ಮಂಗಳೂರು: ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ಸೆರೆಯಾಗಿರುವ ಕರಾವಳಿ ಮೂಲದ ಭೂಗತ ಪಾತಕಿ ರವಿ ಪೂಜಾರಿ ಬಳಿ ನಕಲಿ ಪಾಸ್‌ಪೋರ್ಟ್ ಇರುವುದು ಖಚಿತವಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ಮಾಡಿಸಲಾಗಿದೆ ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಆ್ಯಂಟನಿ ಫೆರ್ನಾಂಡಿಸ್ ಎಂಬ ಹೆಸರಿನಡಿ ಈ ಪಾಸ್‌ಪೋರ್ಟ್ ಮಾಡಿಸಲಾಗಿದೆ. ರವಿಪೂಜಾರಿ ಜತೆಗೆ ನಿಕಟ ಸಂಪರ್ಕ ಹೊಂದಿರುವ ವ್ಯಕ್ತಿಗಳೇ ಮಾಡಿಕೊಟ್ಟಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅನುಮಾನಿಸಿದ್ದಾರೆ.
ಎರಡು ವಾರಗಳ ಹಿಂದೆ ರವಿಪೂಜಾರಿಯನ್ನು ಬಂಧಿಸಿದ್ದ ವೇಳೆ ಆತನ ಬಳಿ ಆ್ಯಂಟನಿ ಫೆರ್ನಾಂಡಿಸ್ ಹೆಸರಿನ ಭಾರತೀಯ ಪಾಸ್‌ಪೋರ್ಟ್ ಸಿಕ್ಕಿತ್ತು. ಜತೆಗೆ ಶ್ರೀಲಂಕಾ ಸೇರಿದಂತೆ ಇನ್ನು ಕೆಲವು ದೇಶಗಳ ನಕಲಿ ಪಾಸ್‌ಪೋರ್ಟ್‌ಗಳೂ ಇವೆ ಎನ್ನಲಾಗಿದೆ. ಸದ್ಯ ರವಿ ಪೂಜಾರಿಯೇ ಬಾಯಿಬಿಟ್ಟಿರುವ ಮಾಹಿತಿಯಂತೆ, ಭೂಗತ ಪಾತಕ ಲೋಕದ ಜತೆಗೆ ಹತ್ತಿರದ ನಂಟು ಹೊಂದಿರುವವರು ಹಾಗೂ ಈ ಹಿಂದೆ ಭೂಗತ ಲೋಕ ದಲ್ಲಿ ಸಕ್ರಿಯರಾಗಿದ್ದ ಕೆಲವು ವ್ಯಕ್ತಿಗಳೇ ರವಿ ಪೂಜಾರಿಗೆ ಮಂಡ್ಯದಿಂದ ‘ಆ್ಯಂಟನಿ ಫೆರ್ನಾಂಡಿಸ್’ ಎಂಬ ಹೆಸರಿನ ನಕಲಿ ಪಾಸ್‌ಪೋರ್ಟ್ ಮಾಡಿಸಿ ವರ್ಷಗಳ ಹಿಂದೆಯೇ ರವಾನಿಸಿರುವ ವಿಚಾರ ಇದೀಗ ಗೊತ್ತಾಗಿದೆ ಎನ್ನಲಾಗಿದೆ. ಈ ಪಾಸ್‌ಪೋರ್ಟ್‌ನಲ್ಲಿ ರವಿ ಪೂಜಾರಿ ತಾನು ಮೈಸೂರು ಮೂಲ ದವನು ಎಂಬ ವಿಳಾಸ ನೀಡಿದ್ದಾನೆ ಎಂದೂ ಮೂಲಗಳು ಹೇಳಿವೆ.
ಹತ್ತಾರು ವರ್ಷಗಳಿಂದ ಮುಂಬಯಿ, ಮಂಗಳೂರು, ಉಡುಪಿ, ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ಅಮಾಯಕರು ಹಾಗೂ ದೊಡ್ಡ ದೊಡ್ಡ ಉದ್ಯಮಿಗಳಿಗೆ ಕೊಲೆ ಬೆದರಿಕೆ ಕರೆ ಮಾಡಿ ಭೀತಿ ಹುಟ್ಟಿಸುತ್ತಿದ್ದ ರವಿ ಪೂಜಾರಿಯೇ ಈಗ ಅಕ್ಷರಶಃ ಹೆದರಿ ಹೋಗಿದ್ದಾನೆ ಎನ್ನುವ ಮಾಹಿತಿ ವಿಶ್ವಸನೀಯ ಮೂಲಗಳಿಂದ ‘ಉದಯವಾಣಿ’ಗೆ ಲಭಿಸಿದೆ. ಸೆನೆಗಲ್ ಪೊಲೀಸರ ವಿಚಾರಣೆಯಿಂದಾಗಿ ರವಿ ಪೂಜಾರಿ ಸಂಪೂರ್ಣ ಹೆದರಿದ್ದು, ಇದರ ಪರಿಣಾಮವಾಗಿ, ಆತನಿಗೆ ಜ್ವರ ಕೂಡ ಬಂದಿದೆಯಂತೆ. ಹೀಗಾಗಿ ಅನಾರೋಗ್ಯ ಕಾರಣದಿಂದಾಗಿ ಗಡಿಪಾರು ಪ್ರಕ್ರಿಯೆ ಕೂಡ ಸ್ವಲ್ಪ ವಿಳಂಬವಾಗಬಹುದು ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ, ರವಿ ಪೂಜಾರಿಯನ್ನು ಭಾರತಕ್ಕೆ ಗಡಿಪಾರು ಮಾಡುವ ಬಗ್ಗೆಯೂ ಕಾನೂನು ಪ್ರಕ್ರಿಯೆಗಳನ್ನು ಸೆನೆಗಲ್‌ನ ಡಕರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ನೆರವಿನೊಂದಿಗೆ ಪೂರ್ಣಗೊಳಿಸಲಾಗುತ್ತಿದೆ.
ಚೋಟಾ ರಾಜನ್‌ಗೂ ಮಂಡ್ಯ ಪಾಸ್‌ಪೋರ್ಟ್
ಕೇವಲ ರವಿಪೂಜಾರಿಯಲ್ಲ, ಮತ್ತೂಬ್ಬ ಭೂಗತ ಪಾತಕಿ ಚೋಟಾ ರಾಜನ್‌ಗೂ ಮಂಡ್ಯ ಜಿಲ್ಲೆಯಲ್ಲೇ ನಕಲಿ ಪಾಸ್‌ಪೋರ್ಟ್ ಮಾಡಿಕೊಟ್ಟಿದ್ದ ಬಗ್ಗೆ ವರದಿಯಾಗಿತ್ತು. ಪಿ. ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ಈ ನಕಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳಲಾಗಿತ್ತು.