ಮಂಗಳೂರು: ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿರುವ ನವರಾತ್ರಿ ಮಹೋತ್ಸವದಲ್ಲಿ ಸಂತೆ ವ್ಯಾಪಾರ ವಿಚಾರ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.
ಒಬ್ಬ ಬಿಡ್ಡುದಾರನಿಗೆ ವ್ಯಾಪಾರಕ್ಕೆ ಅವಕಾಶ ನೀಡುವ ಪದ್ಧತಿಯನ್ನು ಈ ಬಾರಿ ಕೈಬಿಟ್ಟು ಏಲಂ ಮೂಲಕ ಜಾಗವನ್ನು ಹರಾಜು ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ನವರಾತ್ರಿ ಮತ್ತು ವರ್ಷಾವಧಿ ಜಾತ್ರೆ ಸಂದರ್ಭ ಇದೇ ಮಾದರಿಯನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಅದರಂತೆ ದೇಗುಲದ ಆಡಳಿತ ಮಂಡಳಿ ಹರಾಜು ಪ್ರಕ್ರಿಯೆ ನಡೆಸಿದೆ. ಸಂತೆ ಸ್ಥಳದಲ್ಲಿ ಜೂಜು, ಜುಗಾರಿ, ಲಕ್ಕಿಡಿಪ್, ಮಾಂಸದ ಹೊಟೇಲ್ ಮೊದಲಾದವುಗಳನ್ನು ನಡೆಸುವಂತಿಲ್ಲ. ವ್ಯಾಪಾರ ಸ್ಥಳದಲ್ಲಿ ಬಿದ್ದಿರುವ ಕಸವನ್ನೂ ವ್ಯಾಪಾರಿಗಳೇ ಹೆಕ್ಕಬೇಕು, ಧ್ವನಿ ವರ್ಧಕ ಬಳಸುವಂತಿಲ್ಲ ಎನ್ನುವ ಅಂಶಗಳೂ ಜಿಲ್ಲಾಧಿಕಾರಿಯವರ ಆದೇಶದಲ್ಲಿದೆ.
ದೇವಸ್ಥಾನದ ಆಡಳಿತ ಮಂಡಳಿ ಪ್ರಕಾರ, ದೇವಸ್ಥಾನದಿಂದ ಅನ್ಯಧರ್ಮೀಯರ ವ್ಯಾಪಾರಕ್ಕೆ ನಿರ್ಬಂಧ ಹೇರಿಲ್ಲ. ಎಲ್ಲ 94 ಅಂಗಡಿಗಳಿಗೆ ಸಂಬಂಧಿಸಿದಂತೆ ದೇಗುಲ ಅಂಗಣದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಾಕಷ್ಟು ಮಂದಿ ಭಾಗವಹಿಸಿದ್ದರು. ಆದರೆ ಯಾವುದೇ ಅನ್ಯಧರ್ಮೀಯರು ಭಾಗವಹಿಸಿಲ್ಲ. ಜಿಲ್ಲಾಧಿಕಾರಿಗಳ ಮಾರ್ಗಸೂಚಿ ಪ್ರಕಾರವೇ ಅಂಗಡಿಗಳನ್ನು ಹಂಚಿಕೆ ಮಾಡಲಾಗಿದೆ.
ಆದರೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ದ.ಕ. ಮತ್ತು ಉಡುಪಿ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಅವರು, ಏಲಂ ವೇಳೆ ಮುಸ್ಲಿಮರಿಗೆ ಅವಕಾಶ ನೀಡಿಲ್ಲ. ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಬಿತ್ತಲಾದ ಈ ಕೋಮು ವಿಷಬೀಜ ಕಾಂಗ್ರೆಸ್ ಅವಧಿಯಲ್ಲೂ ಮುಂದುವರಿದಿದೆ. ಮುಸ್ಲಿಂ ವ್ಯಾಪಾರಿಗಳು ದೇವಳದ ಒಳಗೆ ವ್ಯಾಪಾರಕ್ಕೆ ಅವಕಾಶ ಕೇಳುತ್ತಿಲ್ಲ. ಎದುರಿನ ಪಾಲಿಕೆಗೆ ಸಂಬಂಧಿಸಿದ ಸಾರ್ವಜನಿಕರ ಜಾಗದಲ್ಲಿ ಕೇಳುತ್ತಿದ್ದಾರೆ. ವ್ಯಾಪಾರಕ್ಕೆ ನಿರ್ಬಂಧಿಸಿದರೆ ಹೋರಾಟ ಮಾಡುತ್ತೇವೆ. ಏನಾದರೂ ಸಮಸ್ಯೆಯಾದರೆ ಅದಕ್ಕೆ ಪಾಲಿಕೆ ಮತ್ತು ಜಿಲ್ಲಾಡಳಿತ ಹೊಣೆ ಎಂದು ತಿಳಿಸಿದ್ದಾರೆ.
ಹರಾಜು ಪ್ರಕ್ರಿಯೆಯನ್ನು ವಿಹಿಂಪ ಸ್ವಾಗತಿಸಿದ್ದು, ಜಿಲ್ಲೆಯ ಎಲ್ಲ ದೇವಸ್ಥಾನಗಳ ಆಡಳಿತ ಮಂಡಳಿಗಳೂ ಇದೇ ಮಾದರಿ ಕ್ರಮವನ್ನು ಅನುಸರಿಸಬೇಕು ಎಂದು ಹಿಂದೂ ಜಾತ್ರಾ ವ್ಯಾಪಾರಸ್ಥರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಆಗ್ರಹಿಸಿದೆ.
ಇಂದು ಪ್ರತಿಭಟನೆ
ಮುಸ್ಲಿಂ ವ್ಯಾಪಾರಸ್ಥರನ್ನು ಜಾತ್ರೆ ವ್ಯಾಪಾರದಿಂದ ದೂರ ಇಟ್ಟಿರುವುದನ್ನು ಖಂಡಿಸಿ, ದ.ಕ ಮತ್ತು ಉಡುಪಿ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿ ವತಿಯಿಂದ ಅ. 13ರಂದು ಬೆಳಗ್ಗೆ 10ಕ್ಕೆ ಮಿನಿವಿಧಾನ ಸೌಧದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.