Advertisement

ಸರಕಾರದಿಂದಲೇ ಕುಂಭಮೇಳ ಆಚರಣೆ: ಸಿಎಂ ಬೊಮ್ಮಾಯಿ 

09:48 PM Oct 16, 2022 | Team Udayavani |

ಮಂಡ್ಯ/ಕೆ.ಆರ್‌.ಪೇಟೆ(ತ್ರಿವೇಣಿ ಸಂಗಮ): ಮೂರು ನದಿಗಳು ಸಂಗಮಿಸುವ ಪವಿತ್ರ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಕುಂಭಮೇಳವನ್ನು ಸರಕಾರದಿಂದಲೇ ಆಚರಿಸುವಂತೆ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

Advertisement

ಕೆ.ಆರ್‌.ಪೇಟೆ ತಾಲೂಕಿನ ಅಂಬಿಗರಹಳ್ಳಿ-ಸಂಗಾಪುರ-ಪುರ ಗ್ರಾಮಗಳ ಬಳಿ ಇರುವ ತ್ರಿವೇಣಿ ಸಂಗಮದಲ್ಲಿ ನಡೆದ ಬಾಲ ಮಹದೇಶ್ವರರ ದೇವಾಲಯ ಉದ್ಘಾಟನೆ ಮತ್ತು ಮಹಾಕುಂಭ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದಕ್ಷಿಣ ಭಾರತದ ಪವಿತ್ರ ಕ್ಷೇತ್ರ ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ಜೀವ ನದಿಗಳ ಸಂಗಮ ಕ್ಷೇತ್ರ ಇದಾಗಿದ್ದು, ಇದರ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು. ಪ್ರವಾಸೋದ್ಯಮ, ಸ್ನಾನದ ಕಟ್ಟೆ, ನಿರಂತರವಾಗಿ ಜನರು ಇಲ್ಲಿಗೆ ಆಗಮಿಸುವಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಗುಜರಾತ್‌ನ ಹಿಂದೂಧರ್ಮ ಆಚಾರ್ಯ ಸಭಾದ ಶ್ರೀ ಪರಮಾತ್ಮನಾನಂದ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಡಾ| ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಸೋಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ವಿನಯ್‌ ಗುರೂಜಿ, ವಿದ್ಯಾಶಂಕರ ಸ್ವಾಮೀಜಿ, ಸಚಿವರಾದ ಬಿ.ಸಿ.ನಾಗೇಶ್‌, ಬೈರತಿ ಬಸವರಾಜು, ಕೆ.ಸಿ.ನಾರಾಯಣ ಗೌಡ, ಕೆ.ಗೋಪಾಲಯ್ಯ ಸಹಿತ ಹಲವರು ಉಪಸ್ಥಿತರಿದ್ದರು.

ಬಾಲಕಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ
ಮಳವಳ್ಳಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿಯ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಈಗಾಗಲೇ ಆರೋಪಿಯನ್ನು ಬಂಧಿ ಸಲಾಗಿದೆ. ಪೊಲೀಸರು ಎಲ್ಲ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಶೀಘ್ರವೇ ಆರೋಪಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡಲಾಗುವುದು ಎಂದರು.

Advertisement

ಗಂಗಾರತಿಯೊಂದಿಗೆ ಕುಂಭಮೇಳ ಸಂಪನ್ನ
ನಾಲ್ಕು ದಿನಗಳಿಂದ ನಡೆಯುತ್ತಿದ್ದ ಕುಂಭಮೇಳಕ್ಕೆ ಪುಣ್ಯಸ್ನಾನ ಹಾಗೂ ಗಂಗಾರತಿಯೊಂದಿಗೆ ಕುಂಭಮೇಳಕ್ಕೆ ತೆರೆ ಎಳೆಯಲಾಯಿತು. ಬೆಳಗ್ಗೆ ಪುಣ್ಯಸ್ನಾನದ ಬಳಿಕ ಸಮಾರೋಪ ಸಮಾರಂಭ ನಡೆಯಿತು. ಅನಂತರ ರಾತ್ರಿ 6.30ಕ್ಕೆ ಸಂಗಮದ ವೇದಿಕೆಯಲ್ಲಿ ನಡೆದ ಗಂಗಾರತಿಯೊಂದಿಗೆ ಕುಂಭಮೇಳ ಸಂಪನ್ನಗೊಂಡಿತು. ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next