Advertisement

“ಮಂಗಳಾ ಕಾರ್ನಿಶ್‌’ಗೆ ಮರುಜೀವ: ಮುಡಾ ಚಿಂತನೆ

01:49 AM Jun 16, 2020 | Sriram |

ವಿಶೇಷ ವರದಿ – ಮಹಾನಗರ: ಮಂಗಳೂರು ನಗರಕ್ಕೆ ಹೊರ ವರ್ತುಲ ರಸ್ತೆ ನಿರ್ಮಿಸುವ “ಮಂಗಳಾ ಕಾರ್ನಿಶ್‌ ವರ್ತುಲ ರಸ್ತೆ’ ಯೋಜನೆಗೆ ಮರುಜೀವ ನೀಡಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಚಿಂತಿಸಿದೆ.

Advertisement

ಪ್ರಸ್ತುತ ಮಂಗಳೂರಿನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನದಲ್ಲಿದ್ದು, ಅದರಲ್ಲಿ ನದಿಗಳ ವಾಟರ್‌ಫ್ರಂಟ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯೂ ಇದೆ. ಅದಕ್ಕೆ “ಮಂಗಳಾ ಕಾರ್ನಿಶ್‌’ ಯೋಜನೆಯನ್ನು ಜೋಡಿಸಿಕೊಂಡು ಅನುಷ್ಠಾನಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದ್ದು, ಸ್ಮಾರ್ಟ್‌ ಸಿಟಿ ಅಧಿಕಾರಿಗಳ ಜತೆ ಚರ್ಚೆ ನಡೆಸಲು ಮುಡಾ ಅಧ್ಯಕ್ಷರು ಮುಂದಾಗಿದ್ದಾರೆ.

15 ವರ್ಷಗಳ ಹಿಂದೆ ರೂಪು ಗೊಂಡಿದ್ದ “ಮಂಗಳಾ ಕಾರ್ನಿಶ್‌’ ಯೋಜನೆಯನ್ನು ಮುಡಾ ವತಿಯಿಂದ ಅನುಷ್ಠಾನಗೊಳಿಸಲು ಪ್ರಕ್ರಿಯೆಗಳು ನಡೆದಿದ್ದವು. ಆಗ ಯುಪಿಒಆರ್‌ ಯೋಜನೆ ನಿರ್ದೇಶಕರಾಗಿದ್ದ ಪೊನ್ನು ರಾಜ್‌ ಅವರಿಗೆ ನೋಡಲ್‌ ಅಧಿಕಾರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿತ್ತು. ಮುಡಾದಲ್ಲಿ ಗುಜರಾತ್‌ನ ಸೆಂಟರ್‌ ಫಾರ್‌ ಎನ್ವಿರಾನ್‌ಮೆಂಟ್‌ ಪ್ಲ್ರಾನಿಂಗ್‌ ಆ್ಯಂಡ್‌ ಟೆಕ್ನಾಲಜಿ (ಸಿಇಪಿಟಿ) ವಿವಿಯ ಅರ್ಕಿಟೆಕ್ಚರ್‌ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ತಂಡ ಅಹ್ಮದಾಬಾದ್‌ನ ಸಬರ್‌ಮತಿ ವಾಟರ್‌ಫ್ರಂಟ್‌ ಪ್ರಾಜೆಕ್ಟ್ ಮಾದರಿಯಲ್ಲಿ ಮಂಗಳಾ ಕಾರ್ನಿಶ್‌ ಯೋಜನೆ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿತ್ತು. ಯೋಜನೆ ಕಾರ್ಯಗತಗೊಂಡರೆ ನಗರದಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ. ಅಲ್ಲದೆ ಈ ರಸ್ತೆ ಸಂಪೂರ್ಣವಾಗಿ ನದಿಯ ಬದಿಯಲ್ಲೇ ಸಾಗುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶವಿದೆ.

ಉಳ್ಳಾಲದಿಂದ ಕೂಳೂರಿಗೆ
ಮಂಗಳಾ ಕಾರ್ನಿಶ್‌ ಯೋಜನೆಯು 32 ಕಿ.ಮೀ. ವರ್ತುಲ ರಸ್ತೆ ನಿರ್ಮಿಸುವ ಪ್ರಸ್ತಾವನೆ ಹೊಂದಿದೆ. ಉಳ್ಳಾಲ ಸೇತುವೆ ಯಿಂದ ಪ್ರಾರಂಭವಾಗುವ ಈ ರಸ್ತೆ ನದಿ ಬದಿಯಿಂದಲೇ ಸಾಗಿ ಕೂಳೂರು ಸೇತುವೆ ಬಳಿ ರಾ.ಹೆ. 66ನ್ನು ಸೇರಲಿದೆ. ಖಾಸಗಿ ಹಾಗೂ ಸರಕಾರಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಕ್ಕೆ ಉದ್ದೇಶಿಸಿ ಆರಂಭದಲ್ಲಿ ಪ್ರಾಯೋಗಿಕವಾಗಿ ನಾಲ್ಕು ಕಡೆಗಳಲ್ಲಿ ತಲಾ ಒಂದೊಂದು ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸುವ ಚಿಂತನೆ ನಡೆದಿತ್ತು.

ಚತುಷ್ಪಥ ರಸ್ತೆ
ಸುಮಾರು 100 ಅಡಿ ಅಗಲದ ಚತುಷ್ಪಥ ರಸ್ತೆಯಾಗಿ ನಿರ್ಮಿಸಲುದ್ದೇಶಿಸಿರುವ ಈ ಯೋಜನೆಯು ಮಂಗಳೂರು ನಗರವನ್ನು ಸುತ್ತುವರಿಯಲಿದ್ದು ವರ್ತುಲ ರಸ್ತೆಯಾಗಿ ಒಳ ರಸ್ತೆಗಳು ಹಾಗೂ ನಗರದ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸುವ ಯೋಜನೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 66, 75ನ್ನು ಜೋಡಿಸುತ್ತದೆ. ಮುಂದಿನ ಹಂತಗಳಲ್ಲಿ ಕೂಳೂರು ಸೇತುವೆಯಿಂದ ಮರವೂರು ಸೇತುವೆ, ಮರವೂರು ಸೇತುವೆಯಿಂದ ಗುರುಪುರ ಸೇತುವೆ ವರೆಗೆ ರಸ್ತೆ ನಿರ್ಮಿಸಿ ರಾ.ಹೆ. 169ನ್ನು ಜೋಡಿಸುವ ಹಾಗೂ ಗುರುಪುರ ಸೇತುವೆಯಿಂದ ಕಣ್ಣೂರು ಮಧ್ಯೆ ರಸ್ತೆ ನಿರ್ಮಾಣ ಮಾಡಿ ರಾ.ಹೆ. 75ನ್ನು ಜೋಡಿಸುವ ಯೋಜನೆ ಕೂಡ ಈ ಪ್ರಸ್ತಾವನೆಯಲ್ಲಿದೆ

Advertisement

ಕಾರ್ಯ ಯೋಜನೆ
ಮಂಗಳೂರು ನಗರದಲ್ಲಿ ವಾಹನ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ವರ್ತುಲ ರಸ್ತೆ ಅವಶ್ಯವಾಗಿದೆ. ಸ್ಮಾರ್ಟ್‌ಸಿಟಿ ಯೋಜನೆ ಪ್ರಮುಖರ ಜತೆ ವಿಸ್ತೃತ ಚರ್ಚೆ ನಡೆಸಿ ಯೋಜನೆ ಅನುಷ್ಠಾನದ ಕಾರ್ಯ ಯೋಜನೆ ಬಗ್ಗೆ ನಿರ್ಧರಿಸಲಾಗುವುದು.
– ರವಿಶಂಕರ ಮಿಜಾರು, ಮುಡಾ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next