Advertisement
ಐದೂ ಮೇಳಗಳಿಗೂ ನಿರಂತರ ಮೇ ತಿಂಗಳ ಕೊನೆಯ ವರೆಗೆ ಹರಕೆ ಆಟಗಳಿದ್ದು, ಉಡುಪಿ ಜಿಲ್ಲೆ , ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಹಲವೆಡೆ ಹರಕೆದಾರರ ಮನೆಗಳಲ್ಲಿ ಪ್ರದರ್ಶನಗಳು ನಿಗದಿಯಾಗಿದೆ.
Related Articles
Advertisement
ಮಂದಾರ್ತಿ ಮೇಳಗಳ ಜೊತೆಗೆ ಕೂಡಾಟ ಮಾತ್ರವಲ್ಲದೆ ಕರಾವಳಿಯ ವಿವಿಧೆಡೆ ಇತರ ಹರಕೆ ಯಕ್ಷಗಾನ ಮೇಳಗಳೊಂದಿಗೂ ಕೂಡಾಟಗಳಿರುತ್ತವೆ. ಹಿಂದೆ ಜಿದ್ದಾ ಜಿದ್ದಿನ ಜೋಡಾಟಗಳು ನಡೆಯುತ್ತಿತ್ತು, ಮಂದಾರ್ತಿ ಮೇಳ ಅತೀ ಹೆಚ್ಚು ಜೋಡಾಟದಲ್ಲಿ ಸ್ಪರ್ಧಿಸಿದ ಖ್ಯಾತಿಯನ್ನು ಹೊಂದಿದೆ. ಸದ್ಯ ಜಿದ್ದಿನ ಜೋಡಾಟಕ್ಕೆ ಯಕ್ಷಗಾನ ರಂಗದಲ್ಲಿ ಬ್ರೇಕ್ ಹಾಕಲಾಗಿದೆ.
ರಾತ್ರಿ 8.30 ಕ್ಕೆ ಚೌಕಿಯಲ್ಲಿ (ಬಣ್ಣ ಹಚ್ಚಿಕೊಳ್ಳುವ ತಾತ್ಕಾಲಿಕ ಕೋಣೆ) ಗಣಪತಿ ಪೂಜೆಯೊಂದಿಗೆ ಆರಂಭವಾಗುವ ಪ್ರದರ್ಶನ ಬಳಿಕ ಗಣೇಶನನ್ನು ರಂಗಸ್ಥಳಕ್ಕೆ ಒಯ್ದು ಅಲ್ಲಿ ಯಕ್ಷಗಾನ ರಥದ ಮೇಲಿರಿಸಿ ಪೂಜಿಸಲಾಗುತ್ತದೆ. ಬಾಲಗೋಪಾಲ ವೇಷಧಾರಿಗಳು ವಿಶೇಷವಾಗಿ ಗಣಪತಿಗೆ ಆರತಿ ಬೆಳಗುತ್ತಾರೆ. ಬಳಿಕ ಪೀಠಿಕಾ ಸ್ತ್ರೀ ವೇಷಧಾರಿಗಳ ನರ್ತನ, ಸಂಪ್ರದಾಯಿಕ ತೆರೆ ಒಡ್ಡೋಲಗ ನಡೆಸಿ ಪ್ರದರ್ಶನ ಆರಂಭಿಸಲಾಗುತ್ತದೆ.
ಮಂದಾರ್ತಿ ಕ್ಷೇತ್ರ ಮಹಾತ್ಮೆ, ದೇವಿ ಮಹಾತ್ಮೆ ಸೇರಿದಂತೆ ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನೇ ಮಂದಾರ್ತಿ ಮೇಳದವರು ಪ್ರದರ್ಶಿಸುತ್ತಾರೆ. ಕೂಡಾಟಗಳಲ್ಲಿ ಆಕರ್ಷಣೆಯಾಗಿ ಹರಕೆದಾರರು ತಮ್ಮ ನೆಚ್ಚಿನ ಪೌರಾಣಿಕ ಪ್ರಸಂಗಗಳನ್ನು ಸಂಯೋಜಿಸುತ್ತಾರೆ.
ಸಮರ್ಥ ಹಿರಿಯ ಕಲಾವಿದರು ಮತ್ತು ಯುವ ಕಲಾವಿದರನ್ನೊಳಗೊಂಡ 5 ತಂಡಗಳು ಪುರೋಹಿತರು ಮತ್ತು ಸಹಾಯಕರೊಂದಿಗೆ ನಿತ್ಯ ನಿರಂತರ ತಿರುಗಾಟದಲ್ಲಿರುತ್ತಾರೆ.
ಮೇಳಗಳಲ್ಲಿ ಪ್ರಮುಖ ಆಕರ್ಷಣೆಯ ಕಲಾವಿದರಾಗಿ ಭಾಗವತಿಕೆಯಲ್ಲಿ ನಗರ ಸುಬ್ರಹ್ಮಣ್ಯ ಆಚಾರ್, ಸದಾಶಿವ ಅಮೀನ್, ನಾಗೇಶ್ ಕುಲಾಲ್ ನಾಗರಕೋಡಿಗೆ, ಪರಮೇಶ್ವರ್ ನಾಯಕ್ ಕಾನಗೋಡ್ , ಅಣ್ಣಪ್ಪ ಶೆಟ್ಟಿ ನಗರ ಇದ್ದಾರೆ.
ಪಾತ್ರಧಾರಿಗಳಾಗಿ ಹಿರಿಯ ಕಲಾವಿದರಾದ ನರಾಡಿ ಭೋಜರಾಜ ಶೆಟ್ಟಿ, ಆಜ್ರಿ ಗೋಪಾಲ ಗಾಣಿಗ, ಅನಂತ ಹೆಗಡೆ ನಿಟ್ಟೂರು, ರಘುರಾಮ ಮಡಿವಾಳ, ನರಸಿಂಹ ನಾಯ್ಕ ಬೆದ್ರಾಡಿ , ಚಂದ್ರ ಕುಲಾಲ್, ಗಣಪತಿ ಭಟ್ ಗುಂಡಿಬೈಲು, ಜಗನ್ನಾಥ ಆಚಾರಿ ಎಳ್ಳಂಪಳ್ಳಿ ,ರಮೇಶ ಗಾಣಿಗ ಹಾರಾಡಿ, ವಿಷ್ಣುಮೂರ್ತಿ ಬಾಸ್ರಿ, ರಮಾಕಾಂತ ಮೂರೂರು , ಶ್ರೀಧರ ಗಾಣಿಗ ಉಪ್ಪುಂದ , ಮಹಾಬಲ ದೇವಾಡಿಗ, ಸತೀಶ್ ಹಾಲಾಡಿ, ಕಡಬ ಪೂವಪ್ಪ ಸೇರಿದಂತೆ 150 ಕ್ಕೂ ಹೆಚ್ಚು ಪ್ರತಿಭಾವಂತ ಯುವ ಕಲಾವಿದರ ದಂಡು ಇದೆ.
ಪರಂಪರೆಯನ್ನು ಬೆಳಗಿ ಯಕ್ಷಗಾನ ರಂಗಕ್ಕೆ ದಿಗ್ಗಜ ಕಲಾವಿದರನ್ನು ನೀಡಿದ ಮಂದಾರ್ತಿ ಮೇಳದಲ್ಲಿ ಇನ್ನಷ್ಟು ಪ್ರತಿಭಾವಂತ ಕಲಾವಿದರು ಬೆಳಗಲಿ. ಮರೆಯಾಗುತ್ತಿರುವ ಸಂಪ್ರದಾಯಗಳು, ನಾಟ್ಯಗಳು ಉಳಿದು ಯಕ್ಷ ಪ್ರೇಮಿಗಳಿಗೆ ರಸದೌತಣ ನೀಡಲಿ, ಯುವ ಕಲಾವಿದರು ಪಾತ್ರಗಳಿಗೆ ನ್ಯಾಯ ಒದಗಿಸಿ ಕಲೆಯನ್ನು ಇನ್ನಷ್ಟು ಶ್ರೀಮಂತಗೊಳಿಸಲಿ..