ನವದೆಹಲಿ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಮಾಜವಾದಿ ಪಕ್ಷದ ಸಂಸದ ರಾಂಭುವಲ್ ನಿಶಾದ್ ತಾವು ಸಲ್ಲಿಸಿದ ನಾಮಪತ್ರದಲ್ಲಿ ತಮ್ಮ ವಿರುದ್ಧ ಬಾಕಿ ಇರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಬಹಿರಂಗಪಡಿಸಿಲ್ಲ ಎಂದು ಆರೋಪಿಸಿ ಸುಲ್ತಾನ್ ಪುರ್ ಬಿಜೆಪಿ ಮಾಜಿ ಸಂಸದೆ ಮನೇಕಾ ಗಾಂಧಿ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಶನಿವಾರ (ಜು.27) ಕೋರ್ಟ್ ರಿಜಿಸ್ಟ್ರಿಯಲ್ಲಿ ಮನೇಕಾ ಗಾಂಧಿ ಚುನಾವಣಾ ದೂರನ್ನು ದಾಖಲಿಸಿದ್ದಾರೆ. ಈ ಅರ್ಜಿ ಜುಲೈ 30ರಂದು ಲಕ್ನೋ ಪೀಠದಲ್ಲಿ ವಿಚಾರಣೆಗೆ ಬರುವ ನಿರೀಕ್ಷೆ ಇರುವುದಾಗಿ ವರದಿ ತಿಳಿಸಿದೆ.
ನಿಶಾದ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ 12 ಕ್ರಿಮಿನಲ್ ಪ್ರಕರಣಗಳಲ್ಲಿ ಕೇವಲ 8 ಪ್ರಕರಣಗಳನ್ನು ಮಾತ್ರ ಬಹಿರಂಗಪಡಿಸಿದ್ದು, ಚಾರ್ಜ್ ಶೀಟ್ ನಲ್ಲಿದ್ದ ನಾಲ್ಕು ಪ್ರಕರಣಗಳನ್ನು ಕೈಬಿಟ್ಟಿರುವುದಾಗಿ ಮನೇಕಾ ಗಾಂಧಿ ಆರೋಪಿಸಿದ್ದಾರೆ.
ಸಮಾಜವಾದಿ ಪಕ್ಷದ ನಿಶಾದ್ ಅವರ ಆಯ್ಕೆಯನ್ನು ರದ್ದುಪಡಿಸಿ, ಮನೇಕಾ ಗಾಂಧಿ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.
ಜೂನ್ ನಲ್ಲಿ ನಡೆದ ಸುಲ್ತಾನ್ ಪುರ್ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ನಿಶಾದ್ ಅವರು ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿಯನ್ನು ಪರಾಜಯಗೊಳಿಸಿದ್ದರು. ನಿಶಾದ್ 4,44,330 ಮತ ಪಡೆದಿದ್ದು, ಮನೇಕಾ ಗಾಂಧಿ 4,01,156 ಮತ ಗಳಿಸಿದ್ದರು.
ಇದನ್ನೂ ಓದಿ: Re Marriage: 70ರ ಮುದುಕ 25 ವರ್ಷದ ಯುವತಿ ಜತೆ ವಿವಾಹ; ಜಾಲತಾಣದಲ್ಲಿ ವೈರಲ್