Advertisement
ಇಲ್ಲಿನ ನೇತ್ರಾವತಿ ನದಿ ತೀರದ ಬಳಿ ಒಳ ಪ್ರದೇಶದಲ್ಲಿ ತ್ಯಾಜ್ಯವನ್ನು ತಂದು ರಾಶಿ ಹಾಕಿ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದಾಗಿ ಅದಲ್ಲಿರುವ ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳು ಹೊತ್ತಿ ಉರಿದು ದಟ್ಟ ಹೊಗೆ ಸ್ಥಳೀಯವಾಗಿ ವ್ಯಾಪಿಸುತ್ತಿದೆ. ಕೆಲವೊಮ್ಮೆ ಸಂಜೆ ವೇಳೆ ಬೆಂಕಿ ಹಚ್ಚಲಾಗುತ್ತಿದ್ದು, ಎರಡು ಮೂರು ದಿನಗಳ ಕಾಲ ಈ ಬೆಂಕಿ ಹೊಗೆಯಾಡುತ್ತಲೇ ಇರುತ್ತದೆ. ಇದು ರಾಷ್ಟ್ರೀಯ ಹೆದ್ದಾರಿಗೂ ವ್ಯಾಪಿಸಿ, ವಾಹನ ಸವಾರರಿಗೂ ಸಮಸ್ಯೆ ತಂದೊಡ್ಡುತ್ತಿದೆ. ಪ್ಲಾಸ್ಟಿಕ್ ಸುಟ್ಟಿರುವ ತೀವ್ರವಾದ ವಾಸನೆಯೂ ಸ್ಥಳೀಯವಾಗಿ ವ್ಯಾಪಿಸಿ ಮಾಲಿನ್ಯ ಉಂಟು ಮಾಡುತ್ತಿದೆ.
ರಾಷ್ಟ್ರೀಯ ಹೆದ್ದಾರಿಯ 73 ಅಡ್ಯಾರ್ ಕಟ್ಟೆಯಿಂದ ಕಣ್ಣೂರು ಕಡೆಗೆ ಬರುವಾಗ ಮಾತಾ ನರ್ಸರಿಗಿಂತ ಮೊದಲೇ ಎಡಭಾಗದಲ್ಲಿ ಮಣ್ಣಿನ ರಸ್ತೆಯೊಂದನ್ನು ನಿರ್ಮಾಣ ಮಾಡಲಾಗಿದ್ದು, ಅಲ್ಲಿಂದ ಸುಮಾರು 100 ಮೀ. ಒಳಭಾಗದಲ್ಲಿ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ತೆಂಗಿನ ತೋಟವೂ ಸ್ಥಳದಲ್ಲಿದೆ. ತ್ಯಾಜ್ಯ ಸಾಗಿಸುವ ಲಾರಿಗಳು ಸಂಚರಿಸಿರುವ ಚಕ್ರದ ಗುರುತುಗಳೂ ಸ್ಥಳದಲ್ಲಿವೆ. ಪ್ಲಾಸ್ಟಿಕ್ ತ್ಯಾಜ್ಯ ಮಾತ್ರವಲ್ಲದೆ ಕಟ್ಟಡ ತ್ಯಾಜ್ಯವನ್ನೂ ತಂದು ಸುರಿಯಲಾಗುತ್ತಿದೆ.