Advertisement

ಸ್ವಚ್ಛ ಸರ್ವೇಕ್ಷಣದಲ್ಲಿ ಅಗ್ರ ಸ್ಥಾನಕ್ಕಾಗಿ ಮಂಗಳೂರು ಸ್ಪರ್ಧೆ

05:50 PM Feb 09, 2022 | Team Udayavani |

ಮಹಾನಗರ: ಮೂರು ವರ್ಷಗಳಲ್ಲಿ “ಸ್ವಚ್ಛ ಸರ್ವೇಕ್ಷಣ’ ರ್‍ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದ ಮಂಗಳೂರು ನಗರ ಈ ಬಾರಿ ಮತ್ತೆ ರ್‍ಯಾಂಕಿಂಗ್‌ಗಾಗಿ ಸೆಣಸಾಡಲು ಸಿದ್ಧತೆ ನಡೆಸಿದೆ.

Advertisement

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ಥಳೀಯ ಸಂಸ್ಥೆಗಳಿಗೆ ಪ್ರತೀ ವರ್ಷ ಸ್ವಚ್ಛ ಸರ್ವೇಕ್ಷಣ ಅಭಿ ಯಾನ ನಡೆಸುತ್ತದೆ. 2018- 19 ರಲ್ಲಿ ನಡೆಸಲಾದ ಅಭಿಯಾನದಲ್ಲಿ 3 ರಿಂದ 10 ಲಕ್ಷದವರೆಗಿನ ಜನಸಂಖ್ಯೆಯ ವಿಭಾಗ ದಲ್ಲಿ ಮಂಗಳೂರು ನಗರ ಘನ ತ್ಯಾಜ್ಯ ನಿರ್ವ ಹಣೆಯಲ್ಲಿ ಅತ್ಯುತ್ತಮ ಮಧ್ಯಮ ನಗರ ಎಂಬ ಹೆಗ್ಗಳಿಕೆ ಪಾತ್ರವಾಗಿ ಐದನೇ ಸ್ಥಾನ ಪಡೆದಿತ್ತು. ಇತರ ನಗರಕ್ಕೆ ಹೋಲಿಕೆ ಮಾಡಿದರೆ ಮಂಗಳೂರಿ ನಲ್ಲಿ ಘನ ತ್ಯಾಜ್ಯ ನಿರ್ವಹಣೆ ಅತ್ಯುತ್ತಮವಾಗಿತ್ತು ಎಂದು ಉಲ್ಲೇಖ ಮಾಡಲಾಗಿತ್ತು. 2019ರಲ್ಲಿ ಪಚ್ಚನಾಡಿ ತ್ಯಾಜ್ಯ ದುರಂತದ ಬಳಿಕ ಸ್ವಚ್ಛತೆ ವಿಚಾರದಲ್ಲಿ ಪಾಲಿಕೆಗೆ ದೊಡ್ಡ ಹಿನ್ನಡೆ ಉಂಟಾಗಿತ್ತು. ಇದೇ ಕಾರಣಕ್ಕೆ 2019-20ನೇ ಸಾಲಿನ ಅಭಿಯಾನದಲ್ಲಿ ಪಾಲಿಕೆ ಸ್ಪರ್ಧಿಸಿರಲಿಲ್ಲ. ಆದರೆ ಕಳೆದ ಸಾಲಿನಲ್ಲಿ 2020-21ನೇ ಸಾಲಿನಲ್ಲಿ ಸ್ಪರ್ಧೆಗಿಳಿದು ರಾಜ್ಯದಲ್ಲಿ 9ನೇ ರ್‍ಯಾಂಕ್‌ಗಳಿಸಿತ್ತು. ಇದೀಗ 2021-22ನೇ ಸಾಲಿಗೆ ಮತ್ತೆ ಸ್ಪರ್ಧೆಗೆ ಅಣಿಯಾಗುತ್ತಿದೆ.

ಕಳೆದ ವರ್ಷ ಕಲಿತ ಪಾಠವನ್ನು ಪಾಲಿಕೆ ಈ ವರ್ಷ ಸರಿಪಡಿಸಲು ಮುಂದಾಗಿದೆ. ಸ್ವಚ್ಛತೆ ವಿಷಯದಲ್ಲಿ ಹೆಚ್ಚು ಗಮನನೀಡಿದ್ದು, ಪಚ್ಚನಾಡಿ ತ್ಯಾಜ್ಯ ದುರಂತ ಸರಿಪಡಿಲು ಈಗಾಗಲೇ ಆ ಪ್ರದೇಶಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಇನ್ನು ಬಯೋಮೈನಿಂಗ್‌ ಮುಖೇನ ರಾಶಿ ಬಿದ್ದ ತ್ಯಾಜ್ಯ ಕರಗಿಸಲು ಯೋಜನೆ ರೂಪುಗೊಂಡಿದೆ. ಮನೆ ಮನೆಯಲ್ಲಿ ಹಸಿ, ಒಣ ಕಸ ಕಡ್ಡಾಯವಾಗಿ ಬೇರ್ಪಡಿಸಲು ಸೂಚಿಸಲಾಗಿದ್ದು, ಶೇ.60ರಿಂದ 70ರಷ್ಟು ಪ್ರಗತಿ ಕಾಣುತ್ತಿದೆ. ವಸತಿ ಸಮುಚ್ಚಯ ಗಳಲ್ಲಿಯೂ ತ್ಯಾಜ್ಯ ನಿರ್ವಹಣೆ ಕಡ್ಡಾಯ ಮಾಡಲಾಗಿದ್ದು, ಕೆಲವೆಡೆ ಮಡಕೆ ಕಾಂಪೋಸ್ಟಿಂಗ್‌ ಮುಖೇನ ತ್ಯಾಜ್ಯ ನಿರ್ವಹಣೆ ನಡೆಯುತ್ತಿದೆ. ಈಗಾಗಲೇ ಬಯಲುಶೌಚ ಮುಕ್ತ ನಗರವೆಂದು ಗುರುತಿಸಿ ಒಡಿಎಫ್‌ ಪ್ರಮಾಣಪತ್ರ ಪಡೆದು ಕೊಂಡಿದೆ. ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಗುರುತಿಸಲು ಸ್ವಚ್ಛತೆಯಲ್ಲಿ ಇನ್ನಷ್ಟು ಪ್ರಗತಿ ಅಗತ್ಯ ವಿದೆ. ಆದರೆ ನಗರದಲ್ಲಿರುವ ಬ್ಲ್ಯಾಕ್‌ಸ್ಪಾರ್ಟ್‌ ಪಾಲಿಕೆಗೆ ಸವಾಲಾಗಿ ಪರಿಣಮಿಸಿದೆ.

ಪಂಪ್‌ವೆಲ್‌, ದೇರೆಬೈಲ್‌, ಬಂದರು, ಅಳಕೆ ಸಹಿತ ವಿವಿಧ ಪ್ರದೇಶ ದಲ್ಲಿ ಕಸ ಸುರಿಯಲಾಗುತ್ತಿದೆ. ಇದರ ನಿಯಂತ್ರಣ ಅಗತ್ಯ. ಇನ್ನೂ ಶೇ.30ರಷ್ಟು ಮನೆಗಳಲ್ಲಿ ಹಸಿ – ಒಣ ಕಸ ಬೇರ್ಪಡಿಸುವಿಕೆ ನಡೆಯುತ್ತಿಲ್ಲ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ಅದೇ ರೀತಿ, ಪಚ್ಚನಾಡಿಯ ತ್ಯಾಜ್ಯ ಕರಗಿಸುವ ಪ್ರಕ್ರಿಯೆಗೆ ಮತ್ತಷ್ಟು ವೇಗ ನೀಡಬೇಕು.

ಈ ಎಲ್ಲ ಅಂಶಗಳನ್ನು ಗಮನ ದಲ್ಲಿಟ್ಟು ಕೊಂಡರೆ ಸ್ವಚ್ಛ ಸರ್ವೇಕ್ಷಣೆ ಅಭಿಯಾನದಲ್ಲಿ ಪಾಲಿಕೆ ಗಮನಾರ್ಹ ಸಾಧನೆ ಸಾಧ್ಯವಾದೀತು.

Advertisement

ಅಭಿಯಾನದ ಪ್ರಮುಖ ಘಟಕಗಳು, ಚಟುವಟಿಕೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ “ಪ್ರಗತಿ ದರ್ಶನ’ ಕಾರ್ಯಕ್ರಮವನ್ನು ನಗರದಲ್ಲಿ ಆಯೋಜಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್‌ಇಡಿ ಟಿವಿಯನ್ನು ಅಳವಡಿಸಿರುವ ಸಂಚಾರಿ ವಾಹನ ನಗರ ಸ್ಥಳೀಯ ಸಂಸ್ಥೆಗಳ ಪ್ರಮುಖ ಸ್ಥಳಗಳಲ್ಲಿ ಪ್ರತೀ ದಿನ ಐದು ಪ್ರದರ್ಶನದಂತೆ ಪ್ರಚುರಪಡಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಲಾಲ್‌ಬಾಗ್‌ ಎಂಜಿ.ರಸ್ತೆ, ಕದ್ರಿ ಮಾರುಕಟ್ಟೆ, ಪಂಪ್‌ವೆಲ್‌ ಜಂಕ್ಷನ್‌, ಸುರತ್ಕಲ್‌ ಜಂಕ್ಷನ್‌, ಸ್ಟೇಟ್‌ಬ್ಯಾಂಕ್‌ ವೃತ್ತದಲ್ಲಿ ಪ್ರಚುರಪಡಿಸಲಾಗುತ್ತದೆ.

ಪೂರಕ ಸಿದ್ಧತೆ ಮಾಡಲಾಗುತ್ತಿದೆ
ಸ್ವಚ್ಛ ಸರ್ವೇಕ್ಷಣ ಅಭಿಯಾ ನಕ್ಕಾಗಿ ಮಂಗಳೂರು ಪಾಲಿಕೆಯು ಈ ಬಾರಿ ಸೆಣಸಾಡಲಿದೆ. ಅಭಿಯಾನದ ಕುರಿತಂತೆ ಈಗಾಗಲೇ ಮಾಹಿತಿ ಬಂದಿದ್ದು, ಅದಕ್ಕೆ ಪೂರಕ ಸಿದ್ಧತೆ ಮಾಡಲಾಗುತ್ತಿದೆ. ನಗರದ ದತ್ತಾಂಶ ಸಹಿತ ಸಂಬಂಧಿತ ವಿಷಯಗಳನ್ನು ಅಪ್‌ಲೋಡ್‌ಮಾಡ ಲಾಗುತ್ತಿದೆ. ಮುಂದಿನ ದಿನಗಳಲ್ಲಿ ರ್‍ಯಾಂಕಿಂಗ್‌ಗೆ ಸಂಬಂಧಿಸಿಸಾರ್ವಜನಿಕರ ಭಾಗವಹಿಸುವುಕೆ ಮುಖ್ಯವಾಗುತ್ತದೆ.
-ಪ್ರೇಮಾನಂದ ಶೆಟ್ಟಿ,
ಮನಪಾ ಮೇಯರ್‌

ಏನಿದು ಸ್ವಚ್ಛ ಸರ್ವೇಕ್ಷಣ?
ಈ ಬಾರಿಯ ಸ್ವಚ್ಛ ಸರ್ವೇಕ್ಷಣ 2022ರಲ್ಲಿ 3ರಿಂದ 10 ಲಕ್ಷದ ಜನಸಂಖ್ಯೆಯುಳ್ಳ ದೇಶದ ಸುಮಾರು 99 ನಗರ ಸ್ಥಳೀಯ ಸಂಸ್ಥೆಗಳು ಪಾಲ್ಗೊಳ್ಳಲಿದೆ. ಅದರಲ್ಲಿ ಮಂಗಳೂರು ಪಾಲಿಕೆ ಕೂಡ ಒಂದು. ಒಟ್ಟು 7,500 ಅಂಕಗಳಿಗೆ ಪ್ರತಿಯೊಂದು ನಗರವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಅದರಲ್ಲಿ ಸರ್ವಿಸ್‌ ಲೆವೆಲ್‌ ಪ್ರೋಗ್ರೆಸ್‌ಗೆ 3,000 ಅಂಕ, ಸಾರ್ವಜನಿಕರ ಧ್ವನಿಗೆ 2,250 ಅಂಕ ಮತ್ತು ದೃಢೀಕರಣಕ್ಕೆ 2,250 ಅಂಕ ನಿಗದಿಪಡಿಸಲಾಗಿದೆ. ನಗರದ ದತ್ತಾಂಶ, ಇಲ್ಲಿನ ಅಭಿವೃದ್ಧಿ ಸಹಿತ ವಿವಿಧ ವಿಚಾರಗಳನ್ನು ಅಭಿಯಾನಕ್ಕೆಂದು ಪಾಲಿಕೆಯಿಂದ ಅಪ್‌ಲೋಡ್‌ ಮಾಡಬೇಕು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಂಡವು ಪರಿಶೀಲನೆ ನಡೆಸಲು ಮಾರ್ಚ್‌ ತಿಂಗಳಿನಲ್ಲಿ ನಗರದಕ್ಕೆ ಬರಲಿದೆ.

-  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next