Advertisement

ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯದೆ 15 ತಿಂಗಳು !

11:46 PM Jun 12, 2020 | Sriram |

ವಿಶೇಷ ವರದಿ-ಮಹಾನಗರ: ನಗರದ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ ನಡೆಸಲು ಪ್ರತಿ ತಿಂಗಳು ನಡೆಯುತ್ತಿದ್ದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯದೆ ಇಲ್ಲಿಯವರೆಗೆ ಬರೋಬ್ಬರಿ 15 ತಿಂಗಳು ಕಳೆದಿವೆ.

Advertisement

ಪ್ರಸಕ್ತ ಅವಧಿಗೆ ಪಾಲಿಕೆ ಪರಿಷತ್‌ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದಿದ್ದರೂ ಮೇಯರ್‌- ಉಪ ಮೇಯರ್‌ ಚುನಾವಣೆಯನ್ನು ಹೊರತು ಪಡಿಸಿದರೆ ಇಲ್ಲಿವರೆಗೆ ಸಾಮಾನ್ಯ ಸಭೆ ನಡೆದಿಲ್ಲ.

ಪಾಲಿಕೆಯ ಕಳೆದ ಬಾರಿಯ ಕಾಂಗ್ರೆಸ್‌ ಆಡಳಿತಾವಧಿ 2019ರ ಮಾ. 11ಕ್ಕೆ ಮುಕ್ತಾಯವಾಗಿತ್ತು. ಅದರ ಮುನ್ನ ಫೆಬ್ರವರಿಯಲ್ಲಿ ಮೇಯರ್‌ ಭಾಸ್ಕರ್‌ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆದಿತ್ತು. ಆ ಬಳಿಕ ಇಲ್ಲಿಯವರೆಗೆ ಸಾಮಾನ್ಯ ಸಭೆ ನಡೆದಿಲ್ಲ. ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಮುಕ್ತಾಯವಾದ ಬಳಿಕ ಆಡಳಿತಾಧಿಕಾರಿಗಳ ನೇಮಕವಾಗಿತ್ತು. ಬಳಿಕ ಪಾಲಿಕೆ ಸದಸ್ಯರ ಚುನಾವಣೆಗಾಗಿ ಮೀಸಲಾತಿ ಪ್ರಕಟವಾಗಿ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ಚುನಾವಣೆಯೂ ತಡವಾಗಿತ್ತು. ನವೆಂಬರ್‌ನಲ್ಲಿ ಪಾಲಿಕೆ ಚುನಾವಣೆ ನಡೆದರೂ ಮೇಯರ್‌ ಮೀಸಲಾತಿ ಬರಲು ಮತ್ತೆ ಕೆಲವು ತಿಂಗಳು ಕಾಯಬೇಕಾಯಿತು. ಹೀಗಾಗಿ ಸಾಮಾನ್ಯ ಸಭೆ ನಡೆಯಲು ಸಾಧ್ಯವಾಗಿರಲಿಲ್ಲ.

ನೂತನ ಮೇಯರ್‌, ಉಪ ಮೇಯರ್‌ ಆಯ್ಕೆ ಫೆಬ್ರವರಿಯಲ್ಲಿ ನಡೆದಿದ್ದು, ಇದಕ್ಕಾಗಿ ವಿಶೇಷ ಸಭೆ ಆಯೋಜಿಸಲಾಗಿತ್ತು. ಬಳಿಕ ಸಾಮಾನ್ಯ ಸಭೆ ನಡೆಯುವ ಬಗ್ಗೆ ತಿಳಿಸಲಾಗಿತ್ತಾದರೂ ಕೋವಿಡ್-19 ಕಾರಣದಿಂದ ಸಾಮಾನ್ಯ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ.

ಸಭೆ ಅಗತ್ಯ
ಸದ್ಯ ಎಲ್ಲೆಡೆ ಕೊರೊನಾ ಆತಂಕ ಇರುವ ಕಾರಣ ದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಸಾಮಾನ್ಯ ಸಭೆ ಹೊಸ ಆಡಳಿತದಲ್ಲಿಯೂ ನಡೆದಿಲ್ಲ. ಆದರೆ ಕೊರೊನಾ ನಿವಾರಣೆಗಾಗಿ ಸಾಮಾನ್ಯ ಸಭೆ ಮಾಡಬೇಕಾಗಿದೆ. ಜತೆಗೆ ಮಳೆಗಾಲದ ತುರ್ತು ಕೆಲಸಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಜತೆಗೆ ಮಂಗಳೂರು ಸೆಂಟ್ರಲ್‌ ಮಾರುಕಟ್ಟೆ ವಿವಾದ ಬಗ್ಗೆಯೂ ಚರ್ಚೆ ನಡೆಯಬೇಕಿದೆ.

Advertisement

ಬೆಂಗಳೂರು ಪಾಲಿಕೆಯಲ್ಲಿ ಮಾಡಿದಂತೆ ಆನ್‌ಲೈನ್‌ ತಂತ್ರಜ್ಞಾನ ಬಳಸಿಕೊಂಡು ಸಾಮಾನ್ಯ ಸಭೆ ನಡೆಸಲೂ ಅವಕಾಶವಿದೆ. ನೂತನ ತಂತ್ರಜ್ಞಾನಕ್ಕೆ ಈ ನಿಟ್ಟಿನಲ್ಲಿ ಪಾಲಿಕೆ ಒಗ್ಗಿಕೊಳ್ಳುವ ಅನಿವಾರ್ಯವೂ ಇದೆ.

ಪಾಲಿಕೆ ಸಾಮಾನ್ಯ ಸಭೆ ವಿಶೇಷ
ಜನರ ಸಮಸೆ- ಸವಾಲುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲು ಪಾಲಿಕೆ ಸಾಮಾನ್ಯ ಸಭೆಯೇ ಆಧಾರ.ತಮ್ಮ ವಾರ್ಡ್‌ಗಳ ಸಮಸ್ಯೆ ಅಥವಾ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಪಾಲಿಕೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮುನ್ನಡೆಯಲು ಸಾಧ್ಯ. ವಾರ್ಡ್‌ಗಳಲ್ಲಿ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿ ಕುರಿತಂತೆ ಚರ್ಚೆಯೂ ಇಲ್ಲಿಯೇ ನಡೆಯುತ್ತದೆ. ಯಾವುದೇ ವಿಚಾರದಲ್ಲಿ ನಿರ್ಣಯ ತೆಗೆದುಕೊಳ್ಳಬೇಕಾದರೂ ಪಾಲಿಕೆ ಸಾಮಾನ್ಯ ಸಭೆಯ ಒಪ್ಪಿಗೆ ಪಡೆಯಲೇಬೇಕು.

ಆಡಳಿತ ಪಕ್ಷದವರಿಗೆ ಚುರುಕು ಮೂಡಿಸುವ ನಿಟ್ಟಿನಲ್ಲಿ ವಿಪಕ್ಷದವರಿಗೆ ಮಾತನಾಡಲು ಇರುವ ಸಭೆಯೇ ಸಾಮಾನ್ಯ ಸಭೆ.ಪ್ರತಿ ತಿಂಗಳಿಗೊಂದು ಪಾಲಿಕೆ ಸಾಮಾನ್ಯ ಸಭೆ ನಡೆಯುವುದು ನಿಯಮ.

ಪುರಭವನದಲ್ಲಿ ಸಾಮಾನ್ಯ ಸಭೆ?
ಮಂಗಳೂರು ಪಾಲಿಕೆಯಲ್ಲಿ ಸಾಮಾನ್ಯ ಸಭೆ ನಡೆಸುವುದಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹುದೊಡ್ಡ ಸಮಸ್ಯೆ. 60 ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲು ಸೂಕ್ತ ಸ್ಥಳಾವಕಾಶ ಸಾಕಾಗದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದಕ್ಕಾಗಿ ಪಾಲಿಕೆ ಸಭೆಯನ್ನು ಪುರಭವನದಲ್ಲಿ ನಡೆಸುವ ಬಗ್ಗೆ ಆಡಳಿತ ಪಕ್ಷದ ಕೆಲವು ಸದಸ್ಯರು ಆಯುಕ್ತರಲ್ಲಿ ಕೋರಿದ್ದರು. ಉರ್ವಸ್ಟೋರ್‌ನ ಜಿ.ಪಂ. ಸಭಾಂಗಣದಲ್ಲಿ ಸಭೆ ನಡೆಸುವ ಬಗ್ಗೆಯೂ ಮಾತುಕತೆ ನಡೆದಿತ್ತು. ಈ ಮಧ್ಯೆ ಅಗತ್ಯದ ಹಾಗೂ ಸೀಮಿತ ಅಧಿಕಾರಿಗಳ ಜತೆಗೆ ಸಾಮಾನ್ಯ ಸಭೆಯನ್ನು ಪಾಲಿಕೆ ಸಭಾಂಗಣದಲ್ಲಿಯೇ ಮಾಡುವ ಬಗ್ಗೆಯೂ ಮಾತುಕತೆ ನಡೆದಿದ್ದು, ಇನ್ನೂ ಅಂತಿಮ ತೀರ್ಮಾನವಾಗಿಲ್ಲ.

 ಜೂನ್‌ನಲ್ಲಿ ಸಭೆ
ಮಂಗಳೂರು ಪಾಲಿಕೆಯ ಸಾಮಾನ್ಯ ಸಭೆಯನ್ನು ಜೂನ್‌ನಲ್ಲಿ ನಡೆಸಬೇಕು ಎಂದು ಚಿಂತಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸೀಮಿತ ಅಧಿಕಾರಿಗಳ ಮೂಲಕ ಸಾಮಾನ್ಯ ಸಭೆ ನಡೆಸುವ ಸಂಬಂಧ ರಾಜ್ಯ ಸರಕಾರದಿಂದ ಅಭಿಪ್ರಾಯ ಪಡೆದು ಕ್ರಮ ವಹಿಸಲಾಗುವುದು. ಕೋವಿಡ್-19 ಹಾಗೂ ಮಳೆಗಾಲದ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆ ಮಹತ್ವ ದ್ದಾಗಿರುತ್ತದೆ.
-ದಿವಾಕರ ಪಾಂಡೇಶ್ವರ
ಮೇಯರ್‌ ಮಂಗಳೂರು ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next