Advertisement

ಬೆಡಗಿನ ಲೋಕದಲ್ಲಿ  ಕುಡ್ಲದ ಬೆಡಗಿ

12:30 AM Mar 10, 2019 | |

ಸಿನಿಮಾ ಅಂದ ಮೇಲೆ ಅದರಲ್ಲೊಂದು ಪಾರ್ಟಿ ಸಾಂಗ್‌, ಐಟಂ ಸಾಂಗ್‌ ಇರಬೇಕು. ಹಾಗಿದ್ದರೆ ಮಾತ್ರ ಆ ಸಿನಿಮಾಕ್ಕೊಂದು ಮೆರಗು, ಪ್ರೇಕ್ಷಕರಿಗೂ ಬೆರಗು ! ಇದು ಕಳೆದ ಹಲವು ದಶಕಗಳಿಂದ ಚಿತ್ರರಂಗದಲ್ಲಿ ಅನೇಕ ನಿರ್ಮಾಪಕರು, ನಿರ್ದೇಶಕರು ಪಾಲಿಸಿಕೊಂಡು ಬರುತ್ತಿರುವ ಪಾಲಿಸಿ. ಒಂದು ಸಿನಿಮಾದಲ್ಲಿ ಲವ್‌, ಆ್ಯಕ್ಷನ್‌, ಸೆಂಟಿಮೆಂಟ್‌ ಜೊತೆಗೆ ಐಟಂ ಸಾಂಗ್‌ ಕೂಡ ಇರಬೇಕು ಅನ್ನೋದು ಇಂದಿನ ಚಿತ್ರಗಳ ಸಿದ್ಧ ಸೂತ್ರಗಳಲ್ಲಿ ಒಂದು. 

Advertisement

ಹೀಗಾಗಿಯೇ ಕಳೆದ ಎರಡು ದಶಕಗಳಿಂದ ಸಿನಿಮಾಗಳಲ್ಲಿ ಐಟಂ ಸಾಂಗ್‌, ಪಾರ್ಟಿ ಸಾಂಗ್‌ಗಳಿಗೆ ಹೆಜ್ಜೆ ಹಾಕುವ ನಟಿಯರಿಗೆ ಭಾರೀ ಡಿಮ್ಯಾಂಡ್‌ ಕ್ರಿಯೇಟ್‌ ಆಗುತ್ತಿದೆ. ಅದರಲ್ಲೂ ಮಲೈಕಾ ಅರೋರಾ, ಮುಮೈತ್‌ ಖಾನ್‌, ರಾಖಿ ಸಾವಂತ್‌, ಸನ್ನಿ ಲಿಯೋನ್‌ ಮೊದಲಾದವರು ಕೇವಲ ಐಟಂ ಸಾಂಗ್‌ ಒಂದಕ್ಕೆ ಹೆಜ್ಜೆ ಹಾಕಲು ನಾಯಕ ನಟಿಯರನ್ನೂ ಮೀರಿಸುವಂತೆ ಸಂಭಾವನೆ ಪಡೆದ ಉದಾಹರಣೆಗಳು ಚಿತ್ರರಂಗದಲ್ಲಿ ಸಾಕಷ್ಟಿದೆ. 

ಇಂದು ಚಿತ್ರರಂಗ ಕೂಡ ಸಾಕಷ್ಟು ಬದಲಾಗಿದೆ. ಮೊದಲೆಲ್ಲಾ ಐಟಂ ಸಾಂಗ್‌, ಪಾರ್ಟಿ ಸಾಂಗ್‌ಗಳಿಗೆ ಹೆಜ್ಜೆ ಹಾಕುವ ನಟಿಯರನ್ನು ಕಂಡರೆ ಮೂಗು ಮುರಿಯುತ್ತಿದ್ದ ಮಂದಿ, ಇಂದು ಅದೇ ನಟಿಯರನ್ನು ಸೆಲೆಬ್ರಿಟಿ ಸ್ಥಾನದಲ್ಲಿ ನೋಡುತ್ತಿದ್ದಾರೆ. ಹಾಗಾಗಿಯೇ, ಮೊದಲೆಲ್ಲ ಕನ್ನಡ ಚಿತ್ರಗಳಲ್ಲಿ ಇಂತಹ ಹಾಡುಗಳಿಗೆ ಹೆಜ್ಜೆ ಹಾಕುವುದಕ್ಕೆ ಇಲ್ಲಿನ ನಟಿಯರು ಹಿಂಜರಿಯುತ್ತಿದ್ದರೆ, ಇಂದು ಆ ಹಿಂಜರಿಕೆ ಇಲ್ಲದೆ ಇಲ್ಲಿನ ನಟಿಯರೇ ಐಟಂ ಹಾಡುಗಳಿಗೆ ಬೋಲ್ಡ್‌ ಆಗಿ ಹೆಜ್ಜೆ ಹಾಕುತ್ತಿದ್ದಾರೆ. ಇತ್ತೀಚೆಗೆ ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ಐಟಂ ಡ್ಯಾನ್ಸರ್‌ ಆಗಿ, ನಾಯಕಿಯಾಗಿ ಹೆಸರು ಮಾಡುತ್ತಿರುವವರು ಕುಡ್ಲದ ಹುಡುಗಿ ಅಲೀಶಾ. 

ಅಲೀಶಾ ಹುಟ್ಟಿದ್ದು ಕುವೈಟ್‌ನಲ್ಲಿ, ಅವರ ಪೋಷಕರು ಮಂಗಳೂರು ಮೂಲದವರು. ನಂತರ ಮಂಗಳೂರಿಗೆ ವಾಪಸಾದ ಅಲೀಶಾ ತಮ್ಮ ಶಿಕ್ಷಣವನ್ನು ಮಂಗಳೂರಿನಲ್ಲೇ ಪೂರ್ಣಗೊಳಿಸಿದರು. ಕಾಲೇಜು ದಿನಗಳಲ್ಲೆ ಮಾಡೆಲಿಂಗ್‌ನತ್ತ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಅಲೀಶಾ ಆಗಲೇ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಹೀಗಾಗಿ ಮಾಡೆಲಿಂಗ್‌ ಲೋಕದ ನಂಟು ನಿಧಾನವಾಗಿ ಈಕೆಯನ್ನು ಚಿತ್ರರಂಗದತ್ತ ಕರೆತಂದಿತು. 

ಅಂದ ಹಾಗೆ, ಅಲೀಶಾ ಅವರಿಗೆ ಧ್ರುವ ಶರ್ಮಾ ನಾಯಕ ನಟನಾಗಿ ಅಭಿನಯಿಸಿದ್ದ ಮಾಯಾವಿ ಚಿತ್ರದಲ್ಲಿ ಮೊದಲ ಬಾರಿಗೆ ಹಾಡೊಂದಕ್ಕೆ ಹೆಜ್ಜೆ ಹಾಕುವ ಅವಕಾಶ ಒದಗಿ ಬಂದಿತು. ಮೊದಲಿಗೆ ಇಂಥ ಅವಕಾಶವನ್ನು ಒಪ್ಪಿಕೊಳ್ಳಬೇಕಾ, ಬೇಡವಾ ಎಂಬ ಜಿಜ್ಞಾಸೆಯಲ್ಲಿದ್ದ ಅಲೀಶಾ, ಕೊನೆಗೆ ತಾನೊಬ್ಬ ಕಲಾವಿದೆ. ಕಲಾವಿದರು ಅವರ ಪಾತ್ರಕ್ಕೆ ನ್ಯಾಯ ಒದಗಿಸಬೇಕು. ಪ್ರತಿಯೊಂದನ್ನು ಸವಾಲಾಗಿ ತೆಗೆದುಕೊಳ್ಳಬೇಕು ಎನ್ನುವ ಕಾರಣಕ್ಕೆ ಆ ಅವಕಾಶವನ್ನು ಒಪ್ಪಿಕೊಂಡರಂತೆ. ಅದಾದ ಬಳಿಕ ಜಯಸಿಂಹ ಮುಸುರಿ ನಿರ್ದೇಶನದ ಅಮಾನುಷಾ ಚಿತ್ರದಲ್ಲಿ ನಾಯಕ ತಿಲಕ್‌ ಅವರಿಗೆ ಮೂವರು ನಾಯಕಿಯರಲ್ಲಿ ಒಬ್ಬ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ಎರಡು-ಮೂರು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದರೂ, ಚಿತ್ರರಂಗ ಮಾತ್ರ ಅಲೀಶಾ ಅವರನ್ನು ಹೀರೋಯಿನ್‌ಗಿಂತ ಹೆಚ್ಚಾಗಿ, ಐಟಂ ಸಾಂಗ್‌ ಡ್ಯಾನ್ಸರ್‌ ಎಂದೇ ಗುರುತಿಸಿತು.  

Advertisement

ಸದ್ಯ ಅಲೀಶಾ ಚಿತ್ರರಂಗಕ್ಕೆ ಕಾಲಿಟ್ಟು ಎಂಟು ವರ್ಷಗಳಾಗಿದೆ. ಈ ಅವಧಿಯಲ್ಲಿ ಕನ್ನಡ, ತೆಲುಗು, ತಮಿಳು, ತುಳು ಸೇರಿದಂತೆ ಐದಾರು ಭಾಷೆಗಳಲ್ಲಿ ಸುಮಾರು 120ಕ್ಕೂ ಹೆಚ್ಚಿನ ಚಿತ್ರ ಗಳಲ್ಲಿ ನಾಯಕಿಯಾಗಿ, ಖಳನಾಯಕಿಯಾಗಿ, ಪೋಷಕ ನಟಿಯಾಗಿ, ಐಟಂ ಡ್ಯಾನ್ಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಯಶ್‌ ಅಭಿನಯದ ಗಜಕೇಸರಿ, ದರ್ಶನ್‌ ಅಭಿನಯದ ಚಕ್ರವರ್ತಿ ಸೇರಿದಂತೆ ಹಲವು ಸ್ಟಾರ್‌ಗಳ, ದೊಡ್ಡ ಬ್ಯಾನರ್‌ನ ಚಿತ್ರಗಳಲ್ಲೂ ಅಲೀಶಾ ಅಭಿನಯಿಸಿದ್ದಾರೆ. ಸದ್ಯ ತಮಿಳು, ತೆಲುಗಿನ ಸುಮಾರು ಐದಾರು ಚಿತ್ರಗಳಲ್ಲಿ ಖಳನಾಯಕಿಯಾಗಿ, ಐಟಂ ಡ್ಯಾನ್ಸರ್‌ ಕಾಣಿಸಿಕೊಳ್ಳುತ್ತಿ ದ್ದಾರೆ. ಇದರೊಂದಿಗೆ ಹಿರಿಯ ಛಾಯಾಗ್ರಹಕ ಪಿ.ಕೆ.ಹೆಚ್‌ ದಾಸ್‌ ನಿರ್ದೇಶನದ ತುಳು ಮತ್ತು ಕನ್ನಡ ಚಿತ್ರ ಭೂಮಿಕಾದಲ್ಲೂ ಅಲೀಶಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಬಣ್ಣದ ಲೋಕದಲ್ಲಿ ತನ್ನ ಹೆಜ್ಜೆಯ ಮೂಲಕ ಸಿನಿಪ್ರಿಯರನ್ನು ಸೆಳೆಯುತ್ತಿರುವ ಅಲೀಶಾ, ನನ್ನನ್ನು ಚಿತ್ರರಂಗಕ್ಕೆ ಬರುವಂತೆ ಪ್ರೇರೇಪಿಸಿದ್ದು ಕುಡ್ಲ ಅನ್ನೋದನ್ನ ಹೇಳಲು ಮರೆಯುವುದಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next