Advertisement

ಮಂಗಳೂರು ಏರ್‌ಪೋರ್ಟ್‌ ಸ್ವಚ್ಛತೆಯಲ್ಲಿ ಮೊದಲಿಗ

07:00 AM Apr 01, 2018 | |

ಮಂಗಳೂರು: ದೇಶದ ವಿಮಾನ ನಿಲ್ದಾಣಗಳಲ್ಲಿ ನಡೆಸಲಾದ ಸ್ವಚ್ಛತೆಯ ಸಮೀಕ್ಷೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು “ಬಿ’ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಎಪ್ರಿಲ್‌ 1ರಂದು ಹೊಸದಿಲ್ಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. 

Advertisement

ಸ್ವಚ್ಛ ಭಾರತ ಅಭಿಯಾನ ಆರಂಭವಾದ ಬಳಿಕ ಸಾರ್ವಜನಿಕ ಸೇವಾ ವಲಯಗಳಲ್ಲಿ ಸ್ವಚ್ಛತೆಯ ಸಮೀಕ್ಷೆ ನಡೆಸಲಾಗುತ್ತಿದ್ದು, ಅದರಂತೆ ದೇಶದ ವಿಮಾನ ನಿಲ್ದಾಣಗಳಲ್ಲಿಯೂ ಸಮೀಕ್ಷೆ ಆರಂಭಿಸಲಾಗಿತ್ತು. ಸಮೀಕ್ಷೆಗಾಗಿ ನಿಲ್ದಾಣಗಳನ್ನು ಎ, ಬಿ ಮತ್ತು ಸಿ ಎಂಬುದಾಗಿ ಮೂರು ವಿಭಾಗಗಳಲ್ಲಿ ವರ್ಗೀಕರಿಸಲಾಗಿದೆ. “ಬಿ’ ವಿಭಾಗದಲ್ಲಿ ಮಂಗಳೂರು ವಿಮಾನ ನಿಲ್ದಾಣವು ಪ್ರಥಮ ಸ್ಥಾನವನ್ನು ದೇಶ ಮಟ್ಟದಲ್ಲಿ ಕಾಯ್ದುಕೊಂಡಿದೆ. ಕೇರಳದ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದ್ವಿತೀಯ ಸ್ಥಾನ ಪಡೆದುಕೊಂಡಿದೆ. 

ತಿಂಗಳ ಹಿಂದಷ್ಟೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಸಮೀಕ್ಷೆ ನಡೆಸಿದ್ದರು. ಮಂಗಳೂರು ವಿಮಾನ ನಿಲ್ದಾಣವು ಪ್ರಥಮ ಪ್ರಶಸ್ತಿಯನ್ನು ಬಾಚಿಕೊಂಡಿರುವ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಧಿಕೃತ ಮಾಹಿತಿ ಈಗಾಗಲೇ ಬಂದಿದೆ. ಎಪ್ರಿಲ್‌ 1ರಂದು ಹೊಸದಿಲ್ಲಿಯಲ್ಲಿ ನಡೆಯುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ 23ನೇ ವಾರ್ಷಿಕ ದಿನಾಚರಣೆಯಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ. ರಾವ್‌ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. 

ಸಮೀಕ್ಷೆ ಹೀಗೆ
ವಿಮಾನ ನಿಲ್ದಾಣದ ಟರ್ಮಿನಲ್‌, ಪಾರ್ಕಿಂಗ್‌ ಪ್ರದೇಶ, ಶೌಚಾಲಯ, ವಾಣಿಜ್ಯ ಮಳಿಗೆಗಳು, ರಸ್ತೆ ಸಂಪರ್ಕ, ಕಸ್ಟಮರ್‌ ಲಾಂಜ್‌ ಮತ್ತಿತರ ಸೇವಾ ಸ್ಥಳಗಳಲ್ಲಿ ತಂಡವು ಸಮೀಕ್ಷೆ ಕಾರ್ಯ ನಡೆಸಿ ಅಂಕ ನೀಡಿತ್ತು. ದುರ್ಗಾ ಫೆಸಿಲಿಟಿ ಮ್ಯಾನೇಜ್‌ಮೆಂಟ್‌ ಸರ್ವಿಸಸ್‌ ಸಂಸ್ಥೆಯು ಮಂಗಳೂರು ವಿಮಾನ ನಿಲ್ದಾಣದ ಸ್ವಚ್ಛತಾ ಕಾರ್ಯವನ್ನು ನಡೆಸುತ್ತಿದೆ. 

ಅತ್ಯಾಧುನಿಕ ಸ್ವಚ್ಛತೆ ಯಂತ್ರ
ಕಳೆದ ಹಲವು ಬಾರಿ ವಿಮಾನಯಾನಿಗಳ ಫೀಡ್‌ಬ್ಯಾಕ್‌ನಲ್ಲಿಯೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಚ್ಛತೆಯಲ್ಲಿ ಉತ್ತಮ ಪ್ರಶಂಸೆ ಲಭಿಸಿದೆ. ಈಗ ದೇಶದಲ್ಲೇ ಮೊದಲ ಸ್ಥಾನ ಪಡೆದಿರುವುದು ಖುಷಿಯಾಗಿದೆ. ಈ ವಿಮಾನ ನಿಲ್ದಾಣದ ಸ್ವಚ್ಛತೆಯನ್ನು ಕಳೆದ ಏಳು ವರ್ಷಗಳಿಂದ ನಮ್ಮ ಸಂಸ್ಥೆ ವಹಿಸಿಕೊಂಡಿದ್ದು, ಎಲ್ಲ ಕೆಲಸಗಾರರ ಶ್ರಮದಿಂದಾಗಿ ಈ ಪ್ರಶಸ್ತಿ ಪಡೆಯುವುದಕ್ಕೆ ಸಾಧ್ಯವಾಗಿದೆ. ಅತ್ಯಾಧುನಿಕ ಯಂತ್ರಗಳನ್ನು ಇಲ್ಲಿ ಸ್ವಚ್ಛತೆಗಾಗಿ ಬಳಸಲಾಗುತ್ತದೆ.
ಬಿ.ಎಸ್‌. ಶೆಟ್ಟಿ,  ಎಂಡಿ, ದುರ್ಗಾ ಫೆಸಿಲಿಟಿ  ಮ್ಯಾನೇಜ್‌ಮೆಂಟ್‌  ಸರ್ವಿಸಸ್‌ ಸಂಸ್ಥೆ

Advertisement
Advertisement

Udayavani is now on Telegram. Click here to join our channel and stay updated with the latest news.

Next