Advertisement

ವೆಟ್‌ವೆಲ್‌ ಕಾರ್ಯಾಚರಿಸದಿದ್ದರೂ ಗುತ್ತಿಗೆದಾರರಿಗೆ ಹಣ ಪಾವತಿ!

03:29 PM Jun 29, 2023 | Team Udayavani |

ಲಾಲ್‌ಬಾಗ್‌: ಪಾಲಿಕೆ ವ್ಯಾಪ್ತಿಯ ಒಳಚರಂಡಿ ಜಾಲಕ್ಕೆ ಸಂಬಂಧಿಸಿದಂತೆ 21 ವೆಟ್‌ವೆಲ್‌ಗ‌ಳಿದ್ದರೂ 3 ಮಾತ್ರ ಸಮರ್ಪಕವಾಗಿ ಕಾರ್ಯಾಚರಿಸುತ್ತಿದೆ. ಆದರೆ ನಿರ್ವಹಣೆ ಹೆಸರಿನಲ್ಲಿ ಎಲ್ಲ ವೆಟ್‌ವಲ್‌ಗ‌ಳ ಗುತ್ತಿಗೆದಾರರಿಗೆ ಪಾಲಿಕೆಯಿಂದ ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ಪಾವತಿಯಾಗುತ್ತಿರುವ ವಿಚಾರ ಬುಧ ವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.

Advertisement

ಮೇಯರ್‌ ಜಯಾನಂದ ಅಂಚನ್‌ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ವಿಪಕ್ಷ ಸದಸ್ಯ ಅಬ್ದುಲ್‌ ರವೂಫ್‌, ನಗರದ ವಿವಿಧೆಡೆ ಒಳಚರಂಡಿ ಮ್ಯಾನ್‌ಹೋಲ್‌ ಉಕ್ಕಿ ಹರಿಯುತ್ತಿರುವುದರಿಂದ ದುರ್ವಾಸನೆ, ಕೊಳಚೆ ನೀರಿ ನಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದರು.

ಬಂದರ್‌ನಲ್ಲಿ ಹಲವು ಸಮಯದಿಂದ ಸೋರಿಕೆಯಾಗುತ್ತಿದ್ದರೂ ಸರಿಪಡಿಸಲಾಗಿಲ್ಲ ಎಂದು ಝೀನತ್‌ ಸಂಶುದ್ದೀನ್‌ ಆರೋಪಿಸಿದರು. ಕೆಎಸ್‌ಆರ್‌ಟಿಸಿ ಮುಂಭಾಗ ವಾರದಿಂದ ಒಳಚರಂಡಿ ಉಕ್ಕಿ ಹರಿಯುತ್ತಿರುವ ಕುರಿತು ಸುಧೀರ್‌ ಶೆಟ್ಟಿ ಅವರು ತಿಳಿಸಿದರು.

ಸದಸ್ಯರ ಪ್ರಶ್ನೆಗಳಿಗೆ ಎಂಜಿನಿಯರ್‌ ನರೇಶ್‌ ಶೆಣೈ, ನಗರದಲ್ಲಿ 21 ವೆಟ್‌ವೆಲ್‌ಗ‌ಳ ಪೈಕಿ 3 ಮಾತ್ರ ಸರಿಯಾಗಿ ಕಾರ್ಯಾಚರಿಸುತ್ತಿದೆ ಎಂದು ಉತ್ತರಿ ಸಿದರು. ಇದಕ್ಕೆ ಎ.ಸಿ. ವಿನಯರಾಜ್‌ ಆಕ್ಷೇ ಪಿಸಿ, ಹಾಗಾದರೆ ಉಳಿದ ವೆಟ್‌ವೆಲ್‌ಗ‌ಳ ನಿರ್ವಹಣೆಗೆ ಯಾಕಾಗಿ ಹಣ ನೀಡಲಾಗುತ್ತಿದೆ ಎಂದು ಪ್ರಶ್ನಿಸಿ ದರು. ಪ್ರವೀಣ್‌ ಚಂದ್ರ ಆಳ್ವ, ಜಗದೀಶ್‌ ಶೆಟ್ಟಿ, ಶಶಿಧರ ಹೆಗ್ಡೆ ಮೊದಲಾದವರು ಸಮಸ್ಯೆ ಕುರಿತು ವಿವರಿಸಿದರು. ಪಾಲಿಕೆ ನೂತನ ಆಯುಕ್ತ ಆನಂದ ಸಿ.ಎಲ್‌. ಉತ್ತರಿಸಿ, ಒಳಚರಂಡಿ ಸಮಸ್ಯೆಗೆ ಸಂಬಂಧಿಸಿದಂತೆ ಎಲ್ಲ ಸದಸ್ಯರನ್ನು ಒಳಗೊಂಡು ಎಸ್‌ಟಿಪಿಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಪ್ರತ್ಯೇಕ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಫುಟ್‌ಬಾಲ್‌ ಮೈದಾನದ ಪಕ್ಕದಲ್ಲಿ ಕುಸ್ತಿ ಹಾಗೂ ಕಬಡ್ಡಿ ಕ್ರೀಡಾಂಗಣಕ್ಕೆ ಸ್ಥಳ ಮೀಸಲಿಡಲು ನಿರ್ಣಯಿಸಿರುವ ಕುರಿತು ಕಾರ್ಯಸೂಚಿಯಲ್ಲಿ ಉಲ್ಲೇಖಿಸಿರುವ ಕುರಿತು ವಿಪಕ್ಷ ಸದಸ್ಯರಾದ ಅಬ್ದುಲ್‌ ರವೂಫ್‌, ಅಬ್ದುಲ್‌ ಲತೀಫ್‌ ಅವರು ಸಭೆ ಆರಂಭವಾಗುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದರು. ಪಾಲಿಕೆ ಅಸೋಸಿಯೇಶನ್‌ ಪದಾಧಿಕಾರಿಗಳ ಅಭಿಪ್ರಾಯ ಪಡೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಫುಟ್‌ಬಾಲ್‌ ಅಸೋಸಿಯೇಶನ್‌ ಪದಾಧಿಕಾರಿಗಳನ್ನು ಈ ಕುರಿತು ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಅವರು ಬಾರದ ಹಿನ್ನೆಲೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸದಸ್ಯ ಸುಧೀರ್‌ ಶೆಟ್ಟಿ ತಿಳಿಸಿದರು. ಒಂದು ಹಂತದಲ್ಲಿ ನಿರ್ಣಯ ಹಿಂಪಡೆಯುವುದಾಗಿ ತಿಳಿಸಿದ ಮೇಯರ್‌ ಬಳಿಕ ಬದಲಿಸಿ ಈ ವಿಚಾರ “ಮುಂದೂಡಿಕೆ’ ಎಂದು ಹೇಳಿದರು. ಇದರಿಂದ ಆಕ್ರೋಶಿತರಾದ ವಿಪಕ್ಷ ಸದಸ್ಯರು ಮೇಯರ್‌ ಪೀಠದ ಎದುರು ಆಗಮಿಸಿ ಪ್ರತಿಭಟಿಸಿದರು. ಸಚೇತಕ ಪ್ರೇಮಾನಂದ ಶೆಟ್ಟಿ ಅವರು ವಿಪಕ್ಷದ ಸಲಹೆಯನ್ನು ಅನುಸರಿಸಿ ಮುಂದಿನ ಪರಿಷತ್‌ ಸಭೆಯೊಳಗೆ ನಿರ್ಣಯಿಸುವ ಎಂದು ವಿಪಕ್ಷ ಸದಸ್ಯರಿಗೆ ತಿಳಿಸಿದರು.

Advertisement

ಕೊನೆಯದಾಗಿ ಸ್ಥಳೀಯ ಕಾರ್ಪೋರೆಟರ್‌ಗಳು, ಮೇಯರ್‌, ಆಡಳಿತ- ವಿಪಕ್ಷ ಸದಸ್ಯರನ್ನೊಳಗೊಂಡ ಸಮಿತಿ ಮುಂದಿನ ಮಂಗಳವಾರ ಸಭೆ ನಡೆಸಿ, ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು.

ಸ್ಥಳೀಯ ಸಂಸ್ಥೆಗಳಲ್ಲಿ ಹೊಸ ಕಾಮಗಾರಿ, ಪೇಮೆಂಟ್‌ ತಡೆ ಹಿಡಿಯಲು ಸರಕಾರದ ಆದೇಶ ಬಂದಿರುವುದರಿಂದ ತುರ್ತು ಕಾಮಗಾರಿ ನಿರ್ವಹಿ ಸಲು ಗುತ್ತಿಗೆದಾರರು ಮುಂದೆ ಬರುವುದಿಲ್ಲ. ಈ ಬಗ್ಗೆ ಸರಕಾರಕ್ಕೆ ಪತ್ರಬರೆದು ಆದೇಶ ಹಿಂಪಡೆ ಯಲು ನಿರ್ಣಯ ಕೈಗೊಳ್ಳಬೇಕು ಎಂದು ಸುಧೀರ್‌ ಶೆಟ್ಟಿ ಆಗ್ರಹಿಸಿದರು. ಪ್ರೇಮಾನಂದ ಶೆಟ್ಟಿ ಮಾತನಾಡಿ, ಈ ಸಂಬಂಧ ಹಿಂದಿನ ಆಯುಕ್ತರು ಹೊರ ಡಿಸಿದ್ದ ಆಂತರಿಕ ಸುತ್ತೋಲೆ ಹಿಂಪಡೆಯುವ ಆವ ಶ್ಯಕತೆ ಇದೆ. ಪಾಲಿಕೆ ಅನುದಾನ, ಸ್ವಂತ ನಿಧಿಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ನೀಡ ಬೇಕು ಎಂದರು. ಈ ಬಗ್ಗೆ ಪರಿಶೀಲಿಸಿ 2 ದಿನಗಳಲ್ಲಿ ಆದೇಶ ನೀಡುವುದಾಗಿ ಆಯುಕ್ತರು ತಿಳಿಸಿದರು.

ಪೌರ ಕಾರ್ಮಿಕರ ನೇಮಕಾತಿಯಲ್ಲಿ ಅನ್ಯಾಯ
ಪಾಲಿಕೆಯಿಂದ ನಡೆಯುತ್ತಿರುವ ಪೌರ ಕಾರ್ಮಿ ಕರ ನೇಮಕಾತಿಯ ಕುರಿತು ಅನುಮಾನ ಗಳಿದ್ದು, ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಮೇಯರ್‌, ಉಪಮೇಯರ್‌, ಕಮಿಷನರ್‌, ಹಿರಿಯ ಸದಸ್ಯರನ್ನೊಳಗೊಂಡ ಉಪ ಸಮಿತಿ ರಚಿಸಿ ಈ ಕುರಿತಂತೆ ಸಭೆ ನಡೆಸಬೇಕು ಎಂದು ನವೀನ್‌ ಡಿ’ಸೋಜಾ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಅನಿಲ್‌ ಕುಮಾರ್‌, ಒಂದು ಮನೆಯಿಂದ 6 ಮಂದಿಯನ್ನು ಆಯ್ಕೆ ಮಾಡಿರುವ ಬಗ್ಗೆ ಮಾಹಿತಿ ಇದೆ ಎಂದರು.

ಶಶಿಧರ್‌ ಹೆಗ್ಡೆ, ಯಾವ ಮಾನದಂಡದ ಮೇಲೆ ಆಯ್ಕೆ ನಡೆಯುತ್ತಿದೆ ಎಂದು ಪ್ರಶ್ನಿಸಿದರು. ಆಡಳಿತ ಪಕ್ಷದ ಸದಸ್ಯ ಸುಧೀರ್‌ ಶೆಟ್ಟಿ ಅವರೂ ಬೆಂಬಲಿಸಿ, ಮುಂದಿನ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿ ದರು.

ಆ್ಯಂಟನಿಯಿಂದ ಖಜಾನೆ ಖಾಲಿ!
ಆ್ಯಂಟನಿ ಸಂಸ್ಥೆಯವರು ಪಾಲಿಕೆಯಿಂದ 16.50 ಕೋ.ರೂ. ಬಾಕಿ ಇದೆ ಎಂದು ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರ ಮೇಲೆ ಹಾಕಿರುವ ದಂಡವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿದ್ದು, ಪಾಲಿಕೆ ವತಿಯಿಂದ ನೇಮಕ ಮಾಡಲಾಗಿರುವ ನ್ಯಾಯವಾದಿಯ ಬದಲಿಗೆ ಬೆಂಗಳೂರಿನ ವಕೀಲರು ವಾದ ಮಾಡಲು ಬರುತ್ತಿದ್ದಾರೆ. ಇದರಿಂದ ಪಾಲಿಕೆಗೆ ಜಯ ಸಿಗುವುದು ಕಷ್ಟವಾಗಲಿದ್ದು, ಪಾಲಿಕೆ ಖಜಾನೆಯನ್ನು ಆ್ಯಂಟನಿ ಸಂಸ್ಥೆ ಖಾಲಿ ಮಾಡಲು ಮುಂದಾಗಿದೆ ಎಂದು ಎ.ಸಿ. ವಿನಯರಾಜ್‌ ಆರೋಪಿಸಿ ತನಿಖೆಗೆ ಆಗ್ರಹಿಸಿದರು.

ಗ್ಯಾಸ್‌ ಪೈಪ್‌ಲೈನ್‌ ಕಿರಿಕಿರಿ
ಗೇಲ್‌ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿಯ ಪೈಪ್‌ಲೈನ್‌ಗಳನ್ನು ರಸ್ತೆ ಡಿವೈಡರ್‌ ನಡುವೆ ಹಾಕಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಎರಡು ವರ್ಷಗಳಿಂದ ಈ ಪೈಪ್‌ಲೈನ್‌ ತೆರವುಗೊಳಿಸುವ ಕಾರ್ಯ ನಡೆದಿಲ್ಲ ಎಂದು ಸದಸ್ಯೆ ಸಂಗೀತಾ ನಾಯಕ್‌ ಆರೋಪಿಸಿದರು. ಚಂದ್ರಾವತಿ ಅವರೂ ಇದಕ್ಕೆ ದನಿಗೂಡಿಸಿದರು. ಪಾಲಿಕೆ ಆಯುಕ್ತರು ಪ್ರತಿಕ್ರಿಯಿಸಿ, ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗೆ ನಾವು ಸಹಕಾರ ನೀಡಬೇಕಾಗಿದೆ. ಆದರೆ ನಮ್ಮ ಆಸ್ತಿಪಾಸ್ತಿಗೆ ಧಕ್ಕೆ ತರಲು ಆಗುವುದಿಲ್ಲ. ಸಂಬಂಧಪಟ್ಟವರ ಜತೆ ಈ ಬಗ್ಗೆ ಚರ್ಚಿಸಿ ಕ್ರಮ ವಹಿಸುವುದಾಗಿ ಹೇಳಿದರು.

ಖಾಲಿ ಜಾಗಕ್ಕೆ ತೆರಿಗೆ ದುಬಾರಿ
ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಜನರಿಗೆ ಹೊರೆ ಆಗದಂತೆ 2021-22ನೇ ಸಾಲಿನಲ್ಲಿ ಏರಿಕೆ ಮಾಡಲಾಗಿತ್ತು. ಈ ಸಮಯ ಸರಕಾರದಿಂದ ಶೋಕಾಸು ನೋಟಿಸ್‌ ಹಿನ್ನೆಲೆಯಲ್ಲಿ ಎರಡೆರಡು ಬಾರಿ ತಿದ್ದುಪಡಿ ಮಾಡಿ ತೆರಿಗೆ ಏರಿಕೆ ಮಾಡಲಾಗಿದೆ. ಆದರೆ ಈ ಸಂದರ್ಭ ಖಾಲಿ ಜಾಗಕ್ಕೆ ಭಾರೀ ಪ್ರಮಾಣದಲ್ಲಿ ತೆರಿಗೆ ಏರಿಕೆಯಾಗಿದೆ. ಕಳೆದ ಬಾರಿಯ ಮೌಲ್ಯಕ್ಕಿಂತ 10 ಪಟ್ಟು ಹೆಚ್ಚು ತೆರಿಗೆ ವಿಧಿಸಿರುವ ಬಗ್ಗೆ ವಿಷಯ ಪ್ರಸ್ತಾವವಾಗಿ ಸರಕಾರ ಮಟ್ಟದಲ್ಲಿ ತಿದ್ದುಪಡಿ ಮಾಡಿಸುವ ಕುರಿತು ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಆಗ್ರಹಿಸಿದರು.

ಸಭೆಯಲ್ಲಿ ಉಪ ಮೇಯರ್‌ ಪೂರ್ಣಿಮಾ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಶಕಿಲಾ ಕಾವಾ, ಹೇಮಲತಾ ರಘು ಸಾಲ್ಯಾನ್‌, ನಯನಾ ಆರ್‌. ಕೋಟ್ಯಾನ್‌ ಉಪಸ್ಥಿತರಿದ್ದರು.

ಸಭೆಯಲ್ಲಿ ಪ್ರತಿಧ್ವನಿಸಿದ “ಸುದಿನ’ ವರದಿ
ಪಾಲಿಕೆ ಸಭೆಯಲ್ಲಿ ಎರಡು ಬಾರಿ ಉದಯವಾಣಿ ಸುದಿನ ವರದಿಗಳು ಪ್ರಸ್ತಾವವಾಯಿತು. ವಿಪಕ್ಷನಾಯಕ ನವೀನ್‌ ಡಿ’ಸೋಜಾ ಮಾತನಾಡಿ, ಬಿಟ್ಟು ಬಿಟ್ಟು ಮಳೆಯಾಗುತ್ತಿರುವುದರಿಂದ ನಗರ ವ್ಯಾಪ್ತಿಯಲ್ಲಿ ಮಲೇ ರಿಯಾ, ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಈ ಹಿಂದೆ “ಸುದಿನ’ದಲ್ಲಿ ಪ್ರಕಟವಾದ ವರದಿಯನ್ನು ಸಭೆಯಲ್ಲಿ ತೋರಿಸಿ, ಆರೋಗ್ಯಾ ಧಿಕಾರಿಯನ್ನು ಪ್ರಶ್ನಿಸಿದರು. ಆರೋಗ್ಯಾಧಿಕಾರಿ ಡಾ| ಮಂಜಯ್ಯ ಶೆಟ್ಟಿ ಉತ್ತರಿಸಿ, ನಗರದಲ್ಲಿ 7 ಮಲೇರಿಯಾ, 27 ಡೆಂಗ್ಯೂ, 14 ಟೈಫಾಯ್ಡ ಪ್ರಕರಣಗಳು ಪತ್ತೆಯಾಗಿ ರುವ ಕುರಿತು ವಿವರಿಸಿ, ಜಿಲ್ಲಾ ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿ, ಹೆಲ್ತ್‌ ಇನ್‌ಸ್ಪೆಕ್ಟರ್‌ ಮತ್ತು ಎಂಪಿಡಬ್ಲ್ಯು ಅವರು ಫಾಗಿಂಗ್‌, ಸ್ಪ್ರೆàಮಾಡಲು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು. ನಗರದ ಟ್ರಾಫಿಕ್‌ ಸಮಸ್ಯೆಯ ಕುರಿತು ಮಾತನಾಡಿದ, ವಿಪಕ್ಷ ಸದಸ್ಯ ಶಶಿಧರ ಹೆಗ್ಡೆ, ಸುದಿನ ವರದಿಯನ್ನು ಉಲ್ಲೇಖೀಸಿದರು.

ಚರ್ಚಿತ ಇತರ ವಿಷಯಗಳು
– ಪಚ್ಚನಾಡಿಯ ತ್ಯಾಜ್ಯ ದಿನಕ್ಕೆ 2 ಸಾವಿರ ಟನ್‌ ನಿರ್ವಹಣೆಯಾಗಬೇಕು.
– ಸದಸ್ಯರ ವಿವೇಚನ ನಿಧಿ 75 ಲಕ್ಷ ರೂ.ಗಳಿಗಕ್ಕೆ ಏರಿಕೆ.
– ಫುಟ್‌ಪಾತ್‌ ಗೂಡಂಗಡಿಗಳ ತೆರವಿಗೆ ಟೈಗರ್‌ ಕಾರ್ಯಾಚರಣೆ.
– ಸ್ಟೇಟ್‌ಬ್ಯಾಂಕ್‌ ಸರ್ವಿಸ್‌
ಬಸ್‌ ಸ್ಟ್ಯಾಂಡ್ ನ‌ಲ್ಲಿ ತಂಗುದಾಣ ನಿರ್ಮಾಣ.
-ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಅಳವಡಿಕೆ.
– ದಂಬೆಲ್‌-ಕೋಡಿಕಲ್‌ ಕುಡಿಯುವ ನೀರಿನ ಸಮಸ್ಯೆ ಪರಿಹಾರ.

ಟ್ರಾಫಿಕ್‌ ಸಮಸ್ಯೆಯಿಂದ ಸಂಕಷ್ಟ
ಶಶಿಧರ ಹೆಗ್ಡೆ ಮಾತನಾಡಿ, ನಗರದಲ್ಲಿ ವಾಹನ ಸಂಖ್ಯೆ ಹೆಚ್ಚಾಗಿರುವುದರಿಂದ ಟ್ರಾಫಿಕ್‌ ಸಮಸ್ಯೆ ಯಿಂದ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ. ಪಾರ್ಕಿಂಗ್‌ ಮಾಡಲು ಪರದಾಡಬೇಕಾದ ಪರಿಸ್ಥಿತಿ ಇದೆ. ವಾಣಿಜ್ಯ ಕಟ್ಟಡಗಳ ಅಂತಸ್ತು ಪಾರ್ಕಿಂಗ್‌ಗೆ ಮೀಸಲಾಗಿದ್ದರೂ ಅದಲ್ಲಿಯೂ ಬಾಡಿಗೆ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ದೂರಿದರು. ಟ್ರಾಫಿಕ್‌ಗೆ ಸಂಬಂಧಿಸಿದ ಸಭೆ ಶೀಘ್ರ ಕರೆಯಬೇಕು ಎಂದು ಆಗ್ರಹಿಸಿದರು. ಕದ್ರಿ ಪಾರ್ಕ್‌ನಲ್ಲಿ ಬೆಳಗ್ಗೆ 5 ಗಂಟೆಗೆ ಪೊಲೀಸರು ದಂಡ ವಿಧಿಸುತ್ತಾರೆ ಎಂದು ಸದಸ್ಯ ಸುಧೀರ್‌ ಶೆಟ್ಟಿ ಪ್ರಸ್ತಾವಿಸಿದರು. ನಗರದ ವಿವಿಧೆಡೆ ಬಸ್‌ ತಂಗುದಾಣ ಇಲ್ಲದಿರುವ ಬಗ್ಗೆಯೂ ಸದಸ್ಯರು ಗಮನ ಸೆಳೆದರು. ಸಭೆಗೆ ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವ ಬಗ್ಗೆ ಸಭೆಯಲ್ಲಿದ್ದ ಇನ್‌ಸ್ಪೆಕ್ಟರ್‌ ಅವರಿಗೆ ಮೇಯರ್‌ ಸೂಚಿಸಿದರು. ಬಸ್‌ತಂಗುದಾಣಗಳಿಗೆ ಸಂಬಂಧಿಸಿದ ಕೆಲಸವನ್ನು ತತ್‌ಕ್ಷಣ ಕೈಗೊಳ್ಳುವಂತೆ ಕಂದಾಯ ಅಧಿಕಾರಿಗೆ ಸೂಚಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next