ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ದೇಗುಲದಲ್ಲಿ ಜರಗಲಿರುವ ಮಂಗಳೂರು ದಸರಾ ಮಹೋತ್ಸವವನ್ನು ಮತ್ತಷ್ಟು ವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ದೇಗುಲದ ಸಭಾಂಗಣದಲ್ಲಿ ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಅಧ್ಯಕ್ಷತೆಯಲ್ಲಿ ಜರಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ವಕ್ತಾರ ಹರಿಕೃಷ್ಣ ಬಂಟ್ವಾಳ, ಮಂಗಳೂರು ದಸರಾ ಮಹೋತ್ಸವ ಕೇವಲ ಜಿಲ್ಲೆ, ರಾಜ್ಯಕ್ಕೆ ಸೀಮಿತವಾಗದೆ ದೇಶ-ವಿದೇಶದ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯೂ ನಿರೀಕ್ಷೆ ಮೀರಿ ಪ್ರವಾಸಿಗರು ಬರುವ ಸಾಧ್ಯತೆಯಿರುವುದರಿಂದ ವ್ಯವಸ್ಥೆ ದೃಷ್ಟಿಯಿಂದ ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದರು.
ಕೋಶಾಧಿಕಾರಿ ಪದ್ಮರಾಜ್ ಕೆ. ಮಾತನಾಡಿ, ದಸರಾ ಮಹೋತ್ಸವಕ್ಕೆ ಬರುವ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದಲ್ಲದೆ, ಕಾರ್ಯಕ್ರಮ ಮತ್ತಷ್ಟು ಶಿಸ್ತುಬದ್ಧ, ಅಚ್ಚುಕಟ್ಟಾಗಿ ನಡೆಸುವ ದೃಷ್ಟಿಯಿಂದ ಸ್ವಾಗತ ಸಮಿತಿ, ವೈದಿಕ ಸಮಿತಿ, ಅನ್ನಸಂತರ್ಪಣ ಸಮಿತಿ, ಪ್ರಸಾದ ವಿತರಣ ಸಮಿತಿ, ಭದ್ರತಾ ಸಮಿತಿ, ಪಾರ್ಕಿಂಗ್ ಸಮಿತಿ, ಸುರಕ್ಷಾ ಸಮಿತಿ, ಸೇವಾ ಕೌಂಟರ್ ಸಮಿತಿ, ಪ್ರಚಾರ ಸಮಿತಿ, ಬೆಳಕು ನಿರ್ವಹಣ ಸಮಿತಿ, ಮೆರವಣಿಗೆ ಸಮಿತಿ ಸಹಿತ ವಿವಿಧ ಸಮಿತಿ ರಚಿಸಲಾಗಿದೆ ಎಂದರು.
ರಸ್ತೆ ಡಾಮರೀಕರಣಕ್ಕೆ ಆಗ್ರಹ
ದಸರಾ ಮಹೋತ್ಸವ ಆರಂಭವಾಗಲು ಒಂದು ವಾರ ವಷ್ಟೇ ಬಾಕಿಯಿದ್ದು, ಮೆರವಣಿಗೆ ಹಾದು ಹೋಗುವ ರಸ್ತೆ ಸಹಿತ ಅಗತ್ಯವಿರುವ ಮಾರ್ಗ, ಚರಂಡಿಗಳನ್ನು ದುರಸ್ತಿ ಮಾಡಲು ಮನಪಾಕ್ಕೆ ಮನವಿ ಮಾಡಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು.
ಮೇಯರ್ ಕವಿತಾ ಸನಿಲ್ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ದಸರಾ ಆರಂಭಗೊಳ್ಳುವ ಮುನ್ನ ನಗರದಲ್ಲಿ ಕೆಟ್ಟು ಹೋದ ಪ್ರಮುಖ ರಸ್ತೆಗಳನ್ನು ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಕಾರ್ಪೊರೇಟರ್‌ಗಳಾದ ರಾಧಾಕೃಷ್ಣ, ದೀಪಕ್ ಪೂಜಾರಿ ಮುತುವರ್ಜಿ ವಹಿಸಲಿದ್ದಾರೆಂದು ಪದ್ಮರಾಜ್ ತಿಳಿಸಿದರು. ದೇವೇಂದ್ರ ಪೂಜಾರಿ, ಶೇಖರ್ ಪೂಜಾರಿ, ಡಾ| ಅನಸೂಯಾ, ಕಾರ್ಪೊರೇಟರ್‌ಗಳಾದ ರಾಧಾಕೃಷ್ಣ, ದೀಪಕ್ ಕೋಟ್ಯಾನ್, ಲೀಲಾಕ್ಷ ಕರ್ಕೇರ, ದಿನೇಶ್ ರಾಜ್ ಅಂಚನ್, ಡಿ.ಡಿ. ಕಟ್ಟೆಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.