ಮಂಗಳೂರು: ಇಂದು ಎಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಮನೆ ಮನಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಹುಲಿ ವೇಷಧಾರಿಗಳು ತಾಸೆಯ ಸದ್ದಿಗೆ ಕುಣಿದು ಕುಪ್ಪಳಿಸುತ್ತಿವೆ. ವಿವಿಧ ವೇಷಧಾರಿಗಳು ವಿಟ್ಲಪಿಂಡಿಯ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಮನೆಗಳಲ್ಲಿ ಹಬ್ಬದ ವಿಶೇಷ ತಿಂಡಿ – ತಿನಿಸುಗಳು ಸಿದ್ದವಾಗಿದ್ದು, ಅದನ್ನು ಸೇವಿಸಿ ಜನ ಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿಸ್ಟ್(ಹೃದ್ರೋಗ ತಜ್ಞ) ಆಗಿರುವ ಡಾ. ಪದ್ಮನಾಭ್ ಕಾಮತ್ ಅವರು ಜನ್ಮಾಷ್ಟಮಿಯ ದಿನ ತಮ್ಮ ರೋಗಿಯೊಬ್ಬರು ತಯಾರಿಸಿದ ತಿಂಡಿ – ತಿನಿಸಿನ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ 88 ಖಾದ್ಯಗಳನ್ನು ಬಡಿಸಿದವರ ಫೋಟೋವನ್ನು ಟ್ವಿಟರ್ ನಲ್ಲಿ ಡಾ.ಕಾಮತ್ ಹಂಚಿಕೊಂಡಿದ್ದಾರೆ.
“ಅವರ ಮತ್ತು ಅವರಿಗೆ ಶ್ರೀಕೃಷ್ಣನ ಮೇಲಿರುವ ಭಕ್ತಿಯ ಬಗ್ಗೆ ಹೆಮ್ಮೆಯಿದೆ. ಅವರ ನನ್ನ ಬಳಿ ಚಿಕಿತ್ಸೆ ಪಡೆಯುತ್ತಿರುವವರು(ರೋಗಿ) ಅವರು ಈ ಹಿಂದಿನ ಅವರ ದಾಖಲೆಯನ್ನು ಮತ್ತೊಮ್ಮೆ ಮುರಿದಿದ್ದಾರೆ. ಗೋಕುಲಾಷ್ಟಮಿ ಹಿನ್ನೆಲೆ ಅವರು ನಿನ್ನೆ ರಾತ್ರಿ(ಸೆ.6, ಬುಧವಾರ) 88 ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ” ಎಂದು ಫೋಟೋವನ್ನು ಹಾಕಿ ಡಾ.ಕಾಮತ್ ಬರೆದುಕೊಂಡಿದ್ದಾರೆ.
ಸದ್ಯ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರದು ಎಂತಹ ಭಕ್ತಿ ಅವರ ಪಾದವನ್ನು ಸ್ಪರ್ಶಿಸಬೇಕೆಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಅದ್ಭುತ..ಭಕ್ತರು ತಲುಪುವ ಸ್ಥಳಕ್ಕೆ ಯಾರೂ ತಲುಪಲು ಸಾಧ್ಯವಿಲ್ಲ.. ದೇವರಿಗೂ ಸಾಧ್ಯವಿಲ್ಲ. ಹರೇ ಕೃಷ್ಣ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.