Advertisement

ಹಲವು ಮನೆಗಳಿಗೆ ಒಂದೇ ನಂಬ್ರ; ದಾಖಲೆ ತಿದ್ದುಪಡಿಗಾಗಿ ಅಲೆದಾಟ!

02:50 PM Oct 29, 2022 | Team Udayavani |

ಸುರತ್ಕಲ್‌: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮನೆ ನಂಬ್ರ ನೀಡುವಾಗ ಮಾಡಿದ ಎಡವಟ್ಟಿನಿಂದಾಗಿ ಇದೀಗ ಹಲವಾರು ಕುಟುಂಬಗಳು ತಮ್ಮ ಮೂಲದಾಖಲೆಗಳನ್ನು ತಿದ್ದುಪಡಿ ಮಾಡಲು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿವೆ.

Advertisement

ಮನೆ ನಂಬ್ರ ನೀಡುವಾಗ ಒಂದು ಮನೆಗೆ ಒಂದು ನಂಬ್ರ ಸಾಮಾನ್ಯ. ಆದರೆ ಪಾಲಿಕೆಯಲ್ಲಿ ಮನೆ ನಂಬ್ರವನ್ನು ಅಕ್ಕಪಕ್ಕದ ಮನೆಯ ನಂಬ್ರವನ್ನು ಸೇರಿಸಿ ಬಾರ್‌ ಒಂದು, ಎರಡು, ಮೂರು ಹೀಗೆ ಕೊಡಲಾಗುತ್ತದೆ. ಇನ್ನು ಕೆಲವೆಡೆ ಹೊಸ ಮನೆ ಮಾಡುವ ಸಂದರ್ಭ ಮನೆ ನಂಬ್ರ ಪಡೆಯದೆ ಕಟ್ಟಿರುವುದನ್ನು ಸಕ್ರಮಗೊಳಿಸಲೂ ಯಾವುದೋ ನಂಬ್ರ ಬಳಸಿ ತೆರಿಗೆ ಪಾವತಿ ಮಾಡಲಾಗುತ್ತಿದ್ದು, ಇದು ಅಸಲಿ ನಂಬ್ರ ಪಡೆದವರಿಗೆ ಸಮಸ್ಯೆ ತಂದೊಡ್ಡಿದೆ. ಪಾಲಿಕೆ ಎಲ್ಲ ಮೂಲ ದಾಖಲೆ ಒದಗಿಸಿದ ಬಳಿಕವೇ ಅಸಲಿ ಮನೆ ನಂಬ್ರ ಪತ್ತೆ ಹಚ್ಚಿ ಸರಿಪಡಿಸುವ ಕೆಲಸ ಮಾಡಬೇಕಾಗುತ್ತದೆ. ಇಂತಹ ಹಲವಾರು ಎಡವಟ್ಟುಗಳು ನಡೆದಿದ್ದು, ಪಾಲಿಕೆ ಅಧಿಕಾರಿಗಳು ತೆರಿಗೆ ಬಾಕಿ ನೋಟಿಸ್‌ ನೀಡುವ ವೇಳೆ ಹಲವು ಪ್ರಮಾದಗಳು ಬೆಳಕಿಗೆ ಬಂದಿವೆ.

ಮನೆ ನಂಬ್ರ ಡಿಜಿಟಲೀಕರಣದ ವೇಳೆ ಹಲವು ಮನೆಗಳಿಗೆ ಒಂದೇ ನಂಬ್ರ ಕೊಟ್ಟಿರುವುದು ಪತ್ತೆಯಾಗಿವೆ. ಇದರಿಂದ ಮನೆ ಮಾಲಕರು ಸಂಕಷ್ಟ ಎದುರಿಸುವಂತಾಗಿದೆ.

ಪಾಲಿಕೆ ಆಡಳಿತಕ್ಕೆ ಸವಾಲು

ಪೇಪರ್‌ ಲೆಸ್‌ ಆಗಿ ಎಲ್ಲ ತೆರಿಗೆ ಕಟ್ಟುವ ಸೌಲಭ್ಯ ಅಳವಡಿಸಿದ ಸಂದರ್ಭ ಇದೀಗ ಮನೆ ನಂಬ್ರ ತಿದ್ದುಪಡಿಗೆ ಹಲವಾರು ದೂರುಗಳು ದಾಖಲಾಗುತ್ತಿವೆ. ಈ ಹಿಂದೆ ತೆರಿಗೆ ಕಟ್ಟಿದವರ ದಾಖಲೆಯೂ ಸಮರ್ಪಕವಾಗಿ ಇಲ್ಲವಾಗಿದ್ದು, ಪಾಲಿಕೆ ಆಡಳಿತಕ್ಕೆ ಸವಾಲಾಗಿದೆ. ಈ ಹಿಂದೆ ವೈಯುಕ್ತಿಕವಾಗಿ ಮನೆ ತೆರಿಗೆ ಕಟ್ಟಿದ್ದರೆ ರಶೀದಿಯನ್ನು ಬಿಸಾಡದೆ ಜಾಗ್ರತೆಯಿಂದ ಸಂಗ್ರಹಿಸಿಟ್ಟುಕೊಳ್ಳುವ ಅಗತ್ಯವಿದ್ದು, ಎಚ್ಚರ ತಪ್ಪಿದಲ್ಲಿ ಬಾಕಿ ನೋಟಿಸ್‌ ಬರುವ ಸಾಧ್ಯತೆಯೂ ಇಲ್ಲದಿಲ್ಲ.

Advertisement

ನಿತ್ಯ ಅಲೆದಾಟ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಂದೇ ತರಹದ ಮನೆ ನಂಬ್ರ ಹಲವಾರಿಗೆ ನೀಡಲಾಗಿದ್ದು, ಪೇಪರ್‌ ಲೆಸ್‌ ಸೌಲಭ್ಯ ಆಗುತ್ತಿರುವ ಈ ಸಂದರ್ಭ ಸಮಸ್ಯೆ ಎದುರಾಗುತ್ತಿದೆ. ನಾವು ಮಾಡದ ತಪ್ಪಿಗೆ ನಮ್ಮ ಆಧಾರ್‌ ಕಾರ್ಡ್‌ನಿಂದ ಹಿಡಿದು ಬ್ಯಾಂಕ್‌ ವರೆಗೆ ಎಲ್ಲ ದಾಖಲೆಗಳಲ್ಲಿ ಹೊಸ ಮನೆ ನಂಬ್ರ ಎಂಟ್ರಿ ಮಾಡುವುದು ಅಗತ್ಯವಾಗಿದ್ದು, ನಿತ್ಯ ಅಲೆದಾಡಬೇಕಾಗಿದೆ. ನನ್ನ ಉದ್ಯಮಕ್ಕೂ ಇದೇ ಸಮಸ್ಯೆ ಎದುರಾಗಿದೆ. -ವೈ. ರವೀಂದ್ರ ರಾವ್‌, ಸುರತ್ಕಲ್‌

ಸಮಸ್ಯೆ ಪರಿಹಾರಕೆ ಪೂರಕಕ ಕ್ರಮ: ಮನೆ ನಂಬ್ರ ನೀಡಿದ ವಿಚಾರದಲ್ಲಿ ಹಲವು ಗೊಂದಲ ಎದುರಾಗಿದ್ದು, ನಿತ್ಯ ಹಲವಾರು ದೂರುಗಳು ಬರುತ್ತಿವೆ. ಈ ಬಗ್ಗೆ ಮೇಯರ್‌ ಅವರ ಗಮನಕ್ಕೆ ತಂದು ನಗರ ಯೋಜನೆ ಸ್ಥಾಯೀ ಸಮಿತಿ ಸಭೆಯಲ್ಲಿ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಪೂರಕ ಕ್ರಮ ಕೈಗೊಳ್ಳಲಾಗುವುದು. –ಶಕಿಲಾ ಕಾವ, ಅಧ್ಯಕ್ಷರು ನಗರ ಯೋಜನೆ ಸ್ಥಾಯಿ ಸಮಿತಿ, ಮನಪಾ 

-ಲಕ್ಷ್ಮೀ ನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next