ಮಂಡ್ಯ: ಗಂಡನ ಮನೆಯವರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡೆತ್ನೋಟ್ ಬರೆದಿಟ್ಟು ತಾಯಿ ಹಾಗೂ ಮಗು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ನಾಗಮಂಗಲ ಪಟ್ಟಣದ ಟಿ.ಬಿ.ಬಡಾವಣೆಯ ಕೆಂಚೇಗೌಡನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ನಾಗಮಂಗಲ ತಾಲೂಕಿನ ಚಿಕ್ಕವೀರನಕೊಪ್ಪಲು ಗ್ರಾಮದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಸುನಂದ ದೊರೆಸ್ವಾಮಿ ಪುತ್ರಿ ಬಿಂದು(25) ಹಾಗೂ 9 ತಿಂಗಳ ಹೆಣ್ಣು ಮಗು ಜ್ಞಾನವಿ ನೇಣಿಗೆ ಶರಣಾಗಿದ್ದಾರೆ.
ಕಳೆದ ಐದು ವರ್ಷದ ಹಿಂದೆ ಮನೆಯವರ ವಿರೋಧದ ನಡುವೆಯೂ ಬಿಂದು ನಾಗಮಂಗಲ ಪಟ್ಟಣದ ನವೀನ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ನಂತರ ಅತ್ತೆ ಮನೆಯವರ ಕಿರುಕುಳದಿಂದ ನೊಂದು ತಾಯಿ ಮನೆಗೆ ಬಂದ ಬಿಂದು ಮಗುವನ್ನು ನೇಣಿಗೆ ಹಾಕಿ ತಾನು ಕೂಡ ಅದೇ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನನ್ನ ಸಾವಿಗೆ ನನ್ನ ಗಂಡ ನವೀನ ಮತ್ತು ಆತನ ಪ್ರೇಯಸಿ ಮಮತ ಹಾಗೂ ಅತ್ತೆ ನಾಗಮ್ಮ, ನಾದಿನಿಯರಾದ ನಂದಿನಿ ಮತ್ತು ನಯನ ಅವರು ಹಣದ ವಿಚಾರವಾಗಿ ಪದೇ ಪದೇ ಕಿರುಕುಳ ಚಿತ್ರಹಿಂಸೆ ನೀಡುತ್ತಿದ್ದು, ನನ್ನ ಸಾವಿಗೆ ಇವರೇ ಕಾರಣರಾಗಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಿ.ಪಂ. ಮಾಜಿ ಸದಸ್ಯರಾದ ಸುನಂದ ದೊರೆಸ್ವಾಮಿ ಕುಟುಂಬವು ಕೆಂಚೇಗೌಡನ ಕೊಪ್ಪಲು ಗ್ರಾಮದ ವಕೀಲರಾದ ಚಿಕ್ಕಸ್ವಾಮಿ ಅವರ ಮನೆಯಲ್ಲಿ ಬಾಡಿಗೆಗೆ ಪಡೆದು ವಾಸವಿದ್ದರು.
ಇಂದು ನಡೆದ ಈ ದುರ್ಘಟನೆಗೆ ಗಂಡ ನವೀನ ಹಾಗೂ ಆತನ ಕುಟುಂಬದವರು ಕಾರಣವೆಂದು ತಂದೆ ದೊರೆಸ್ವಾಮಿ ಪಟ್ಟಣ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಲಕ್ಷ್ಮೀನಾರಾಯಣಪ್ರಸಾದ್, ಸರ್ಕಲ್ ಇನ್ಸ್ಪೆಕ್ಟರ್ ಸುಧಾಕರ, ಪಿಎಸ್ಐ ರವಿಶಂಕರ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.