Advertisement

ಮಂಗಳೂರು-ಬೆಂಗಳೂರು ರೈಲು ವಿಳಂಬಕ್ಕೆ ಬಸ್‌ ಲಾಬಿ ಕಾರಣವೇ?

10:20 AM Dec 11, 2017 | Team Udayavani |

ಮೂಡಬಿದಿರೆ: ಮಂಗಳೂರು-ಬೆಂಗಳೂರು ರೈಲು ಮಾರ್ಗವು ಬ್ರಾಡ್‌ಗೆಜ್‌ಗೆ ಬದಲಾದ ಬಳಿಕವೂ ರೈಲಿನಲ್ಲಿ ಬೆಂಗಳೂರು ತಲುಪಲು 13ರಿಂದ 15 ಗಂಟೆ ತಗಲುತ್ತಿದೆ. ಈ ವಿಳಂಬದ ಹಿಂದೆ ಖಾಸಗಿ ಬಸ್‌ ಲಾಬಿ ಇದೆಯೇ? ಈ ಬಗ್ಗೆ ಪರಿಶೀಲನೆ ಮಾಡುವ ಅಧಿಕಾರವುಳ್ಳ ಸಂಸದ ನಳಿನ್‌ಕುಮಾರ್‌ ಕಟೀಲು ಅವರು ಕೂಡಲೇ ಗಮನಹರಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ, ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಹೇಳಿದರು. ಮೂಡಬಿದಿರೆಯ ತಮ್ಮ ಜನಸ್ಪಂದನ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

Advertisement

ಇಂದಿರಾ ಕ್ಯಾಂಟೀನ್‌: ದ.ಕ. ಜಿಲ್ಲೆಯ ಐದು ತಾಲೂಕುಗಳಲ್ಲಿ ತಲಾ ಒಂದರಂತೆ ಇಂದಿರಾ ಕ್ಯಾಂಟೀನ್‌ ತೆರೆಯಲು ತಾನು ವಿಧಾನಪರಿಷತ್‌ನಲ್ಲಿ ಪ್ರಸ್ತಾವಿಸಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯದ ಜಿಲ್ಲೆ ಹಾಗೂ ತಾಲೂಕು ಕೇಂದ್ರದ 247 ಕಡೆಗಳಲ್ಲಿ ಕ್ಯಾಂಟೀನ್‌ ತೆರೆಯಲಾಗುವುದು; ತಾಲೂಕು ಕೇಂದ್ರಗಳಾಗಿ ಪರಿವರ್ತನೆಯಾಗಲಿರುವ ಮೂಡಬಿದಿರೆ ಮತ್ತು ಇತರ ತಾಲೂಕು ಕೇಂದ್ರಗಳಲ್ಲೂ ಇಂದಿರಾ ಕ್ಯಾಂಟೀನ್‌ ತೆರೆಯಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿರುವುದಾಗಿ ಆಹಾರ ಸಚಿವ ಯು.ಟಿ. ಖಾದರ್‌ ತಮ್ಮ ಉತ್ತರದಲ್ಲಿ ವಿವರಿಸಿದ್ದಾರೆ ಎಂದು ಐವನ್‌ ಹೇಳಿದರು. ಮೂಲ್ಕಿ, ಮೂಡಬಿದಿರೆ, ಬಜ್ಪೆ ಪ್ರದೇಶಗಳಲ್ಲಿ ಅತ್ಯಂತ ಹೆಚ್ಚು ಮಂದಿ ಕೂಲಿ ಕಾರ್ಮಿಕರು, ಬಡತನದ ರೇಖೆಗಿಂತ ಕೆಳಗಿರುವವರು, ವಿದ್ಯಾರ್ಥಿಗಳು ಇರುವುದನ್ನು ಗಮನಿಸಿ, ಅಲ್ಲೆಲ್ಲ ಇಂದಿರಾ ಕ್ಯಾಂಟೀನ್‌ ತೆರೆಯುವುದು ಅವಶ್ಯವಾಗಿದೆ ಎಂದು ಅವರು ನುಡಿದರು.

ಕುಡುಬಿ ಜನಾಂಗ ಪ. ಪಂಗಡಕ್ಕೆ: ಕುಡುಬಿ ಜನಾಂಗವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಹತ್ತು ವರ್ಷಗಳ ಹಿಂದೆಯೇ ಶಿಫಾರಸು ಮಾಡಲಾಗಿದೆ. ದ.ಕ., ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿರುವ ಕುಡುಬಿ ಜನಾಂಗೀಯರನ್ನೂ ಈ ಪಟ್ಟಿಗೆ ಸೇರಿಸುವ ಹಿನ್ನೆಲೆಯಲ್ಲಿ ಕುಲಶಾಸ್ತ್ರೀಯ ಅಧ್ಯಯನ ಮಾಡಿ ವರದಿ ಸಲ್ಲಿಸಲು 2015ರ ಮೇ ತಿಂಗಳಿನಲ್ಲೇ ನಾಗರಬಾವಿಯ ಇನ್‌ಸ್ಟಿಟ್ಯೂಟ್‌ ಫಾರ್‌ ಸೋಶಿಯಲ್‌ ಆ್ಯಂಡ್‌ ಎಕನಾಮಿಕ್‌ ಚೇಂಜ್‌ ಸಂಸ್ಥೆಗೆ ಆದೇಶಿಸಲಾಗಿದ್ದು, ಈ ಪ್ರಕ್ರಿಯೆಯನ್ನು ಕೂಡಲೇ ನಡೆಸುವಂತೆ ಕೋರಲಾಗಿದೆ ಎಂಬುದಾಗಿ ತಮ್ಮ ಪ್ರಶ್ನೆಯೊಂದಕ್ಕೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್‌. ಆಂಜನೇಯ ಅವರು ಉತ್ತರಿಸಿರುವುದಾಗಿ ಐವನ್‌ ತಿಳಿಸಿದರು.

ಮಂಗಳೂರು-ಮೂಡಬಿದಿರೆ-ಕಾರ್ಕಳ ಮಾರ್ಗ ದಲ್ಲಿ  ಸರಕಾರಿ ಬಸ್‌:  ಮೂಡಬಿದಿರೆ-ಬೆಂಗಳೂರು ಮಾರ್ಗದಲ್ಲಿ ರಾಜಹಂಸ ಸಾರಿಗೆಯನ್ನು 2018ರ ಜನವರಿ ಯಲ್ಲಿ ಪುನರಾರಂಭಿಸಲು ಕ್ರಮ ಕೈಗೊಳ್ಳುವ ಬಗ್ಗೆ ತಾವು ಕೇಳಿದ ಪ್ರಶ್ನೆಗೆ ಉತ್ತರವಾಗಿ ಸಾರಿಗೆ ಸಚಿವರು ಮಾಹಿತಿ ನೀಡಿದ್ದಾರೆ. ಇದಲ್ಲದೆ, ಮಂಗಳೂರು-ಮೂಡಬಿದಿರೆ-ಕಾರ್ಕಳ ಮಾರ್ಗದಲ್ಲಿ 8 ಬಸ್‌ಗಳಿಂದ ಒಟ್ಟು 56 ಸಿಂಗಲ್‌ ಟ್ರಿಪ್‌ಗ್ಳ ಸಂಚಾರಕ್ಕೆ ಪರವಾನಿಗೆ ಮಂಜೂರಾಗಿದೆ. ಸಂಚಾರ ವೇಳೆ ನಿಗದಿ ಸಭೆ ನಡೆದು, ಮೂಲಭೂತ ಸೌಕರ್ಯ ಕ್ರೋಡೀಕರಿಸಿಕೊಂಡು ಈ ಮಾರ್ಗದಲ್ಲಿ ಸರಕಾರಿ ಬಸ್‌ಗಳು ಓಡಾಡಲಿವೆ ಎಂದು ಐವನ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next