ಸ್ಟೇಟ್‌ಬ್ಯಾಂಕ್: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಹುಕಾಲದ ಬೇಡಿಕೆ ಹಾಗೂ ಹೊಸ ರೈಲುಗಳ ಆರಂಭಕ್ಕೆ ವಿಘ್ನವಾಗಿದ್ದ 4 ಹಾಗೂ 5ನೇ ಪ್ಲಾಟ್‌ಫಾರಂ ನಿರ್ಮಾಣ ಕಾಮಗಾರಿಗೆ ವೇಗ ದೊರೆತಿದ್ದು, ನಾಲ್ಕು ತಿಂಗಳೊಳಗೆ ಬಳಕೆಗೆ ಲಭ್ಯವಾಗುವ ಎಲ್ಲ ಸಾಧ್ಯತೆಗಳಿವೆ.
ಕರಾವಳಿ ಭಾಗದ ಪ್ರಯಾಣಿಕರು, ಪ್ರಯಾಣಿಕ ಸಂಘಟನೆಗಳು ಹಾಗೂ ಹೋರಾಟಗಾರರ ಬಹುಕಾಲದ ಬೇಡಿಕೆಯಾಗಿದ್ದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ 4 ಮತ್ತು 5ರ ಕಾಮಗಾರಿ ಮೇ ತಿಂಗಳಲ್ಲಿ ಆರಂಭವಾಗಿದ್ದು, ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಪಾಲ್ಘಾಟ್ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ತ್ರಿಲೋಕ್ ಕೊಠಾರಿ ಅವರು ಇತ್ತೀಚೆಗೆ ರೈಲು ನಿಲ್ದಾಣಕ್ಕೆ ಆಗಮಿಸಿ ಕಾಮಗಾರಿ ಪ್ರಗತಿ ಪರಿಶೀಲಿಸಿದ್ದಾರೆ.
ಹೊಸ ಪ್ಲಾಟ್‌ಫಾರ್ಮ್ ನಲ್ಲಿ 24 ಎಲ್ ಎಚ್‌ಬಿ ಬೋಗಿ ಅಥವಾ 26 ಐಸಿಎಫ್ ಕೋಚ್‌ಗಳ ನಿಲುಗಡೆ ಸಾಧ್ಯವಾಗಲಿದೆ. ಒಟ್ಟು 4.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿವೆ. ಪ್ಲಾಟ್‌ಫಾರ್ಮ್ ನ ಬದಿ ಗೋಡೆಯ ಬಹುತೇಕ ಕೆಲಸ ಹಾಗೂ ಮಣ್ಣು ತುಂಬುವ ಕೆಲಸಗಳು ಪೂರ್ಣಗೊಂಡಿವೆ. ನೆಲಹಾಸು, ಚಾವಣಿ, ಪಾದಚಾರಿಗಳ ಮೇಲ್ಸೇತುವೆಯ ವಿಸ್ತರಣೆ ಕೆಲಸಗಳು ಆಗಬೇಕಿವೆ.
ಹೊಸ ಪ್ಲಾಟ್‌ಫಾರ್ಮ್ ಗಳು ನೇರ ರಸ್ತೆ ಸಂಪರ್ಕ ಹೊಂದಿರುವುದಿಲ್ಲ. ಇತರ ಪ್ಲಾಟ್‌ಫಾರ್ಮ್ಗಳಿಂದ ಫುಟ್‌ಓವರ್ ಬ್ರಿಡ್ಜ್ ಮೂಲಕ 4 ಹಾಗೂ 5ನೇ (ಹೊಸ) ಪ್ಲಾಟ್‌ಫಾರ್ಮ್ಗಳನ್ನು ಪ್ರವೇಶಿಸಬೇಕು.
Related Articles
ಲಾಭವೇನು?
“ಮಂಗಳೂರು ಸೆಂಟ್ರಲ್‌ನಲ್ಲಿ ಹೊಸ ರೈಲು ಆರಂಭಕ್ಕೆ ಪ್ಲಾಟ್ ಫಾರ್ಮ್ ಖಾಲಿ ಇಲ್ಲ’ ಎಂಬ ಸಬೂಬು ನೀಡಿ ಪ್ರಸ್ತುತ ಕಂಕನಾಡಿ, ನೇತ್ರಾವತಿ ಸೇತುವೆ ಸಮೀಪ ಕೆಲವು ರೈಲುಗಳನ್ನು ನಿಲ್ಲಿಸಲಾಗುತ್ತದೆ. ಮೂರು ಪ್ಲಾಟ್ ಫಾರಂಗಳಲ್ಲಿ ನಿಂತಿರುವ ರೈಲುಗಳು ಮುಂದಕ್ಕೆ ಚಲಿಸದೆ ಉಳಿದ ರೈಲುಗಳು ನಿಲ್ದಾಣ ಪ್ರವೇಶಿಸುವಂತಿಲ್ಲ. ಹೊಸ ಪ್ಲಾಟ್ ಫಾರಂ ಆದರೆ, ಮತ್ತೂಂದು ರೈಲು ನಿಲುಗಡೆಗೆ ಅವಕಾಶ ನೀಡುವುದರಿಂದ ಸಮಸ್ಯೆ ಬಹುತೇಕ ನಿವಾರಣೆಯಾಗುತ್ತದೆ. ಜತೆಗೆ, ಹೊಸ ರೈಲುಗಳ ಸೇವೆಯನ್ನು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಆರಂಭಿಸಲೂ ಅವಕಾಶವಾಗುತ್ತದೆ. ಹೀಗಾಗಿ ಎರಡು ಹೊಸ ಪ್ಲಾಟ್‌ಫಾರಂ ನಿರ್ಮಾಣದಿಂದ ಹೊಸ ರೈಲು ಸೇವೆಗೆ ಮಂಗಳೂರು ಸೆಂಟ್ರಲ್‌ನಿಂದ ಅವಕಾಶ ಸಿಗುವ ಸಾಧ್ಯತೆಯಿದೆ. ಪರಿಣಾಮವಾಗಿ ರೈಲು ನಿಲ್ದಾಣ ಹೆಚ್ಚು ಜನ ಬಳಕೆಗೆ ಲಭ್ಯವಾಗಲಿದೆ.
ಎರಡು ಮರ ಶಿಫ್ಟ್!
ಪ್ಲಾಟ್ ಫಾರ್ಮ್ ನಿರ್ಮಾಣದ ವೇಳೆ ತೆರವಾಗುವ ಸಂದರ್ಭ 50 ಹಾಗೂ 20 ವರ್ಷದಷ್ಟು ಹಳೆಯ ಎರಡು ಆಲದ ಮರಗಳನ್ನು ಪರಿಸರಪ್ರೇಮಿ ಜೀತ್ ಮಿಲನ್ ರೋಶ್ ನೇತೃತ್ವದಲ್ಲಿ ಸ್ಥಳಾಂತರಿಸಲಾಗಿದೆ. ಮೂಲ ಸ್ಥಳದಿಂದ ಸುಮಾರು 200 ಮೀಟರ್ ದೂರಕ್ಕೆ ಬೃಹತ್ ಕ್ರೇನ್, ಅತ್ಯಾಧುನಿಕ ಯಂತ್ರೋಪಕರಣಗಳು, ಇಲಾಖೆಯ ಸಿಬಂದಿ, ಪರಿಸರವಾದಿಗಳ ಸಹಾಯದಿಂದ ಮರಗಳನ್ನು ಸ್ಥಳಾಂತರಿಸಲಾಯಿತು.
ಮಾರ್ಚ್‌ನಲ್ಲಿ ಸಿದ್ಧ: ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಕಾಮಗಾರಿಯನ್ನು ರೈಲ್ವೇ ವಿಭಾಗೀಯ ಪ್ರಬಂಧಕ ತ್ರಿಲೋಕ್ ಕೊಠಾರಿ ಅವರು ಪರಿಶೀಲನೆ ನಡೆಸಿದ್ದಾರೆ. ಮುಂದಿನ ಮಾರ್ಚ್ ವೇಳೆಗೆ ಹೊಸ 4ನೇ ಹಾಗೂ 5ನೇ ಪ್ಲಾಟ್‌ಫಾರ್ಮ್ ಗಳು ಬಳಕೆಗೆ ಸಿದ್ಧವಾಗಬಹುದು. –ಎಂ.ಕೆ. ಗೋಪಿನಾಥನ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ದಕ್ಷಿಣ ರೈಲ್ವೇ ಪಾಲಕ್ಕಾಡ್ ವಿಭಾಗ