Advertisement
ಇತ್ತೀಚೆಗೆ ರಾಜ್ಯ ಸರ್ಕಾರ ಸುಮಾರು 37 ಉದ್ದಿಮೆಗಳನ್ನು ಕನಿಷ್ಠ ವೇತನ ಕಾಯ್ದೆಯ ಅನುಸೂಚಿಯಲ್ಲಿ ಹೊಸದಾಗಿ ಸೇರಿಸಿದೆ. ಅದರಂತೆ, “ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳು ಅಂದರೆ, ಮಂದಿರಗಳು, ಮಠಗಳು, ಚರ್ಚ್‌ಗಳು, ಮಸೀದಿಗಳು, ಗುರುದ್ವಾರಗಳು, ಬಸದಿಗಳು, ಗುಡಿಗಳು, ವಿಹಾರಗಳು ಹಾಗೂ ಇಸ್ಕಾನ್, ಆರ್ಯ ಸಮಾಜ, ಥಿಯೋಸೊಫಿಕಲ್ ಸೊಸೈಟಿ ಸೇರಿ ಮೇಲ್ಕಂಡ ಎಲ್ಲ ಸಂಸ್ಥೆಗಳ ಕಚೇರಿಗಳನ್ನು ಕನಿಷ್ಠ ವೇತನ ವ್ಯಾಪ್ತಿಗೆ ತರಲಾಗಿದ್ದು, ಇದರಲ್ಲಿ ಕೆಲಸ ಮಾಡುವವರು ಕಾನೂನು ರೀತಿ ಕನಿಷ್ಠ ವೇತನ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
Related Articles
Advertisement
119 ಉದ್ದಿಮೆಗಳು ಕಾಯ್ದೆ ವ್ಯಾಪ್ತಿಗೆ: ಪರಿಸ್ಥಿತಿ ಹಾಗೂ ಬೇಡಿಕೆಗೆ ಅನುಗುಣವಾಗಿ ಆಗಾಗ ರಾಜ್ಯ ಸರ್ಕಾರ ಉದ್ದಿಮೆಗಳನ್ನು ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ಸೇರಿಸುತ್ತದೆ. ಅದರಂತೆ 1991ರಿಂದ ಸುಮಾರು 82 ಉದ್ದಿಮೆಗಳನ್ನು ಕನಿಷ್ಠ ವೇತನ ಕಾಯ್ದೆ-1948ರ ವ್ಯಾಪ್ತಿಗೆ ಸೇರಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಹೊಸ ಉದ್ದಿಮೆಗಳನ್ನು ಕಾಯ್ದೆ ವ್ಯಾಪ್ತಿಗೆ ತಂದಿರಲಿಲ್ಲ. ಹೆಚ್ಚು ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದಾಗಿ ಈಗ ಹೊಸದಾಗಿ 37 ಉದ್ದಿಮೆಗಳನ್ನು ಕಾಯ್ದೆ ವ್ಯಾಪ್ತಿಗೆ ತರಲಾಗಿದೆ. ಇವುಗಳಿಗೆ ಇನ್ನೂ ಕನಿಷ್ಠ ವೇತನ ನಿಗದಿಪಡಿಸಬೇಕಾಗಿದೆ. ಕಾರ್ಮಿಕ ವರ್ಗ, ಕಾರ್ಮಿಕ ಸಂಘಟನೆಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೋರ್ಟ್ ವ್ಯಾಜ್ಯಗಳುಯಾವುದೇ ಉದ್ದಿಮೆ ಹೊಸದಾಗಿ ಕನಿಷ್ಠ ವೇತನ ಕಾಯ್ದೆಗೆ ಸೇರ್ಪಡೆಗೊಂಡಾಗ ಸಂಬಂಧಪಟ್ಟ ಉದ್ದಿಮೆಯ ಮಾಲೀಕರು ಬೇಗ ಅದನ್ನು ಒಪ್ಪಿಕೊಳ್ಳುವುದಿಲ್ಲ. ಉದ್ದಿಮೆ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಸರ್ಕಾರ ನಿಗದಿಪಡಿಸಿದಷ್ಟು ಕನಿಷ್ಠ ವೇತನ ನೀಡಲು ಸಾಧ್ಯವಾಗುವುದಿಲ್ಲ ಎಂಬುದು ಮಾಲೀಕರ ವಾದ. ಹೀಗಾಗಿ, 30ಕ್ಕೂ ಹೆಚ್ಚು ಉದ್ದಿಮೆಗಳ ಮಾಲೀಕರು ಸರ್ಕಾರದ ತೀರ್ಮಾನ ಪ್ರಶ್ನಿಸಿ ಕೋರ್ಟ್‌ಗೆ ಹೋಗಿದ್ದಾರೆ, ಈ ಸಂಬಂಧ ವಿವಿಧ ನ್ಯಾಯಾಲಯಗಳಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಕೆಲವೊಂದಕ್ಕೆ ತಡೆಯಾಜ್ಞೆಯೂ ಸಿಕ್ಕಿದೆ. ಹೊಸ ಉದ್ದಿಮೆಗಳನ್ನು ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ತರುವ ಸರ್ಕಾರದ ಪ್ರಯತ್ನಕ್ಕೆ ಒಂದಿಷ್ಟು ಹಿನ್ನಡೆ ಉಂಟು ಮಾಡುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುಡಿಯುವ ವರ್ಗಕ್ಕೆ ಅವರ ಶ್ರಮಕ್ಕೆ ತಕ್ಕಂತೆ ಸಂಭಾವನೆ ಒದಗಿಸುವ ಉದ್ದೇಶದಿಂದ ಹೊಸ ಉದ್ದಿಮೆಗಳನ್ನು ಕನಿಷ್ಠ ವೇತನ ಕಾಯ್ದೆ ವ್ಯಾಪ್ತಿಗೆ ಸೇರಿಸಿರುವುದು ಸ್ವಾಗತಾರ್ಹ. ಇದರಿಂದ ಕಾರ್ಮಿಕರ ವೇತನಕ್ಕೆ ಕಾನೂನಿನ ರಕ್ಷಣೆ ಸಿಕ್ಕಂತಾಗಲಿದೆ. ಕಾರ್ಮಿಕ ಇಲಾಖೆ, ಕಾರ್ಖಾನೆ ಮಾಲೀಕರು ಇದನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಕಾರ್ಮಿಕ ವರ್ಗ ತಮ್ಮ ಹಕ್ಕು ಪಡೆದುಕೊಳ್ಳಲು ಸಂಘಟಿತ ಪ್ರಯತ್ನ ನಡೆಸಬೇಕು.
– ಕೆ.ಎನ್. ಉಮೇಶ್, ಕಾರ್ಮಿಕ ಮುಖಂಡ – ರಫೀಕ್ ಅಹ್ಮದ್