ಹೊಸದಿಲ್ಲಿ : ಕಾಂಗ್ರೆಸ್ ಪಕ್ಷದ ನಾಯಕಸಂಜಯ್ ಗಾಂಧಿ ಅವರ ಪುಣ್ಯ ತಿಥಿಯನ್ನು ಜೂನ್ 23 ಭಾನುವಾರಆಚರಿಸಲಾಗುತ್ತಿದೆ. ಪತ್ನಿ ಮನೇಕಾ ಗಾಂಧಿ ಮತ್ತು ಪುತ್ರ ವರುಣ್ ಗಾಂಧಿ ಅವರು ದೆಹಲಿಯಲ್ಲಿರುವ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಿರಿಯ ಪುತ್ರನಾಗಿದ್ದ ಸಂಜಯ್ ರಾಜಕಾರಣದಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿ ಬೆಳೆಯುತ್ತಿದ್ದರು.33 ರ ಹರೆಯದಲ್ಲೇ ಇಹಲೋಕ ತ್ಯಜಿಸಿದ್ದರು.
ಸಾಕ್ಷರತೆ, ಕುಟುಂಬ ಯೋಜನೆ, ಪರಿಸರ ಸಂರಕ್ಷಣೆ,ಜಾತಿವಾದದ ನಿರ್ಮೂಲನೆ, ವರದಕ್ಷಿಣೆ ನಿರ್ಮೂಲನೆ ಕುರಿತಾಗಿ ತನ್ನದೇ ಆದ ಕಲ್ಪನೆಗಳನ್ನು ಹೊಂದಿದ್ದ ಸಂಜಯ್ ಗಾಂಧಿ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಉದ್ದೇಶವನ್ನು ಹೊಂದಿದ್ದರು.
ಸಂಜಯ್ ಅವರು 1980 ರಲ್ಲಿ ದೆಹಲಿಯ ಸಫ್ದರ್‌ಜಂಗ್ ವಿಮಾನ ನಿಲ್ದಾಣದ ಬಳಿ ನಡೆದ ವಿಶೇಷ ವಿಮಾನ ಅಪಘಾತದಲ್ಲಿ ವಿಧಿವಶರಾಗಿದ್ದರು, ಅವರ ಜೊತೆ ವಿಮಾನದಲ್ಲಿದ್ದ ಏಕ ಮಾತ್ರ ಸಿಬಂದಿ ಸುಭಾಷ್ ಸಕ್ಸೇನಾ ಅವರು ಸಾವನ್ನಪ್ಪಿದ್ದರು.
ದುರಂತ ಅಂತ್ಯಕ್ಕೂ ಮುನ್ನ ಸಂಜಯ್ ಗಾಂಧಿ ಅವರನ್ನು ಮೂರು ಬಾರಿ ಹತ್ಯೆ ಮಾಡಲು ಯತ್ನಿಸಲಾಗಿತ್ತು ಎಂದು ವಿಕಿಲೀಕ್ಸ್ ಬಹಿರಂಗಪಡಿಸಿತ್ತು.
ಸಂಜಯ್ ಪತ್ನಿ ಮನೇಕಾ ಗಾಂಧಿ ಮತ್ತು ಪುತ್ರ ವರುಣ್ ಗಾಂಧಿ ಬಿಜೆಪಿಯಲ್ಲಿ ಸಂಸದರಾಗಿ ರಾಜಕಾರಣ ಮುಂದುವರೆಸಿದ್ದಾರೆ.