ಮಹಾನಗರ: ಮಂಗಳೂರು ಪಾಲಿಕೆಯ 60 ವಾರ್ಡ್‌ಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಈಗಾಗಲೇ ನೀಡಲಾಗಿದ್ದ ಆ್ಯಂಟೊನಿ ಸಂಸ್ಥೆಯ ಅವಧಿ ಇನ್ನು ಮೂರೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಹೊಸ ಟೆಂಡರ್ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ವಾರದೊಳಗೆ ಅಂತಿಮಗೊಳ್ಳುವ ನಿರೀಕ್ಷೆ ಇದೆ.
ಮನೆ ಮನೆ ಕಸ ಸಂಗ್ರಹಣೆಗೆ ಆ್ಯಂಟೊನಿ ವೇಸ್ಟ್ ಹ್ಯಾಂಡ್‌ಲಿಂಗ್ ಸೆಲ್ ಪ್ರೈ.ಲಿ.ನ ಏಳು ವರ್ಷಗಳ ಅವಧಿ 2022ರ ಜನವರಿಗೆ ಅಂತ್ಯಗೊಂಡಿತ್ತು. ಮುಂದೆ ಹೊಸ ಟೆಂಡರ್ ಆಗುವವರೆಗೆ ಮತ್ತೆ ಆ್ಯಂಟೊನಿ ಸಂಸ್ಥೆಗೆ ಅವಧಿ 2023 ಜ. 31ರ ವರೆಗೆ ವಿಸ್ತರಿಸಲಾಗಿದೆ. ಈ ನಡುವೆ ತ್ಯಾಜ್ಯ ನಿರ್ವಹಣೆಯ ಕಾರ್ಯ ವಿಧಾನದ ಕುರಿತಾಗಿ ಸರಕಾರದ ಸೂಚನೆ ಮೇರೆಗೆ ಪಾಲಿಕೆಯಿಂದ ಇತ್ತೀಚೆಗೆ ಕಳುಹಿಸಿದ್ದ ಡಿಪಿಆರ್‌ಗೆ ತಾಂತ್ರಿಕ ಸಮಿತಿ ಅನುಮೋದನೆ ನೀಡಿದೆ. ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಇದರಲ್ಲಿ ಶಕ್ತ ಯಾವುದೇ ಸಂಸ್ಥೆಗಳು ಭಾಗವಹಿಸಲು ಅವಕಾಶವಿದೆ. ಟೆಂಡರ್ ಅವಧಿ 5 ಅಥವಾ 7 ವರ್ಷಗಳಿಗೆ ಸೀಮಿತಿಗೊಳ್ಳುವ ಸಾಧ್ಯತೆ ಇದೆ.
ಮುಂಬರುವ ಟೆಂಡರ್ ಪಡೆಯುವ ಸಂಸ್ಥೆಯಿಂದ ವಾಹನ, ಡ್ರೈವರ್, ಲೋಡರ್ ಅನ್ನು ಮಾತ್ರ ಪಡೆದುಕೊಂಡು, ಪಾಲಿಕೆ ನೇಮಿಸಿದ ಸ್ವತ್ಛತೆ ಕಾರ್ಮಿಕರನ್ನೇ ನಿಯೋಜಿಸುವ ಬಗ್ಗೆಯೂ ಪಾಲಿಕೆ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತಿದೆ. ಮಂಗಳಾ ರಿಸೋರ್ಸ್ ಮ್ಯಾನೇಜ್ ಮೆಂಟ್ ಹಾಗೂ ಪಾಲಿಕೆ ಕಳುಹಿಸಿದ್ದ ಡಿಪಿಆರ್ ಅನ್ನು ಸರಕಾರಕ್ಕೆ ಕಳುಹಿಸಲಾಗಿತ್ತು.
ಇದನ್ನು ಪರಿಶೀಲಿಸಿದ ಸರಕಾರ 2 ಡಿಪಿಆರ್‌ನಲ್ಲಿರುವ ಅಂಶಗಳ ಆಯ್ದವುಗಳನ್ನು ಪಡೆದುಕೊಂಡು ಹೊಸ ಡಿಪಿಆರ್ ಸಿದ್ಧಮಾಡಿ ಕಳುಹಿಸುವಂತೆ ಸರಕಾರ ಪಾಲಿಕೆಗೆ ತಿಳಿಸಿತ್ತು. ಅದರಂತೆ ಒಂದು ಡಿಪಿಆರ್ ಅನ್ನು ಸಿದ್ಧಮಾಡಿ ಸರಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯಲಾಗಿದೆ.
ಪ್ರಕ್ರಿಯೆ ಕೊನೆಯ ಹಂತದಲ್ಲಿದೆ: ಮಂಗಳೂರು ನಗರದಲ್ಲಿ ತ್ಯಾಜ್ಯ ನಿರ್ವಹಣೆಗೆ ಸಂಬಂಧಪಟ್ಟದಂತೆ ಹೊಸ ಟೆಂಡರ್ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಸರಕಾರ ಮಟ್ಟದಿಂದ ಅನುಮತಿ ಪಡೆದು ವಾರದೊಳಗೆ ಟೆಂಡರ್ ಕರೆಯಲು ನಿರ್ಧರಿಸಲಾಗುವುದು. –
ಅಕ್ಷಯ್ ಶ್ರೀಧರ್, ಪಾಲಿಕೆ ಆಯುಕ್ತರು