ಹಾಸನ: ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಮೂಲಕ ಜೀವವನ್ನು ಉಳಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು. ಜಿಲ್ಲಾಡಳಿತ, ಕೆಎಸ್‌ಆರ್‌ಟಿಸಿ ಹಾಸನ ವಿಭಾಗದ ಸಹಯೋಗದೊಂದಿಗೆ ಹಾಸನ ಬಸ್ ಡಿಪೋ – 1ರ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 31 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ರಸ್ತೆ ಸುರಕ್ಷತೆ – ಜೀವನ ರಕ್ಷೆ ಎಂಬ ಘೋಷಣೆಯೊಂದಿಗೆ ಪ್ರಯಾಣಿಕರ ಅಮೂಲ್ಯವಾದ ಜೀವಗಳು ವಾಹನ ಚಾಲಕರ ಕೈಯಲ್ಲಿರುತ್ತದೆ. ಹಾಗಾಗಿ ರಸ್ತೆ ನಿಯಮಗಳ ಸೂಚನಾ ಫಲಕಗಳನ್ನು ಕ್ರಮಬದ್ಧವಾಗಿ ಪಾಲನೆ ಮಾಡಬೇಕು ಎಂದರು. 1ನೇ ಅಧಿಕ ಸಿವಿಲ್ ನ್ಯಾಯಾಧೀಶ ಎಸ್.ಬಿ. ಕೆಂಬಾವಿ ಅವರು ಮಾತನಾಡಿ, ವಾಹನ ಚಾಲಕರು ದಿನ ನಿತ್ಯದ ಹಾಗೂ ಕೌಟುಂಬಿಕ ಒತ್ತಡಗಳನ್ನು ಸರಿದೂಗಿಸಿಕೊಂಡು ತಮ್ಮ ಕರ್ತವ್ಯಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿದಾಗ ಮಾತ್ರ ಕಾರ್ಯಕ್ರಮದ ಮುಖ್ಯ ಉದ್ದೇಶ ಸಫಲವಾಗುತ್ತದೆ ಎಂದು ಹೇಳಿದರು.
ನಾಗರಿಕರೂ ಜವಾಬ್ದಾರಿ ವಹಿಸಬೇಕು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಶೋಕ್ ಕುಮಾರ್ ಮಾತನಾಡಿ, ರಸ್ತೆ ನಿಯಮಗಳ ಪಾಲನೆ ವಾಹನ ಚಾಲಕರದ್ದು ಮಾತ್ರವಲ್ಲದೇ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ. ಅತಿ ವೇಗದ ಚಾಲನೆಯಲ್ಲಿ ಯುವ ಜನಾಂಗ ಹೆಚ್ಚಾಗಿ ಮರಣ ಹೊಂದುತ್ತಿದ್ದು ಮೃತರ ಕುಟುಂಬಕ್ಕೆ ಮಾತ್ರವಲ್ಲದೇ ದೇಶದ ಪ್ರಗತಿಗೂ ಅಪಾರವಾದ ನಷ್ಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿ ಅನಿಲ್ ಕುಮಾರ್, ತಾಂತ್ರಿಕ ವಿಭಾಗದ ಅಧಿಕಾರಿ ನಂದನ್ ಕುಮಾರ್ ಅವರೂ ಉಪಸ್ಥಿತರಿದ್ದರು.
ಜಾಗೃತಿ ಮೂಡಿಸಿ: ವಾರ್ಷಿಕ ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ ರಸ್ತೆ ಅಪಘಾತದಿಂದ ಮರಣ ಹೊಂದಿದವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮದ ಮೂಲಕ ಅರಿವು ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಗಿರೀಶ್ ಹೇಳಿದರು. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಹನ ಚಾಲಕರು ತಮ್ಮ ಕರ್ತವ್ಯ ನಿರ್ವಹಣೆಯಿಂದ ಅಪಘಾತಗಳು ಹಾಗೂ ಮರಣಗಳನ್ನು ತಪ್ಪಸಬಹುದು ಎಂದು ಹೇಳಿದರು.
ಸಂಚಾರ ನಿಯಮ ಪಾಲಿಸಿ: 1ನೇ ಅಧಿಕ ಸಿವಿಲ್ ನ್ಯಾಯಾಧೀಶ ಎಸ್.ಬಿ. ಕೆಂಬಾವಿ ಅವರು ಮಾತನಾಡಿ, ಒಂದು ಕ್ಷಣದ ನಿರ್ಲಕ್ಷ್ಯದಿಂದ ಅಪಘಾತಗಳಾಗಿ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿರುವುದನ್ನು ನಾವು ದಿನನಿತ್ಯ ಕಾಣುತ್ತೇವೆ. ಅದನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು. ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ ವೇಗದ ಪರಿಮಿತಿಯನ್ನು ಮೀರಬಾರದು ಎಂದು ಸಲಹೆ ನೀಡಿದರು.