Advertisement

ಮಂಗಳೂರು ವಿಮಾನ ನಿಲ್ದಾಣ : ಖಾಸಗಿಗೆ ವಹಿಸಲು ಮುಹೂರ್ತ ನಿಗದಿ

01:36 AM Oct 16, 2020 | mahesh |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀ ಕರಣಗೊಳಿಸುವ ಕೇಂದ್ರ ಸರಕಾರದ ಮಹತ್ವದ ಯೋಜನೆ ಅಂತಿಮ ಹಂತ ತಲುಪಿದ್ದು, ಮಾಸಾಂತ್ಯದೊಳಗೆ ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಗೆ ಹಸ್ತಾಂತರವಾಗಲಿದೆ. ಇದರೊಂದಿಗೆ 69 ವರ್ಷಗಳಿಂದ ಸರಕಾರಿ ಸ್ವಾಮ್ಯದಲ್ಲಿದ್ದ ಮಂಗಳೂರು ವಿಮಾನ ನಿಲ್ದಾಣ ಖಾಸಗಿಯ ಪಾಲಾಗಲಿದೆ.

Advertisement

ಮೂಲಗಳ ಪ್ರಕಾರ ಅದಾನಿ ಸಂಸ್ಥೆಗೆ ಹಸ್ತಾಂತರ ಪ್ರಕ್ರಿಯೆ ನ. 12ರ ಒಳಗೆ ಪೂರ್ಣಗೊಳ್ಳಬೇಕು. ಉದಯವಾಣಿಗೆ ಲಭಿಸಿರುವ ಉನ್ನತ ಮೂಲದ ಮಾಹಿತಿಯಂತೆ ಅ. 24ರ ಶನಿವಾರದ ಮಧ್ಯರಾತ್ರಿಯಿಂದ ಅಥವಾ ನ. 1ರಿಂದ ಏರ್‌ಪೋರ್ಟ್‌ ನಿರ್ವಹಣೆಯ ಹೊಣೆಯನ್ನು ಅದಾನಿ ಸಂಸ್ಥೆಗೆ ಅಧಿಕೃತವಾಗಿ ಹಸ್ತಾಂತರಿಸಲಾಗುವುದು.

ಈ ಮಾಸಾಂತ್ಯಕ್ಕೆ ಹಸ್ತಾಂತರ ವಾದರೂ ಮುಂದಿನ ಒಂದೆರಡು ವರ್ಷ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಸಂಸ್ಥೆ ಸಮಾನಾಂತರ ಜವಾಬ್ದಾರಿ ಯೊಂದಿಗೆ ಕಾರ್ಯ ನಿರ್ವಹಿಸಲಿವೆ. ಈ ಸಮಯದಲ್ಲಿ ನಿಲ್ದಾಣ ಸಂಬಂಧಿತ ವಿಚಾರದಲ್ಲಿ ಹಣ ವಿನಿಯೋಗ, ಟರ್ಮಿನಲ್‌ನಲ್ಲಿ ವಾಣಿಜ್ಯ ಚಟುವಟಿಕೆ, ಲಾಭ-ನಷ್ಟ ವ್ಯವಹಾರವನ್ನೂ ಅದಾನಿ ಸಂಸ್ಥೆಯೇ ನೋಡಿಕೊಳ್ಳಲಿದೆ. ಪ್ರಾಧಿಕಾರವು ವಿಮಾನ ಆಗಮನ-ನಿರ್ಗಮನದ ವಿಚಾರಕ್ಕೆ ಆದ್ಯತೆ ನೀಡಿ ಒಟ್ಟು ವ್ಯವಸ್ಥೆಯ ಬಗ್ಗೆ ಮಾರ್ಗದರ್ಶಕ ಸ್ಥಾನ ದಲ್ಲಿರಲಿದೆ. ಏರ್‌ಲೈನ್ಸ್‌ ಸಂಸ್ಥೆಯವರು ಇಲ್ಲಿಯವರೆಗೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಬಾಡಿಗೆ ನೀಡುತ್ತಿದ್ದರೆ ಹಸ್ತಾಂತರದ ಬಳಿಕ ಈ ವ್ಯವಹಾರವನ್ನು ಅದಾನಿ ಸಂಸ್ಥೆಯೇ ನೋಡಿಕೊಳ್ಳಲಿದೆ.

ಸದ್ಯ ಅಲ್ಲಿನ ಉದ್ಯೋಗಿಗಳು ಯಥಾಸ್ಥಿತಿಯಂತೆ ಕರ್ತವ್ಯ ದಲ್ಲಿರುತ್ತಾರೆ. ವರ್ಷದ ಬಳಿಕ ಹೊಸ ನೇಮಕಾತಿಯನ್ನು ಅದಾನಿ ಸಂಸ್ಥೆ ನಡೆಸುವ ಸಾಧ್ಯತೆಯಿದೆ.

ಪೂರ್ಣವಾಗಿ ಹಸ್ತಾಂತರದ ಬಳಿಕ ವಿಮಾನಗಳ ಆಗಮನ-ನಿರ್ಗಮನದ ಉಸ್ತುವಾರಿಯನ್ನು ಮಾತ್ರ ಪ್ರಾಧಿಕಾರ ನೋಡಿಕೊಳ್ಳಲಿದೆ. ಹೀಗಾಗಿ ಎಟಿಸಿ (ಏರ್‌ ಟ್ರಾಫಿಕ್‌ ಕಂಟ್ರೋಲ್‌) ಹಾಗೂ ಕಮ್ಯುನಿಕೇಶನ್‌ ಆ್ಯಂಡ್‌ ನೇವಿಗೇಷನ್‌ ಸೆಂಟರ್‌ನ ಉಸ್ತುವಾರಿ ಪ್ರಾಧಿಕಾರದಲ್ಲೇ ಉಳಿಯಲಿದೆ. ಭದ್ರತಾ ಸಿಬಂದಿ ಹಾಗೂ ಏರ್‌ಲೈನ್‌ ಸಿಬಂದಿ ಹೊರತುಪಡಿಸಿ ಟರ್ಮಿನಲ್‌ ಕಟ್ಟಡ, ರನ್‌ ವೇ, ಎಲೆಕ್ಟ್ರಿಕಲ್‌, ಸಿವಿಲ್‌ ಸೇರಿದಂತೆ ಎಲ್ಲ ವಿಚಾರಗಳನ್ನು ಅದಾನಿ ಸಂಸ್ಥೆ ನಿರ್ವಹಿಸಲಿದೆ.

Advertisement

ಸಿಇಒ ಉಸ್ತುವಾರಿ
ನಿಲ್ದಾಣದ ಒಟ್ಟು ವಿಚಾರಗಳ ಬಗ್ಗೆ ಒಂದೆರಡು ತಿಂಗಳಿನಿಂದ ಅದಾನಿ ಸಂಸ್ಥೆಯ 25 ಉನ್ನತ ಅಧಿಕಾರಿಗಳು ಅಧ್ಯಯನ ಮಾಡಿದ್ದಾರೆ. ನಿಲ್ದಾಣದ ನಿರ್ದೇಶಕ ಹುದ್ದೆ ಕೆಲವು ತಿಂಗಳು ಮಾತ್ರ ಜಾರಿಯಲ್ಲಿರಲಿದ್ದು, ಬಳಿಕ ಅದಾನಿ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಉಸ್ತುವಾರಿ ನೋಡಿಕೊಳ್ಳುವ ನಿರೀಕ್ಷೆಯಿದೆ.

ಕೋಟ್ಯಂತರ ರೂ. ಹೂಡಿಕೆ ನಿರೀಕ್ಷೆ
ಅದಾನಿ ಸಂಸ್ಥೆ ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಕೋಟ್ಯಂತರ ರೂ. ಹೂಡಿಕೆ ಮಾಡುವ ಸಾಧ್ಯತೆಯಿದೆ. ಬಹುನಿರೀಕ್ಷೆಯ ರನ್‌ವೇ ವಿಸ್ತರಣೆ, ಹೊಸದಿಲ್ಲಿ-ಮುಂಬಯಿ ಏರ್‌ಪೋರ್ಟ್‌ ಮಾದರಿಯಲ್ಲಿ ಮಂಗಳೂರಿನಲ್ಲೂ ಪ್ರತ್ಯೇಕ ಕಾಂಪ್ಲೆಕ್ಸ್‌, ಮಾಲ್‌ಗ‌ಳು ಬರಲಿವೆ. ಪ್ರಯಾಣಿಕರಿಗೆ ವಿಧಿಸುವ ಶುಲ್ಕದ ಪ್ರಮಾಣ, ಟರ್ಮಿನಲ್‌ ಒಳಗಿನ ವಾಣಿಜ್ಯ ಮಳಿಗೆಗಳ ಮಾಸಿಕ ಬಾಡಿಗೆ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.

2018ರ ಡಿಸೆಂಬರ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಗೆ ಟೆಂಡರ್‌ ಆಹ್ವಾನಿಸಲಾಗಿತ್ತು. 2019 ಜುಲೈಯಲ್ಲಿ ಕೇಂದ್ರ ಸರಕಾರ ಅನುಮೋದನೆ ನೀಡಿ, 2020ರ ಫೆಬ್ರವರಿಯಲ್ಲಿ ಅದಾನಿ ಸಂಸ್ಥೆಯ ಜತೆಗೆ ಕೇಂದ್ರ ವಿಮಾನ ನಿಲ್ದಾಣ ಒಪ್ಪಂದ ಮಾಡಿ ಮುಂದಿನ 50 ವರ್ಷಗಳಿಗೆ ಗುತ್ತಿಗೆ ನೀಡಲಾಗಿತ್ತು. ಅದಾನಿ ಸಂಸ್ಥೆಯು ಬಳಿಕ ಇತರ ನಿರ್ವಹಣೆಗಾಗಿ ಜರ್ಮನಿಯ ಕಂಪೆನಿಗೆ ಹೊರಗುತ್ತಿಗೆ ನೀಡಲಿದೆ.

ಪ್ರಕ್ರಿಯೆ ಕೊನೆಯ ಹಂತದಲ್ಲಿ
ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ಹಸ್ತಾಂತರಿಸುವ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ನ. 12ರ ಒಳಗೆ ನಿಲ್ದಾಣ ಪ್ರಾಧಿಕಾರದ ಕಡೆಯಿಂದ ಹಸ್ತಾಂತರ ಮಾಡಬೇಕಿದೆ. ಅಧಿಕೃತ ಹಸ್ತಾಂತರ ದಿನಾಂಕವನ್ನು ಅದಾನಿ ಸಂಸ್ಥೆಯೇ ತೀರ್ಮಾನಿಸುತ್ತದೆ. ನಾವು ಮಾಹಿತಿ ಬಹಿರಂಗಪಡಿಸುವಂತಿಲ್ಲ.
– ವಿ.ವಿ. ರಾವ್‌, ನಿರ್ದೇಶಕರು, ಮಂಗಳೂರು ವಿಮಾನ ನಿಲ್ದಾಣ

Advertisement

Udayavani is now on Telegram. Click here to join our channel and stay updated with the latest news.

Next