೀನ್ಯ, ಚೆಂಡು ಹೂವು ಸಹಿತ ವಿವಿಧ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಅಲ್ಲದೆ, ಹೂವಿನಿಂದ ತುಂಬಿರುವ ಗಿಡಗಳನ್ನು ತಂದು ಇಲ್ಲಿ ನೆಡಲಾಗಿದೆ. ಗುಚ್ಛದ ಮಾದರಿಯಲ್ಲಿ ಹೂವಿನ ಗಿಡಗಳನ್ನು ನೆಡಲಾಗಿದೆ. ಆಯತ, ವೃತ್ತಾಕಾರದಲ್ಲಿಯೂ ಗಿಡಗಳನ್ನು ನೆಟ್ಟಿರುವುದು ಸಾರ್ವಜನಿಕರನ್ನು ಕೈ ಬೀಸಿ ಕರೆಯುವಂತಿದೆ.

ಈ ಪರಿಸರದಲ್ಲಿರುವ ಬಿದಿರಿನ ಹಿಂಡು ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ. ಬಿದಿರಿನ ಹಿಂಡಿನ ಸುತ್ತಲೂ ವಿವಿಧ ಬಣ್ಣದ ಹೂವಿನ ಗಿಡಗಳನ್ನು ಜೋಡಿಸಿಟ್ಟಿರುವುದು ಆಕರ್ಷಕವಾಗಿದೆ.

ಅಂಥೂರಿಯಂ, ಆರ್ಕಿಡ್‌ ಗಿಡಗಳೂ ಗಮನ ಸೆಳೆಯುತ್ತಿವೆ. ವಿವಿಧ ತಾಲೂಕು, ಇಲಾಖೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ತರಕಾರಿ ಸಸಿ, ಹೂವಿನ ಗಿಡಗಳನ್ನು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯೂ ಇದೆ. ಬಣ್ಣ ಬಣ್ಣದ ಕಾನೇರ್ಷನ್‌ ಮತ್ತು ಗುಲಾಬಿ ಹೂವುಗಳಿಂದ ಅಲಂಕರಿಸಿದ ಸಮುದ್ರದಲ್ಲಿ ತೇಲುವ ಹಡಗು ಈ ಬಾರಿಯ ಪ್ರದರ್ಶನದ ವೈಶಿಷ್ಟ್ಯ.

ಉದ್ಯಾನವನದ ಒಳಭಾಗದಲ್ಲಿ ಒಟ್ಟು 90ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದೆ. ಫಲಪುಷ್ಪ ಪ್ರದರ್ಶನ ನಡೆಯುವ ಪರಿಸರದಲ್ಲಿ 65, ಉದ್ಯಾನವನಕ್ಕೆ ಪ್ರವೇಶಿಸುವ ಗೇಟ್ ಪಕ್ಕದಲ್ಲಿ ಸುಮಾರು 25 ಸ್ಟಾಲ್‌ಗ‌ಳಿವೆ. ಈ ಸ್ಟಾಲ್‌ಗ‌ಳಲ್ಲಿ ವಿವಿಧ ನರ್ಸರಿದಾರರು, ಬೀಜ/ಗೊಬ್ಬರಗಳ ಮಾರಾಟಗಾರರು, ಯಂತ್ರಗಳ ಮಾರಾಟಗಾರರು ಮಳಿಗೆಗಳನ್ನು ತೆರೆಯಲಿದ್ದು, ವಿವಿಧ ಉದ್ದಿಮೆದಾರರಿಂದ ಸಾರ್ವಜನಿಕರು ತಮಗೆ ಅಗತ್ಯವಿರುವ ಉತ್ಪನ್ನಗಳ ಖರೀದಿ, ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಹನಿ ನೀರಾವರಿ ಪ್ರಾತ್ಯಕ್ಷಿಕೆ, ಹೈಡ್ರೋಪೊನಿಕ್ಸ್‌, ಜೇನುಸಾಕಾಣಿಕೆ ಮಾದರಿ, ಅಣಬೆ ಮಾದರಿಗಳು, ಜೇನು ಬೇಸಾಯ ಬಗ್ಗೆ ಮಾಹಿತಿ, ಜೇನಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ, ಕೈ ತೋಟದ ಪ್ರಾತ್ಯಕ್ಷಿಕೆ, ಅಭಿವೃದ್ಧಿ ಇಲಾಖೆಗಳ ಪ್ರದರ್ಶನದ ಮಳಿಗೆಗಳು ಇರಲಿವೆ ಎಂದು ದ.ಕ. ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಎಚ್.ಆರ್‌. ನಾಯಕ್‌ ತಿಳಿಸಿದ್ದಾರೆ.

Advertisement

ಸುಮಾರು 20ಕ್ಕೂ ಹೆಚ್ಚು ತಳಿಗಳ ತರಕಾರಿ ಗಿಡಗಳನ್ನು ಬೆಳೆಸಲಾಗಿದೆ. ಕಳೆದ ನವೆಂಬರ್‌ನಲ್ಲಿಯೇ ಬೆಳೆಸುವ ಕೆಲಸ ಶುರುವಾಗಿದ್ದು, ಪ್ರಸ್ತುತ ಫಲಭರಿತವಾಗಿವೆ. ಪಾಲಕ್‌, ಕ್ಯಾಬೇಜ್‌, ಕೊತ್ತಂಬರಿ ಸೊಪ್ಪು, ಸಹಿತ 20ಕ್ಕೂ ಹೆಚ್ಚು ತರಕಾರಿ ಗಿಡಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಗಾಂಧೀಜಿಯವರ ಪ್ರತಿಮೆ
ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನದ ಹೊರಭಾಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧೀಜಿಯವರ ಪ್ರತಿಮೆ ಅನಾವರಣಗೊಳಿಸಲಾಗಿದೆ.

ಜ. 26-28: ಪ್ರದರ್ಶನ
ಜ. 26ರಿಂದ 28ರ ವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. 26ರಂದು ಬೆಳಗ್ಗೆ 10.30ಕ್ಕೆ ಪ್ರದರ್ಶನಕ್ಕೆ ಚಾಲನೆ ದೊರೆಯಲಿದೆ. ಮೂರೂ ದಿನವೂ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದೆ. ಮಕ್ಕಳಿಗೆ 10 ರೂ. ಮತ್ತು ಹಿರಿಯರಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲೆಗಳಿಂದ ಸಮವಸ್ತ್ರ ಧರಿಸಿ ಬಂದ ಮಕ್ಕಳಿಗೆ, ವಿಕಲಚೇತನರಿಗೆ ಮತ್ತು ಭಿನ್ನ ಸಾರ್ಮಥ್ಯದ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಕಾಯಕಯೋಗಿಗಳು
ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ವತಿಯಿಂದ ಫಲಪುಷ್ಪ ಪ್ರದರ್ಶನವನ್ನು ಪ್ರತಿವರ್ಷ ಜ. 26ರಂದು ಹಮ್ಮಿಕೊಳ್ಳುತ್ತಿದ್ದರೂ ಈ ಪ್ರದರ್ಶನದ ಯಶಸ್ವಿನ ಹಿಂದಿರುವುದು ಹೂವು-ತರಕಾರಿಯನ್ನು ಬೆಳೆಸುವುದು, ಸಮಸ್ಯೆಯಾಗದಂತೆ ಪಾಲನೆ ಮಾಡುವ ಕೆಲಸಗಾರರು. ಕೆಲವು ದಿನಗಳಿಂದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ಇವರು, ಶುಕ್ರವಾರ ಇಡೀ ಪರಿಸರವನ್ನು ಸ್ವಚ್ಛಗೊಳಿಸುವಲ್ಲಿ ತಲ್ಲೀನರಾಗಿದ್ದರು. ಇಡೀ ಪರಿಸರಲ್ಲಿ ಹುಲ್ಲು ಕಡ್ಡಿಗಳನ್ನು ಕಿತ್ತು, ಗುಡಿಸಿ ಪ್ರದರ್ಶನ ಆಕರ್ಷಣೀಯವಾಗಿ ಕಾಣುವಂತೆ ಮುತುವರ್ಜಿ ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next