ಮಂಗಳೂರು: ಬಿಎಸ್‌ಎನ್‌ಎಲ್‌ನಿಂದ ಇಂಟರ್‌ನೆಟ್ ಸೇವೆ ಒದಗಿಸುತ್ತಿರುವ ನಿಗದಿತ ಕಂಪೆನಿಯ ಮೋಡೆಮ್‌ಗೆ ಆಗಿದ್ದ ವೈರಸ್ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಅದರಲ್ಲಿಯೂ ಮಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ತೊಂದರೆಯಾಗಿದೆ.
ಮಂಗಳೂರು ನಗರವೊಂದರಲ್ಲಿ ಕಳೆದ ಕೆಲವು ವಾರಗಳಿಂದ 500ಕ್ಕೂ ಹೆಚ್ಚು ಬಿಎಸ್‌ಎನ್‌ಎಲ್ ಇಂಟರ್‌ನೆಟ್ ಸಂಪರ್ಕ ಪಡೆದುಕೊಂಡಿರುವ ಗ್ರಾಹಕರ ಮೋಡೆಮ್‌ಗಳು ವೈರಸ್ ದಾಳಿಗೆ ಒಳಗಾಗಿದ್ದು, ಈಗ ನಿಧಾನಕ್ಕೆ ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ ನಗರದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಇರುವ ಕಾರಣ ಇನ್ನು ತಮ್ಮ ಮನೆ ಅಥವಾ ಕಚೇರಿಯ ಮೋಡೆಮ್‌ಗೆ ಯಾವಾಗ ವೈರಸ್ ದಾಳಿಯಾಗುತ್ತದೆ ಎನ್ನುವ ಆತಂಕದಲ್ಲಿದ್ದಾರೆ. ಗಮನಾರ್ಹ ಅಂಶವೆಂದರೆ ವೈರಸ್ ದಾಳಿಗೆ ಒಳಗಾಗಿರುವ ಮೋಡೆಮ್‌ಗಳನ್ನು ಬಿಎಸ್‌ಎನ್‌ಎಲ್ ಕಂಪೆನಿ ಎಂಜಿನಿಯರ್‌ಗಳು ತುರ್ತಾಗಿ ರಿಪೇರಿ ಮಾಡುತ್ತಿರುವುದರಿಂದ ಗ್ರಾಹಕರಿಂದಲೂ ಈ ಬಗ್ಗೆ ಅಷ್ಟೊಂದು ದೂರುಗಳು ಬರುತ್ತಿಲ್ಲ.
ಜು.27ರಂದು ದೇಶದಾದ್ಯಂತ ಬಿಎಸ್‌ಎನ್‌ಎಲ್ ಮೋಡೆಮ್‌ಗೆ ಕಾಡಿದ ವೈರಸ್ ದಾಳಿಯಿಂದ ಅಂತರ್ಜಾಲ ವ್ಯವಸ್ಥೆ ಬಹು ತೇಕ ಕಡೆಗಳಲ್ಲಿ ಅಸ್ತವ್ಯಸ್ತಗೊಂಡಿತ್ತು. ದೇಶ ದಲ್ಲಿ ಸುಮಾರು 60,000 ಮೋಡೆಮ್‌ಗಳಿಗೆ ಈಗಾಗಲೇ ಈ ವೈರಸ್ ದಾಳಿ ಆಗಿವೆ. ಬಿಎಸ್‌ಎನ್‌ಎಲ್ ತಂತ್ರಜ್ಞರು ಇದನ್ನು ಸರಿಪಡಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದರೂ ಗ್ರಾಹಕರ ಸಂದೇಹಗಳು ಇನ್ನೂ ಪರಿಹಾರವಾಗಿಲ್ಲ. ಬಿಎಸ್‌ಎನ್‌ಎಲ್ ಕಂಪೆನಿಯಿಂದ ಇಂಟರ್‌ನೆಟ್ ಸೇವೆಗೆ ಅಳವಡಿಸಿರುವ ಸೂಪರ್‌ನೆಟ್, ಶರ್ಮ, ಬಿಟೆಲ್, ಬಿನಾಟೊನ್ ಕಂಪೆನಿ ತಯಾರಿಸಿದ ಮೊಡಮ್‌ಗಳ ಫರ್ಮ್ವೇರ್‌ಗೆ (ಕಾರ್ಯ ನಿರ್ವಹಣೆಯ ಮುಖ್ಯ ಅಂಗ) “ಮಾಲ್ವೆರ್ ವೈರಸ್’ ದಾಳಿಯಾಗುತ್ತಿದೆ. ಈ ಮೋಡೆಮ್‌ಗಳ ಇಂಟರ್ ನೆಟ್‌ಗಳು ಹಠಾತ್ ಸ್ಥಗಿತ ಗೊಂಡು ಸಂಪರ್ಕ ಜಾಲ ಅಸ್ತವ್ಯಸ್ತ ಗೊಂಡಿತ್ತು. ಇದರಿಂದ ಅನೇಕ ಗ್ರಾಹಕರ ವೈಫೈ ಸಂಪರ್ಕಕ್ಕೂ ಅಡ್ಡಿಯಾಗಿದೆ.
ಮೂಲಗಳ ಪ್ರಕಾರ ಈ ವೈರಸ್ ದಾಳಿ ಯಿಂದ ಮಂಗಳೂರಿನಲ್ಲಿ 500ಕ್ಕೂ ಅಧಿಕ ಮೋಡೆಮ್‌ಗಳು ಬಾಧಿತವಾಗಿದ್ದವು. ಇಲಾಖೆಯ ತಂತ್ರಜ್ಞರು ಕೂಡಲೇ ಕಾರ್ಯ ಪ್ರವೃತ್ತ ರಾಗಿ ಅದನ್ನು ಸರಿಪಡಿಸುವ ಕಾರ್ಯ ದಲ್ಲಿ ನಿರತ ರಾಗಿದ್ದಾರೆ. ವೈರಸ್ ದಾಳಿ ಗೊಳಗಾಗಿದ್ದ ಮೋಡೆಮ್‌ಗಳನ್ನು ರಿಸೆಟ್ ಮಾಡಿ ಬಾಧಿತ (ಡಿಫಾಲ್ಟ್ ) ಪಾಸ್‌ವರ್ಡ್ ಬದಲಾಯಿಸಿ ಹೊಸ ಪಾಸ್‌ವರ್ಡ್ ನೀಡ ಲಾಗುತ್ತದೆ. “ಜಿಲ್ಲೆಯಲ್ಲಿ ವೈರಸ್ ದಾಳಿಯಿಂದಾಗಿ ಕೆಲವು ಮೋಡೆಮ್‌ಗಳು ಬಾಧಿತವಾಗಿತ್ತು. ತಂತ್ರಜ್ಞರು ಕೂಡಲೇ ಕಾರ್ಯಪ್ರವೃತ್ತರಾಗಿ ಬಾಧಿತ ಮೋಡೆಮ್‌ಗಳನ್ನು ಸರಿಪಡಿಸಿದ್ದಾರೆ. ಈಗ ಗ್ರಾಹಕರು ಯಾವುದೇ ಸಮಸ್ಯೆಯಿಲ್ಲದೆ ಇಂಟರ್‌ನೆಟ್ ಸಹಿತ ಎಲ್ಲ ರೀತಿಯ ಸೇವೆಗಳನ್ನು ಯಥಾಸ್ಥಿತಿ ಪಡೆಯುತ್ತಿದ್ದಾರೆ’ ಎಂದು ದೂರವಾಣಿ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯವಾಗಿ ತಮ್ಮ ಮನೆ ಅಥವಾ ಕಚೇರಿಗಳಲ್ಲಿ ಇಂಟರ್‌ನೆಟ್ ಸೇವೆ ಒದಗಿಸುತ್ತಿರುವ ಮೋಡೆಮ್‌ಗಳಿಗೆ ವೈರಸ್ ದಾಳಿ ಆಗಿರುವ ವಿಚಾರ ಮೇಲ್ನೋಟಕ್ಕೆ ಗೊತ್ತಾ ಗುವುದಿಲ್ಲ. ಏಕೆಂದರೆ ಕೆಲವೊಮ್ಮೆ ತಾಂತ್ರಿಕ ದೋಷಗಳಿಂದಲೂ ಇಂಟರ್‌ನೆಟ್ ಸೇವೆ ವ್ಯತ್ಯಯವಾಗುವ ಸಾಧ್ಯತೆಯಿರುತ್ತದೆ. ಆದರೆ ವೈರಸ್ ದಾಳಿಯಿಂದಾಗಿಯೇ ಇಂಟರ್‌ನೆಟ್ ಮತ್ತು ಮೋಡೆಮ್‌ಗಳು ಕಾರ್ಯ ಸ್ಥಗಿತ ಗೊಳಿಸುವ ವಿಚಾರ ಮಾಹಿತಿ ತಂತ್ರಜ್ಞಾನ ಪರಿಣತರಿ ಗಷ್ಟೇ ಅರಿವಿಗೆ ಬರು ತ್ತದೆ. ಹೀಗಾಗಿ ತಮ್ಮ ಮನೆಯ ಮೋಡೆಮ್‌ಗೆ ವೈರಸ್ ದಾಳಿ ಆಗಿರುವ ವಿಚಾರ ಬಹಳಷ್ಟು ಮಂದಿಗೆ ತಡವಾಗಿ ಗೊತ್ತಾಗುತ್ತಿದೆ.
ದಾಳಿಯಾದರೆ ಏನು ಮಾಡಬೇಕು ?
ಒಂದು ವೇಳೆ ನಿಮ್ಮ ಬಳಿಯ ಮೋಡೆಮ್‌ಗೆ ವೈರಸ್ ದಾಳಿ ಆಗಿದ್ದರೆ, ಮೋಡೆಮ್‌ನ ಡಿಎಸ್‌ಎಲ್ ಲೈಟ್ ಕೆಂಪು ಬಣ್ಣ ತೋರಿಸುತ್ತ ಬ್ಲಿಂಕ್ ಆಗುತ್ತಿರು ತ್ತದೆ. ಆಗ ಗ್ರಾಹಕರು ಟೆಲಿಕಾಂ ಕಚೇರಿಗೆ ದೂರು ನೀಡಿದರೆ, ಸಿಬಂದಿ ಬಂದು ಅದನ್ನು ಸರಿಪಡಿಸುತ್ತಾರೆ. ಇಲ್ಲಿ ಮೋಡೆಮ್‌ನ್ನು ಬದಲಿಸುವ ಅಗತ್ಯವಿಲ್ಲ. ಬದಲಿಗೆ ಮಾಡೆಮ್ ಪ್ರೋಗ್ರಾಮ್ ಅನ್ನು ರೀ-ಸೆಟ್ ಮಾಡಿ ಸಮಸ್ಯೆ ಸರಿ ಪಡಿಸು ತ್ತಾರೆ. ಹೀಗಿರುವಾಗ ವೈರಸ್ ದಾಳಿಗೆ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ.
ಸಮಸ್ಯೆ ನಿವಾರಣೆಯಾಗಿದೆ
ಜಿಲ್ಲೆಯಲ್ಲಿ ಕೆಲವು ಕಡೆ ವೈರಸ್ ಬಾಧಿತ ಮೋಡೆಮ್‌ಗಳ ಬಗ್ಗೆ ದೂರುಗಳು ಬಂದಿದ್ದು, ಅವುಗಳನ್ನು ಈಗಾಗಲೇ ಸರಿಪಡಿಸಲಾಗಿದೆ. ಈಗ ಬಹುತೇಕ ಎಲ್ಲ ಕಡೆಗಳಲ್ಲಿಯೂ ಇಂಟರ್‌ನೆಟ್ ಸೇವೆ ಸಮರ್ಪಕವಾಗಿ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಮುಂದೆ ಇಂತಹ ಸಮಸ್ಯೆಗಳು ಬಾರದಂತೆ ನಮ್ಮ ಮುಖ್ಯ ಸರ್ವರ್‌ನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದುವೇಳೆ ಈ ಬಗ್ಗೆ ಗ್ರಾಹಕರಿಗೆ ಏನಾದರೂ ಸಮಸ್ಯೆಗಳಿದ್ದರೆ ಕೂಡಲೇ ನಮ್ಮ ಸಹಾಯವಾಣಿಗೆ
2444111ಗೆ ಸಂಪರ್ಕಿಸಬಹುದು.
– ದಿನೇಶ್, ಸಹಾಯಕ ಮಹಾಪ್ರಬಂಧಕರು ದ.ಕ.ಟೆಲಿಕಾಂ ಮಂಗಳೂರು