Advertisement

ಮಂಡ್ಯ “ಕೈ’ಒಗ್ಗೂಡಿಸುವ ನಾವಿಕನಾರು?

05:17 PM Feb 12, 2021 | Team Udayavani |

ಮಂಡ್ಯ: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಅವರ ಅವಧಿ ಮುಗಿದಿರುವುದರಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಎದುರಾಗಿದ್ದು, ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.

Advertisement

ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣಗಳು ಹೆಚ್ಚಾಗಿರುವುದ ರಿಂದ ಸಂಘಟನೆ ಇಲ್ಲದೆ ಸೊರಗಿದೆ. ಇದರಿಂದ ಕಳೆದ ವಿಧಾನಸಭೆ ಚುನಾವಣೆಯನ್ನು ಸೋಲಬೇಕಾಯಿತು. ಲೋಕಸಭೆ ಚುನಾವಣೆಯಲ್ಲಿ ಬಂಡಾಯ, ಭಿನ್ನಮತ, ಅಸಮಾಧಾನಗಳಿಂದ ಮೈತ್ರಿ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ಸಿಗಲಿಲ್ಲ. ಅಲ್ಲದೆ, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ನಿರೀಕ್ಷಿತ ಸಾಧನೆ ಕಂಡು ಬಂದಿಲ್ಲ.

ಒಗ್ಗೂಡಿಸುವ ನಾಯಕ ಯಾರು?: ಬಣ ರಾಜಕೀಯ, ಅಸಮಾಧಾನ, ಭಿನ್ನಮತಗಳಿಂದ ಚದುರಿ ಹೋಗಿರುವ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸಮರ್ಥ ನಾಯಕನ ಅಗತ್ಯವಿದೆ. ಜಿಲ್ಲೆಯಲ್ಲಿ ಪಕ್ಷ ಸಂಘಟಿಸಿ ಮತ್ತೆ ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕಿದೆ. ಈಗಾಗಲೇ ಪಕ್ಷದ ಬೆಳವಣಿಗೆಗಳಿಂದ ಬೇರೆ ಪಕ್ಷಗಳಿಗೆ ವಲಸೆ ಹೋಗಿರುವ ಕಾರ್ಯಕರ್ತರನ್ನು ಕರೆ ತರುವಕೆಲಸವೂ ಆಗಬೇಕಿದೆ.

ಸಂಘಟನೆಯದ್ದೇ ಚಿಂತೆ: ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ಪ್ರಬಲವಾಗಿದರೂ ನಾಯಕರು, ಮುಖಂಡರು ಹಾಗೂ ಕಾರ್ಯ ಕರ್ತರ ನಡುವಿನ ಭಿನ್ನಾಭಿಪ್ರಾಯಗಳಿಂದ ಪಕ್ಷ ಸಂಘಟನೆಯಲ್ಲಿ ಹಿಂದುಳಿದಿದೆ. ಇದರಿಂದ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಜೆಡಿಎಸ್‌ ಪ್ರಬಲಗೊಳ್ಳುತ್ತಿದ್ದರೆ, ಅತ್ತ ಕೇಸರಿ ಪಡೆ ಒಂದೊಂದಾಗಿ ತನ್ನ ಖಾತೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಪಕ್ಷದ ಅನೇಕ ಕಾರ್ಯಕರ್ತರು ಹಾಗೂ ಮುಖಂಡರನ್ನು ಆಪರೇಷನ್‌ ಮೂಲಕ ಸೆಳೆದುಕೊಂಡು ಪ್ರಬಲವಾಗಿ ಬೆಳೆಯುತ್ತಿದೆ. ಇಂಥ ಸಂದರ್ಭದಲ್ಲಿ ಪಕ್ಷ ಸಂಘಟಿಸುವ ಅನಿವಾರ್ಯತೆ ಕೈ ಪಕ್ಷಕ್ಕಿದೆ.

ಚುನಾವಣೆ ಗೆಲ್ಲುವ ಅನಿವಾರ್ಯತೆ: ಮುಂದಿನ ಜಿಪಂ ಹಾಗೂ ತಾಪಂ ಚುನಾವಣೆಗಳು ಬರಲಿದ್ದು, ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಇರಾದೆಯೂ ಇದೆ. ಇದರ ಜತೆಗೆ 2023ರ ವಿಧಾನಸಭೆ ಚುನಾವಣೆ ಯಲ್ಲಿ ಜಿಲ್ಲೆಯಲ್ಲಿ ಕನಿಷ್ಠ 4ರಿಂದ 5 ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಮುಂದಿನ ಮೇ ತಿಂಗಳಲ್ಲಿ ನಡೆಯುವ ಜಿಪಂ ಹಾಗೂ ತಾಪಂ ಚುನಾವಣೆಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕಾಗಿದೆ.

Advertisement

ಜಿಲ್ಲಾ ಕಾಂಗ್ರೆಸ್‌ ಅರಿತಿರುವ ಡಿಕೆಶಿ: ಸಚಿವರಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಹೊತ್ತಿದ್ದ ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಎಲ್ಲ ಬೆಳವಣಿಗೆಗಳು ಗೊತ್ತಿದೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಅಗತ್ಯವಿರುವುದನ್ನು ಅರಿತ್ತಿದ್ದಾರೆ. ಮಾಜಿ ಸಚಿವ ಹಾಗೂ ನಟ ಅಂಬರೀಷ್‌ ಅಭಿಮಾನಿಗಳು ಕಾಂಗ್ರೆಸ್‌ನಲ್ಲಿದ್ದರೂ ಸುಮಲತಾ ಪರ ನಿಂತಿದ್ದಾರೆ. ಅಲ್ಲದೆ, ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರು ಬಿಜೆಪಿಯಲ್ಲಿದ್ದರೂ, ಅವರ ಬೆಂಬಲಿಗರು ಕಾಂಗ್ರೆಸ್‌ನಲ್ಲಿದ್ದಾರೆ. ಇದನ್ನೆಲ್ಲವನ್ನು ಗಮನ ದಲ್ಲಿಟ್ಟುಕೊಂಡು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕನ ಆಯ್ಕೆ ಬಹಳ ಕಷ್ಟವೇನಿಸಿದರೂ, ಅಳೆದು ತೂಗಿ ಯಾರನ್ನು ಆಯ್ಕೆ ಮಾಡಲಿ ದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next