ಮಳೆಯ ಮುನ್ಸೂಚನೆ ಮುಂದುವರಿದಿತ್ತಾದರೂ ಎಲ್ಲಿಯೂ ಆತಂಕಪಟ್ಟಷ್ಟು ಮಳೆಯಾಗಿಲ್ಲ. ಜಲಾವೃತಗೊಂಡಿದ್ದ ಪ್ರದೇಶಗಳಲ್ಲಿ ಸದ್ಯ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು, ಜನಜೀವನ ಹಳಿಗೆ ಮರಳುತ್ತಿದೆ.
Advertisement
ನಗರದ ತಗ್ಗು ಪ್ರದೇಶಗಳಿಗೆ ನುಗ್ಗಿದ್ದ ನೀರು ಬಹುತೇಕ ಕಡೆ ಇಳಿದು ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿಯಾಗಿ ಪುತ್ತೂರು, ಮಡಿಕೇರಿ, ಶಿವಮೊಗ್ಗ ಹಾಗೂ ಹಾಸನದಿಂದ ಅಗ್ನಿಶಾಮಕ ವಾಹನಗಳನ್ನು ನಗರಕ್ಕೆ ತರಿಸಲಾಗಿದೆ.
ಧಾರಾಕಾರ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದ ಸಂಚಾರ ವ್ಯವಸ್ಥೆ ಬುಧವಾರ ಸಹಜ ಸ್ಥಿತಿಗೆ ಮರಳಿದ್ದು, ಎಲ್ಲ ಮಾರ್ಗಗಳಲ್ಲೂ ಸರಕಾರಿ ಮತ್ತು ಖಾಸಗಿ ಬಸ್‌ಗಳು ಸಂಚರಿಸಿದವು. ಮಳೆಯಿಂದ ಬಂದ್ ಆಗಿದ್ದ ರಾ. ಹೆದ್ದಾರಿ 66 ಹಾಗೂ 75ರಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಕಂಡುಬರಲಿಲ್ಲ.
Related Articles
ಹಾನಿಗೊಳಗಾಗಿದ್ದ ಪ್ರದೇಶಗಳಲ್ಲಿ ಮನಪಾ ಹಾಗೂ ಜಿಲ್ಲಾಡಳಿತದಿಂದ ಪರಿಹಾರ ಕಾರ್ಯಾ ಚರಣೆ ಪ್ರಾರಂಭಗೊಂಡಿದೆ. ವಿವಿಧ ಇಲಾಖೆಗಳ ಹಾಗೂ ಮನಪಾ ಅಧಿಕಾರಿಗಳು ಮಳೆಹಾನಿ ಪ್ರದೇಶ ಗಳಿಗೆ ಭೇಟಿ ನೀಡಿ ನಷ್ಟ ಅಂದಾಜು ಕಾರ್ಯ ನಡೆಸಿದ್ದಾರೆ. ಕೃತಕ ನೆರೆ ತಲೆದೋರಿದ್ದ ಪ್ರದೇಶಗಳಲ್ಲಿ ಜೆಸಿಬಿ ಬಳಸಿ ನೀರು ಸರಾಗವಾಗಿ ಹರಿಯುವಂತೆ ಮಾಡುವ ಕಾರ್ಯಾಚರಣೆ ನಡೆಸಲಾಗುತ್ತಿದೆ.
Advertisement
ಮಳೆ ಪೀಡಿತ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಮೇಯರ್ ಭಾಸ್ಕರ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ತೊಂದರೆ, ನಷ್ಟ-ಹಾನಿ ಬಗ್ಗೆ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಎಂದಿನಂತೆ ರೈಲು, ವಿಮಾನಮಳೆಯಿಂದ ಬಾಧಿತವಾಗಿದ್ದ ರೈಲು, ವಿಮಾನಸಂಚಾರವೂ ಸಹಜ ಸ್ಥಿತಿಗೆ ಮರಳಿದೆ. ಮಂಗಳ ವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನಗಳನ್ನು ಸಮೀಪದ ಇತರ ವಿಮಾನನಿಲ್ದಾಣಗಳಿಗೆ ತಿರುಗಿಸಲಾಗಿತ್ತು. ಬುಧವಾರ ಎಂದಿನಂತೆ ವಿಮಾನಗಳ ಆಗಮನ, ನಿರ್ಗಮನ ನಡೆದಿದೆ. ವಿಮಾನ ನಿಲ್ದಾಣದಲ್ಲಿ ಮಂಗಳವಾರ ದಾಖಲೆಯ 25.7 ಸೆಂ.ಮೀ. ಮಳೆಯಾಗಿತ್ತು. ರೈಲುಗಳೂ ಎಂದಿನಂತೆ ಸಂಚರಿಸತೊಡಗಿವೆ. ಇನ್ನೂ ಆತಂಕ
ನಗರದಲ್ಲಿ ಮಳೆಯ ಆರ್ಭಟ ಕಡಿಮೆಯಾಗಿ, ಎಲ್ಲೆಡೆ ಸೃಷ್ಟಿಯಾಗಿದ್ದ ಕೃತಕ ನೆರೆ ಪರಿಸ್ಥಿತಿ ಚಿತ್ರಣ ಬದಲಾಗಿದ್ದರೂ ಜನತೆ ಮಾತ್ರ ಮಳೆಯಾಘಾತದಿಂದ ಇನ್ನೂ ಹೊರಬಂದಿಲ್ಲ. ಮುಂಗಾರು ಜಿಲ್ಲೆಯಲ್ಲಿ ಇನ್ನೇನು ಪ್ರಾರಂಭ ವಾಗಬೇಕಿದ್ದು, ಮಳೆಗಾಲದಲ್ಲಿ ಇಂಥದ್ದೇ ಪರಿಸ್ಥಿತಿ ಎದುರಾದರೆ ಗತಿಯೇನು ಎಂಬ ಚಿಂತೆ ತಗ್ಗು ಪ್ರದೇಶದ ಜನರನ್ನು ಕಾಡುತ್ತಿದೆ.