Advertisement
ಪ್ರಾಕೃತಿಕ ವಿಕೋಪದಿಂದಾಗಿ ಬೆಟ್ಟದ ರಸ್ತೆಗಳು ಸಂಪೂರ್ಣ ಹಾನಿಗೀಡಾಗಿ ಆ. 14ರಿಂದ ಬೆಟ್ಟ ಏರುವುದು ಅಸಾಧ್ಯವಾಗಿತ್ತು. ಈಗ ಪ್ರವಾಸಿಗರ ಸಂಚಾರದೊಂದಿಗೆ ಪ್ರವಾಸೋದ್ಯಮವನ್ನೇ ನಂಬಿ ಜೀವನ ಸಾಗಿಸುವ ಕುಟುಂಬಗಳಿಗೂ ಅನುಕೂಲವಾಗಿದೆ.
ರಸ್ತೆಗಳ ತಾತ್ಕಾಲಿಕ ದುರಸ್ತಿ ಮುಗಿದಿದೆ. ಶಾಶ್ವತ ಕಾಮಗಾರಿ ಪ್ರಗತಿಯಲ್ಲಿದೆ. ಜೀಪುಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರವಾಸಿಗರನ್ನು ಹೊತ್ತುಕೊಂಡು ಹಲವು ಜೀಪುಗಳು ಬೆಟ್ಟ ಏರುತ್ತಿವೆ. ನಾಲ್ಕು ರಸ್ತೆಗಳ ಪೈಕಿ ಕಾಲೂರು ಗ್ರಾಮದ ರಸ್ತೆ ಓಡಾಟಕ್ಕೆ ಹೆಚ್ಚು ಸೂಕ್ತ ಎನ್ನುತ್ತಾರೆ ಕೊಡಗು ಜಿ.ಪಂ. ಎಂಜಿನಿಯರ್. ರಸ್ತೆಯ ಇಕ್ಕೆಲಗಳಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಾಶಗೊಂಡಿರುವ ಹಲವು ಹೆಕ್ಟೇರ್ ಭೂ ಪ್ರದೇಶಗಳನ್ನು ವೀಕ್ಷಿಸಿಕೊಂಡು ಪ್ರವಾಸಿಗರು ಬೆಟ್ಟ ಏರುತ್ತಾರೆ. ಸಂಪರ್ಕ ರಸ್ತೆಯ ಎರಡೂ ಬದಿಗಳಲ್ಲಿ ಕಾಣಿಸುತ್ತಿದ್ದ ಎಕರೆಗಟ್ಟಲೆ ಕಾಫಿ ತೋಟ, ಗದ್ದೆ, ಪ್ರಕೃತಿ ರಮಣೀಯ ದೃಶ್ಯಗಳು ಮರೆಯಾಗಿ ಈಗ ಅಲ್ಲಿನ ಚಹರೆಯೇ ಬದಲಾಗಿದೆ. ಇದು ಕೂಡ ಪ್ರವಾಸಿಗರ ಗಮನ ಸೆಳೆಯುತ್ತಿದೆ.
Related Articles
ದೇಶದ ನಾನಾ ಭಾಗಗಳಿಂದ ಚಾರಣಕ್ಕೆಂದೂ ಮಾಂದಲಪಟ್ಟಿಗೆ ನೂರಾರು ಮಂದಿ ಆಗಮಿಸುತ್ತಾರೆ. ಇಲ್ಲಿನ ಗಿರಿ-ಕಂದರಗಳು ಚಾರಣಿಗರ ವಿಶೇಷ ಆಕರ್ಷಣೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಗಾಳಿಪಟ ಸಿನೆಮಾದಲ್ಲಿ ಮುಗಿಲಪೇಟೆ ಎಂದು ಬಣ್ಣಿಸಲಾಗಿತ್ತು.
Advertisement
ಮಾಂದಲಪಟ್ಟಿಯು ಪುಷ್ಪಗಿರಿ ವನ್ಯಧಾಮದ ವ್ಯಾಪ್ತಿಯೊಳಗಿದ್ದು, ಪಹಣಿ ಪತ್ರದಲ್ಲಿ ಬೆಟ್ಟದ ವಿಸ್ತೀರ್ಣ 8 ಸಾವಿರ ಹೆಕ್ಟೇರ್ ಎಂದು ನಮೂ ದಿಸಲಾಗಿದೆ. ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಗೆ ಸೇರಿರುವ ಈ ಪ್ರದೇಶವನ್ನು ವರ್ಷಕೊಮ್ಮೆ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗುತ್ತದೆ. ಈ ವರ್ಷ 11.50 ಲ.ರೂ.ಗೆ ನೀಡಲಾಗಿತ್ತು. ಗುತ್ತಿಗೆ ಪಡೆದು ಕೊಂಡವರು ಪಾರ್ಕಿಂಗ್ ಶುಲ್ಕದಿಂದ ಆದಾಯ ಸಂಗ್ರಹಿಸಿಕೊಳ್ಳಲು ಅವಕಾಶವಿದೆ.
ನಾಲ್ಕು ದಾರಿಗಳುಅಬ್ಬಿ ಪಾಲ್ಸ್-ದೇವಸ್ತೂರು-ಮಾಂದಲಪಟ್ಟಿ ಹಳೆ ರಸ್ತೆ ಸುಧಾರಣೆ ಕಂಡಿದೆ. ಕಾಲೂರು-ಪಚ್ಚಿನಾಡು-ಮುಟ್ಲು ರಸ್ತೆ, ನಿಡುದಾಣೆ ಗ್ರಾಮದಿಂದ ಸಂಪರ್ಕ ಕಲ್ಪಿಸುವ ಹೆಬ್ಬೇಟೆಗೇರಿ-ದೇವಸ್ತೂರು ರಸ್ತೆಯ ಕಾಲೂರು-ಮಾಂದಲಪಟ್ಟಿ ರಸ್ತೆ, ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ದೇವಸ್ತೂರು-ಕಾಳೂರು ರಸ್ತೆ ಹಾಗೂ ಪಚ್ಚಿನಾಡು, ಹಮ್ಮಿಯಾಲ, ಮುಟೂರು ಭಾಗದ ರಸ್ತೆಗಳು ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾಗಿದ್ದವು. ಸೌಂದರ್ಯಕ್ಕೆ ಧಕ್ಕೆಯಾಗಿಲ್ಲ
ಹಲವು ಬಾರಿ ಮಾಂದಲಪಟ್ಟಿ ಬೆಟ್ಟ ಏರಿದ್ದೇನೆ. ಪ್ರಾಕೃತಿಕ ವಿಕೋಪದ ಬಳಿಕ ಮೊದಲ ಸಲ ತೆರಳಿದ್ದೇನೆ. ಬೆಟ್ಟದ ಸೌಂದರ್ಯಕ್ಕೆ ಧಕ್ಕೆ ಆಗಿಲ್ಲ. ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ಸಾಕಷ್ಟು ಹಾನಿಯಾಗಿದೆ. ಈಗ ಜೀಪು ಮಾತ್ರ ಬೆಟ್ಟ ಏರಬಲ್ಲುದು.
ಶಶಿಕುಮಾರ್ ಸುಳ್ಯ, ಚಾರಣಿಗ